ಪಿಂಚಣಿ ಖಾಸಗೀಕರಣ: ಸರ್ಕಾರಿ ನೌಕರರ ವಿರೋಧ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 2
ಪಿಂಚಣಿ ಖಾಸಗೀಕರಣ ಮಸೂದೆಯನ್ನು ಸಂಸತ್ನಲ್ಲಿ ಮಂಡಿಸುತ್ತಿರುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪತ್ತಾರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಹೊಂದಿದ ನೌಕರರಿಗೆ ಈಗಾಗಲೇ ಇದ್ದ ನಿಗದಿತ ಖಚಿತ ಪಿಂಚಣಿ ಪದ್ಧತಿಯನ್ನು ರದ್ದುಮಾಡಿ, ಹೊಸ ಪದ್ಧತಿಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಉದೇಶಕ್ಕಾಗಿ ಈ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ನೌಕರರ ವಿರೋಧಿ ನೀತಿ: ಈ ಹೊಸ ಪಿಂಚಣಿ ನೀತಿಯ ಬಿಲ್ಲನ್ನು ಲೋಕಸಭೆಯಲ್ಲಿ ಕಾಯ್ದೆಯನ್ನಾಗಿ ತರುವುದಕ್ಕೆ ದೇಶದ್ಯಾಂತ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಹಾಗೂ ಲೋಕಸಭೆ ಮತ್ತು ರಾಜ್ಯಸಭೆಯ ಪ್ರಗತಿಪರ ಸಂಸತ್ ಸದಸ್ಯರು ವಿರೋಧಿಸುತ್ತಾ ಬಂದಿದ್ದಕ್ಕೆ ಹೊಸ ಪಿಂಚಣಿ ಕಾಯ್ದೆಯನ್ನು ತಡೆಯಲಾಗಿತ್ತು. ಹೀಗಿದ್ದರೂ ಸಹ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಜಾರಿಗೆ ತಂದಿರುವುದು ನೌಕರರ ಜನವಿರೋಧಿ ನೀತಿಯಾಗಿದೆ ಎಂದು ಹೇಳಿದರು.
ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ಚಂದ್ರಪ್ಪ ಕಂಪ್ಲಿ, ರಾಜ್ಯ ಕಾರ್ಯದರ್ಶಿ ಸುನಿತಾ ಅಣ್ವೇಕರ್ ಸಭೆಯಲ್ಲಿ ಮಾತನಾಡಿದರು. ನೌಕರರ ಒಕ್ಕೂಟದ ತಾಲೂಕು ಗೌರಧ್ಯಕ್ಷ ಬಿ. ತಾಯಪ್ಪ ನಾಯಕ, ಒಕ್ಕೂಟದ ಮುಖಂಡ ಬಿ. ಚನ್ನಬಸಪ್ಪ, ಎಲ್ಐಸಿಯ ಪ್ರಕಾಶ, ಶಿಲ್ಪಾ, ಸೌಭಾಗ್ಯ ಲಕ್ಷ್ಮಿ, ಟಿ. ಲೀಲಾ, ಎಂ. ನಾಗರಾಜ್, ಕಳಕನಗೌಡ ಪಾಟೀಲ್, ತಿಮ್ಮಯ್ಯ, ಮಲ್ಲಿಕಾರ್ಜುನ, ಎಚ್. ತ್ರಿಶಂಕು, ವೈ. ವೆಂಕಟೇಶ್ವರಲು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ್ ರಮೇಶ್ ಕೋನರಡ್ಡಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಹಗರಿಬೊಮ್ಮನಹಳ್ಳಿ
ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸುತ್ತಿರುವ ಪಿಂಚಣಿ ಖಾಸಗೀಕರಣ ಮಸೂದೆಯ ಪ್ರತಿಯನ್ನು ತಾಲೂಕು ಕಚೇರಿ ಮುಂದೆ ಸುಟ್ಟುಹಾಕುವ ಮೂಲಕ ಪ್ರಸ್ತುತ ಮಸೂದೆಯನ್ನು ಅಂಗೀಕರಿಸಬಾರದು ಎಂದು ಅಖಿಲ ಭಾರತ ಸರ್ಕಾರಿ ನೌಕರರ ಒಕ್ಕೂಟದ ಕಾರ್ಯಕರ್ತರು ಸೋಮವಾರ ಮಧ್ಯಾಹ್ನ ಪಟ್ಟಣದಲ್ಲಿ ಪ್ರತಿಭಟಿಸಿದರು.
ಒಕ್ಕೂಟದ ಮುಖಂಡ ಈ. ಕೃಷ್ಣಮೂರ್ತಿ ಮಾತನಾಡಿ, ನೌಕರರ ವೇತನದಿಂದ ಕಡಿತ ಮಾಡಿ ಉಳಿಸುವ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಬಂಡವಾಳವಾಗಿ ತೊಡಗಿಸುವುದು ಎಂದರೆ ಅದೊಂದು ರೀತಿಯಲ್ಲಿ ಜೂಜೂಟವಾಡಿದಂತೆಯೇ ಸರಿ. 60 ವರ್ಷಗಳ ಕಾಲ ಸರ್ಕಾರಿ ಸೇವೆ ಮಾಡಿ ನಿವೃತ್ತಿ ಹೊಂದಿದ ನೌಕರ ತನ್ನ ನಿವೃತ್ತಿ ಜೀವನವನ್ನು ಸುಖಮಯವಾಗಿ ಕಳೆಯಲು ಪಿಂಚಣಿ ವ್ಯವಸ್ಥೆ ಇದೆ. ಆದರೆ ಇವತ್ತು ಇಂತಹ ವ್ಯವಸ್ಥೆಯನ್ನೇ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಎಲ್ಲ ನೌಕರರು ಖಂಡಿಸಬೇಕು ಎಂದು ಮಸೂದೆ ಅಂಗಿಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ರಂಗನಾಥ ಹವಾಲ್ದಾರ ಮಾತನಾಡಿ, ನೌಕರರ ಬದುಕಿನಲ್ಲಿ ಚೆಲ್ಲಾಟವಾಡುವ ಕೇಂದ್ರ ಸರ್ಕಾರದ ಈ ಜನವಿರೋಧಿ ನೀತಿಯ ವಿರುದ್ಧ ಎಲ್ಲ ನೌಕರರು ಬೀದಿಗಿಳಿದು ಪ್ರತಿಭಟಿಸದಿದ್ದರೆ ಮುಂದೆ ನಮ್ಮ ಬದುಕಿಗೆ ಯಾವುದೇ ಭದ್ರತೆ ಸಿಗುವುದಿಲ್ಲ. ಒಂದು ವೇಳೆ ಪಿಂಚಣಿ ಖಾಸಗಿಕರಣ ಮಸೂದೆ ಅಂಗೀಕಾರವಾದರೆ ನಮ್ಮ ವೇತನದಲ್ಲಿ ಕಡಿತಗೊಳಿಸಿದ ಹಣ ಪಿಂಚಣಿ ರೂಪದಲ್ಲಿ ಮುಂದೆ ಸಿಗುವ ಲಕ್ಷಣಗಳು ಕಾಣಿಸದು. ಪಿಂಚಣಿದಾರರಿಗೆ ಮಾರಕವಾಗುವ ಈ ಮಸೂದೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.
ಒಕ್ಕೂಟದ ಭೀಮಸೇನಪ್ಪ, ನಿವೃತ್ತ ನೌಕರರ ಸಂಘದ ಸಿದ್ದಯ್ಯ, ತೋಟಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

