ಬಳ್ಳಾರಿ

ಸಚಿವರ ಕ್ಷೇತ್ರದಲ್ಲೇ ನೆಲಕಚ್ಚಿದ ನರೇಗಾ..!

Published On :

ಹೂವಿನಹಡಗಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ)  ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಅವರ ಕ್ಷೇತ್ರದಲ್ಲಿಯೇ ಅಕ್ಷರಶಃ ನರಳಾಡುತ್ತಿದೆ. ತಾಲೂಕಿನ 24 ಗ್ರಾಪಂನಲ್ಲಿ ಕೆಲಸಕ್ಕೆ ಕಾರ್ಮಿಕರ ಬೇಡಿಕೆ ಸಲ್ಲಿಕೆಯಾಗದೇ ಮಾನವ ದಿನಗಳ ಸೃಜಿಸುವ ಬಳ್ಳಾರಿ ಜಿಲ್ಲೆಯಲ್ಲಿ ಹೂವಿನಹಡಗಲಿ ತಾಲೂಕು ಕೊನೆಯ ಸ್ಥಾನದಲ್ಲಿದೆ.
ಹೌದು... ಇದರಿಂದಾಗಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಮಂಗಳೂರು, ಗೋವಾ ಕಾಫಿ ಸೀಮೆಗಳಿಗೆ ಗುಳೆ ಹೋಗುವುದನ್ನು ತಪ್ಪಿಸುವುದು ಹಾಗೂ ಸಕಾಲಕ್ಕೆ ದುಡಿವ ಕೈಗಳಿಗೆ ಕೆಲಸ ನೀಡುವುದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳ ಮಹತ್ವದ ನರೇಗಾ ಯೋಜನೆ ತಾಲೂಕಿನಲ್ಲಿ ಭಾರಿ ಹಿನ್ನಡೆ ಕಂಡಿದೆ.
ಗ್ರಾಪಂ, ಗ್ರಾಮ ಸಭೆಗಳಲ್ಲಿ ಚರ್ಚೆ ಮಾಡುವ ಮೂಲಕ ನರೇಗಾ ಕ್ರಿಯಾಯೋಜನೆ ಸಿದ್ಧಪಡಿಸಬೇಕೆಂಬ ನಿಯಮಗಳನ್ನು ಗಾಳಿಗೆ ತೂರಿ, ಗ್ರಾಪಂ ಸದಸ್ಯರು ಇಚ್ಛೆಗೆ ಬಂದಂತೆ ಕ್ರಿಯಾಯೋಜನೆ ತಯಾರಿಸಿಕೊಂಡು ಅವರೇ ಆ ಕಾಮಗಾರಿಗಳನ್ನು ಯಂತ್ರಗಳ ಮೂಲಕ ರಾತ್ರೋರಾತ್ರಿ ಮಾಡಿ ಮುಗಿಸುವ ಕಾಯಕದಲ್ಲಿ ನಿರತರಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ಕಾರ್ಮಿಕರ ಹೆಸರಿನಲ್ಲಿ ಹಾಜರಾತಿ: ಖಾತ್ರಿ ಕಾಮಗಾರಿ ಆದೇಶ ಪತ್ರಗಳನ್ನು ತಾಪಂ ಕಚೇರಿಯಲ್ಲಿ ಸದಸ್ಯರೇ ನೇರವಾಗಿ ಪಡೆಯುತ್ತಿದ್ದಾರೆ. ಉಳಿದಂತೆ ಕಾರ್ಮಿಕರ ಉದ್ಯೋಗ ಖಾತ್ರಿ ಕಾರ್ಡ್‌ಗಳನ್ನು ಅವರಿಂದ ಪಡೆದು ಕಾರ್ಮಿಕರ ಹೆಸರಿನಲ್ಲಿ ಹಾಜರಾತಿ ತೋರಿಸುತ್ತಾರೆ. ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಕೂಲಿ ಸಂದಾಯವಾಗಿದ್ದರೂ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೆ ಹಣ ಬಿಡಿಸಿಕೊಡುವ ಸಂಪ್ರದಾಯ ತಾಲೂಕಿನಲ್ಲಿದೆ.
ತಾಲೂಕಿನ ದೇವಗೊಂಡನಹಳ್ಳಿ, ನಾಗತಿ ಬಸಾಪುರ ಗ್ರಾಪಂನಲ್ಲಿ ಸಾಕಷ್ಟು ಅವ್ಯವಹಾರ ಸಾಬೀತಾಗಿದೆ. ಐಪಿಸಿ 486 ಕಾಯ್ಕೆ ಅನ್ವಯ ಉದ್ದೇಶ ಪೂರ್ವಕವಾಗಿ ಖೊಟ್ಟಿ ದಾಖಲೆ ಸೃಷ್ಟಿಸಿ ನಂಬಿಕೆ ದ್ರೋಹ ಬಗೆದು ಹಣ ಲಪಟಾಯಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ನಾಗತಿಬಸಾಪುರ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒ ತಾಂತ್ರಿಕ ಸಹಾಯಕರು ನಿಯಮ ಮೀರಿ ರು. 6.25 ಲಕ್ಷ ಪಾವತಿ ಮಾಡಿರುವುದನ್ನು ವಸೂಲಿಗಾಗಿ ನೋಟಿಸ್ ನೀಡಿದೆ ಎಂದು ತಾಪಂ ಇಓ ಸಿದ್ದೇಶ್ವರ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಖಾತ್ರಿ ಹಣವನ್ನು ಸರ್ಕಾರಕ್ಕೆ ನಿಗದಿತ ಸಮಯದೊಳಗೆ ಪಾವತಿ ಮಾಡದಿದ್ದರೆ ಆಸ್ತಿ ಜಪ್ತಿ ಮಾಡುತ್ತೇವೆ. ಖಾತ್ರಿ ಕಾಮಗಾರಿ ಮಾಡಲು ಸುಮಾರು 16 ದಾಖಲೆ ನೀಡಬೇಕು. ಕಾಮಗಾರಿ ಆರಂಭಿಸುವ ಮುನ್ನವೇ 8 ದಾಖಲೆ ಸಂಗ್ರಹಿಸಲಾಗುವುದು. ಖೊಟ್ಟಿ ದಾಖಲೆ ಸೃಷ್ಟಿ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗುವ ಭಯದಿಂದ ಗ್ರಾಪಂ ಪಿಡಿಒಗಳು ಖಾತ್ರಿ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಖಾತ್ರಿ ಕಾಮಗಾರಿ ಪ್ರಗತಿ ಹಾಗೂ ಮಾನವ ದಿನಗಳ ಸೃಜನೆಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ಸಿದ್ದೇಶ್ವರ.
ತಾಲೂಕಿನ ನಂದಿಹಳ್ಳಿ ಗ್ರಾಪಂನಲ್ಲಿ ಅವ್ಯವಹಾರದ ಕುರಿತು ತನಿಖೆ ನಡೆಸಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಇಲ್ಲಿಯೂ ತಪ್ಪಿತಸ್ಥರು ಯಾರೇ ಇರಲಿ ಕೈ ಬಿಡುವ ಪ್ರಶ್ನೆ ಇಲ್ಲ. ಮೇಲಧಿಕಾರಿಗಳಿಂದ ಆದೇಶ ಬಂದ ಕೂಡಲೇ ಕ್ರಮ ಕೈಗೊಳ್ಳುತ್ತೇವೆಂದು ಹೇಳುತ್ತಾರೆ.
ಆರೋಪಿ ವಿರುದ್ಧ ಕ್ರಮ: ತಾಲೂಕಿನ 24 ಗ್ರಾಪಂಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡದೇ ಸರ್ಕಾರದ ಸಹಾಯಧನ ಪಡೆದಿರುವವರ ವಿರುದ್ಧವೂ ಕ್ರಮ ಕೈಗೊಂಡು ಇಲ್ಲಿಯೂ ಕ್ರಿಮಿನಲ್ ಕೇಸ್ ಹಾಗೂ ಒಟ್ಟಾರೆಯಾಗಿ ಖಾತ್ರಿ ಕಾಮಗಾರಿ ವಿಷಯದಲ್ಲಿ ಕಠಿಣ ಕ್ರಮ ಕೈಗೊಂಡು ಕಾರ್ಮಿಕರಿಗೆ ಕೈಗೆ ಕೆಲಸ ನೀಡುವ ಸರ್ಕಾರದ ಉದ್ದೇಶವನ್ನು ಸಾಕಾರಗೊಳಿಸುತ್ತಿದ್ದಾರೆ.
ತಾಲೂಕಿನ 24 ಗ್ರಾಪಂಗಳಲ್ಲಿ ಸುಮಾರು 18ಕ್ಕೂ ಹೆಚ್ಚು ಗ್ರಾಪಂ ಕಾಂಗ್ರೆಸ್ ವಶದಲ್ಲಿದ್ದು ಸದಸ್ಯರೇ ನರೇಗಾ ಕಾಮಗಾರಿ ಮಾಡಲು ದುಂಬಾಲು ಬಿದ್ದಿದ್ದಾರೆ. ಇದು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ಕಾಮಗಾರಿ ನೀಡದಿದ್ದರೆ ರಾಜಕೀಯ ನಾಯಕರ ಒತ್ತಡಗಳಲ್ಲಿ ಸಿಲುಕಿರುವ ಅಧಿಕಾರಿಗಳು ನಿಜಕ್ಕೂ ನರೇಗಾದಲ್ಲಿ ನರಳಾಡುತ್ತಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

-ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.