ಮುಧೋಳದಲ್ಲಿ ಅರ್ಧಕ್ಕೆ ನಿಂತ ಅಂಗನವಾಡಿ ಕಟ್ಟಡ
ಯಲಬುರ್ಗಾ: ತಾಲೂಕಿನ ಮುಧೋಳ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ಹಲವು ವರ್ಷಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಪೂರ್ಣಗೊಳಿಸುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಇಲ್ಲಿನ ಮುಖಂಡರಾದ ಛತ್ರಪ್ಪ ಮುಧೋಳ, ನಾಗರಾಜ ಮ್ಯಾಗೇರಿ, ಶರಣಪ್ಪ ಮುಧೋಳ, ಯಮನೂರಪ್ಪ ಅರಬರ ಮತ್ತಿತರರು ಆರೋಪಿಸಿದ್ದಾರೆ.
ಎರಡ್ಮೂರು ವರ್ಷಗಳ ಹಿಂದೆ ಗ್ರಾಮ ಸ್ವರಾಜ್ ಯೋಜನೆ ಅಡಿಯಲ್ಲಿ ಆರಂಭಗೊಂಡಿದ್ದ ಈ ಕಟ್ಟಡವು ವಿವಿಧ ಹಂತದ ಅನುದಾನದಲ್ಲಿ ಪ್ರತಿಶತ ತೊಂಬತ್ತರಷ್ಟು ನಿರ್ಮಾಣವಾಗಿ ಅಂತಿಮ ಕೆಲಸ ಬಾಕಿ ಉಳಿದಿದೆ. ಆದರೆ, ಈ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದ ವ್ಯಕ್ತಿ ಮೃತನಾಗಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಹೇಳಲಾಗುತ್ತಿದೆ.
ಪೂರ್ಣಗೊಳಿಸಲು ಗ್ರಾಮಸ್ಥರ ಆಗ್ರಹ: ಈ ಕಟ್ಟಡ ಗುತ್ತಿಗೆ ಪಡೆದ ವ್ಯಕ್ತಿ ಪೂರ್ಣಗೊಳಿಸುವ ಮುನ್ನವೇ ಲಭ್ಯವಿದ್ದ ಅನುದಾನ ಬಳಸಿಕೊಂಡಿದ್ದಾರೆಂದು ಸ್ಥಳೀಯ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಗುತ್ತಿಗೆ ಪಡೆದ ವ್ಯಕ್ತಿ ಮೃತಪಟ್ಟು ಎರಡು ವರ್ಷ ಕಳೆದರೂ ಕಟ್ಟಡ ಮುಕ್ತಾಯಕ್ಕೆ ಅಧಿಕಾರಿಗಳು ಪರ್ಯಾಯ ಕ್ರಮಕ್ಕೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯಿತಿ ಪಕ್ಕದಲ್ಲಿಯೇ ಇರುವ ಈ ಕಟ್ಟಡವು ಅಂಗನವಾಡಿ ಮಕ್ಕಳಿಗೆ ಅತ್ಯವಶ್ಯಕವಾಗಿದ್ದರಿಂದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಥವಾ ಗ್ರಾಪಂ ವತಿಯಿಂದ ಅನುದಾನ ಬಿಡುಗಡೆ ಮಾಡಿ ಪೂರ್ಣಗೊಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ಬಹುತೇಕ ಭಾಗ ಮುಕ್ತಾಯವಾಗಿ ಕೇವಲ ಸ್ವಲ್ಪ ಭಾಗ ಉಳಿದ ಈ ಕಟ್ಟಡ ಕಾಮಗಾರಿಯು ಕಳಪೆಯಾಗಿದ್ದರಿಂದ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಅಲ್ಲದೇ ಕಿಡಿಗೇಡಿಗಳ ಅಕ್ರಮ ಚಟುವಟಿಕೆಗೆ ತಾಣವಾದಂತಿದೆ. ಈ ಕಾರಣದಿಂದಾಗಿ ಸಂಬಂಧಪಟ್ಟವರು ತ್ವರಿತಗತಿಯಲ್ಲಿ ಇತ್ತ ಕಡೆ ಹೆಚ್ಚಿನ ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ, ಜಿಪಂ ಸದಸ್ಯರಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಇದುವರೆಗೂ ಯಾವ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಈ ಕಾಮಗಾರಿ ಕಟ್ಟಡವನ್ನು ಪೂರ್ಣಗೊಳಿಸುವಲ್ಲಿ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

