ಬಳ್ಳಾರಿ

ಜನವಿರೋಧಿ ನೀತಿ ಖಂಡಿಸಿ ಅ. 7ರಂದು ರಾಜ್ಯಬಂದ್

Published On :

ಬಳ್ಳಾರಿ: ಕೇಂದ್ರ ಸರ್ಕಾರದ ನೂತನ ಭೂ ಸ್ವಾಧೀನ ಕಾಯ್ದೆ ಹಾಗೂ ಆಹಾರ, ತೈಲ, ರಸಗೊಬ್ಬರಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ಕಡಿತಗೊಳಿಸುವ ನಿರ್ಧಾರ ಖಂಡಿಸಿ, ಸಿಪಿಐ, ಸಿಪಿಐಎಂ ಹಾಗೂ ಎಡಪಕ್ಷಗಳಿಂದ ಅ. 7ರಂದು ರಾಜ್ಯ ವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ಸಬ್ಸಿಡಿ ಕಡಿತ ನೀತಿ ವಿರೋಧಿಸಿ, ಸಾರ್ವಜನಿಕ ಪಡಿತರ ವ್ಯವಸ್ಥೆ ಸಬಲೀಕರಣಗೊಳಿಸಲು ಹಾಗೂ ಕನಿಷ್ಠ ರು. 10 ಸಾವಿರ ಮಾಸಿಕ ಕೂಲಿ, ವೇತನ ನಿಗದಿಪಡಿಸಲು ಒತ್ತಾಯಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಮಂಡಿಸಿರುವ ಭೂ ಸ್ವಾಧೀನ ಕಾಯ್ದೆಯು ಕೈಗಾರಿಕೋದ್ಯಮಿಗಳ ಹಿತ ಕಾಯುವಂತಿದೆ. ವಿಶೇಷ ಕೈಗಾರಿಕಾ ವಲಯ, ರೇಲ್ವೆ ಕಾಮಗಾರಿ ಸೇರಿದಂತೆ 17 ವಿವಿಧ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಇದರಿಂದ ಹೊರಗಿಡಲಾಗಿದೆ. ವಿಶೇಷ ಕೈಗಾರಿಕಾ ವಲಯದಡಿ ಕೆಐಎಡಿಬಿಯಂತಹ ಸಂಸ್ಥೆಗಳ ಮೂಲಕ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಬಹುದಾಗಿದ್ದು, ರೈತರು ಹೆಚ್ಚಿನ ಪರಿಹಾರ ಕೇಳುವಂತಿಲ್ಲ. ಆದ್ದರಿಂದ ಈ ಕಾಯ್ದೆಯಿಂದ ರೈತರಿಗೆ ನ್ಯಾಯ ದೊರೆಯುವುದಿಲ್ಲ ಎಂದು ತಿಳಿಸಿದರು.
ಬಡವರಿಗೆ ನೀಡುವ ಸಬ್ಸಿಡಿ ಕಡಿತ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಕೈಗಾರಿಕೋದ್ಯಮಿಗಳಿಗೆ ನೀಡುತ್ತಿರುವ ಲಕ್ಷ ಕೋಟಿ ರುಪಾಯಿ ಸಬ್ಸಿಡಿ ಕಡಿತದ ಬಗ್ಗೆ ಚಕಾರವೆತ್ತುತ್ತಿಲ್ಲ. ಶ್ರೀಮಂತರು, ಉದ್ಯಮಿಗಳ ಪರ ಇತರೆ ನೀತಿಗಳು ರೂಪಿತವಾಗುತ್ತಿವೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದಿಂದ ಯಾವುದೇ ಆತಂಕ ಇಲ್ಲ ಎಂದು ಹಣಕಾಸು ಸಚಿವರು ಹೇಳುತ್ತಿರುವುದು ಸರಿಯಲ್ಲ. 400 ಕೋಟಿ ಡಾಲರ್ ವಿದೇಶಿ ಸಾಲದ ಹೊರೆ ಇದ್ದರೂ ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಬದಲಿಗೆ ದೇಶದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಉತ್ಪಾದನೆ ಮಾಡಲಿ. ಕೋಲಾರದಲ್ಲಿ ಚಿನ್ನದ ಗಣಿ ಕಾರ್ಯಾರಂಭ ಮಾಡಿಸಲಿ. ಇದನ್ನು ಆಸ್ಟ್ರೇಲಿಯಾ ಮೂಲದ ಸಂಸ್ಥೆಗೆ ಮಾರಾಟ ಮಾಡುವ ಪ್ರಸ್ತಾವನೆ ಕೈಬಿಡಲಿ ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರದ ಈ ಎಲ್ಲ ಜನವಿರೋಧಿ ನೀತಿಗಳನ್ನು ಖಂಡಿಸಿ, ಅ. 7ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸೆ. 11 ರಂದು ಎಡಪಕ್ಷಗಳ ಜಿಲ್ಲಾ ಸಮಿತಿಯ ಸಭೆ ಕರೆಯಲಾಗಿದೆ ಎಂದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ಬಸವರಾಜ್, ಸಿಐಟಿಯು ಮುಖಂಡ ಜೆ. ಸತ್ಯಬಾಬು, ರಘುನಾಥ, ಯಲ್ಲಪ್ಪ ಹಾಗೂ ಇತರರಿದ್ದರು.
ವಿಶೇಷ ಕೈಗಾರಿಕಾ ವಲಯದಡಿ ಕೆಐಎಡಿಬಿಯಂತಹ ಸಂಸ್ಥೆಗಳ ಮೂಲಕ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಬಹುದಾಗಿದ್ದು, ರೈತರು ಹೆಚ್ಚಿನ ಪರಿಹಾರ ಕೇಳುವಂತಿಲ್ಲ. ಆದ್ದರಿಂದ ಈ ಕಾಯ್ದೆಯಿಂದ ರೈತರಿಗೆ ನ್ಯಾಯ ದೊರೆಯುವುದಿಲ್ಲ.
-ಎಸ್. ಪ್ರಸನ್ನಕುಮಾರ್,
ಸಿಪಿಎಂ ರಾಜ್ಯ ಕಾರ್ಯದರ್ಶಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.