ವಿವಿ ಗೊಂದಲ: ರಾಜ್ಯಪಾಲರ ಮಧ್ಯೆ ಪ್ರವೇಶಿಸಲಿ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ಆಡಳಿತಾತ್ಮಕ ಗೊಂದಲದಿಂದಾಗಿ ವಿಶ್ವವಿದ್ಯಾಲಯದ ಘನತೆಗೆ ಕುಂದು ತರುವ ಆನೇಕ ವಿದ್ಯಮಾನಗಳು ನಡೆಯುತ್ತಿದ್ದು, ಕೂಡಲೇ ರಾಜ್ಯಪಾಲರು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ ಗೊಂದಲ, ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ಶುದ್ಧಿಕರಣ ಹೋರಾಟ ವೇದಿಕೆಯ ರಾಜ್ಯಾಧ್ಯಕ್ಷ ಕೃಷ್ಣಪ್ಪ ಗುಣಸಾಗರ ಹಾಗೂ ಹಿ.ಮ. ಗುರುಬಸವರಾಜ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿವಿ ಅವರಣದಲ್ಲಿನ ಘಟನೆಗಳಿಂದಾಗಿ ಸಾರ್ವಜನಿಕವಾಗಿ ವಿವಿಯ ಘನ ಉದ್ದೇಶಗಳಿಗೆ ಧಕ್ಕೆ ಬರವಂತಿದೆ ಎಂದು ವಿಷಾದ ವ್ಯಕ್ತಪಡಿಸಿ, ರಾಜ್ಯಪಾಲರು ತುರ್ತಾಗಿ ಮಧ್ಯೆ ಪ್ರವೇಶಿಸುವುದು ಅಗತ್ಯ ಎಂದಿದ್ದಾರೆ. ವಿವಿಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಕಾರ್ಯಾಂಗ ಮತ್ತು ವಿವಿ ಕಾಯ್ದೆ ನಡುವೆ ಆನೇಕ ವೈರುಧ್ಯಗಳಿರುವುದೇ ಪ್ರಸಕ್ತ ಬಿಕ್ಕಟ್ಟಿಗೆ ಮೂಲ ಕಾರಣವಾಗಿದೆ. ವಿವಿಯ ಪರಮೋಚ್ಚ ಮಂಡಳಿಯಾದ ಸಿಂಡಿಕೇಟ್ ಸಭೆಯಲ್ಲಿ ಕೈಗೊಂಡಿರುವ ನಿರ್ಣಯವನ್ನು ಸರ್ಕಾರ ತಿರಸ್ಕರಿಸುವುದಾದರೆ ಸಿಂಡಿಕೇಟ್ ಮಂಡಳಿಯ ಅವಶ್ಯಕತೆ ಇದೆಯೇ? ಸರ್ಕಾರವೇ ವಿವಿಗಳ ಆಡಳಿತಾತ್ಮಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಾದರೆ ಕುಲಪತಿ ಹಾಗೂ ಸಿಂಡಿಕೇಟ್ ಅವಶ್ಯಕತೆ ಯಾಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ: 23 ಜನರ ಬಂಧನ
ಬಳ್ಳಾರಿ: ಇಸ್ಪೀಟ್ ಅಡ್ಡೆ ಮೇಲೆ ಕುರುಗೋಡು ಪೊಲೀಸರು ದಾಳಿ ಮಾಡಿ, 23 ಜನರನ್ನು ಬಂಧಿಸಿ, ಅವರಿಂದ ರು. 18,730 ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಬಳ್ಳಾರಿ ತಾಲೂಕಿನ ಮುಷ್ಟಗಟ್ಟೆ ಗ್ರಾಮದಲ್ಲಿ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಾರೆಪ್ಪ ಸೇರಿದಂತೆ 23 ಜನರನ್ನು ಬಂಧಿಸಿ, ರು. 18,730 ವಶಪಡಿಸಿಕೊಂಡಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ: ಮಾಂಗಲ್ಯ ದೋಚಿದ ಕಳ್ಳರು
ಬಳ್ಳಾರಿ: ದೇವಸ್ಥಾನದಿಂದ ಮನೆಗೆ ಹೋಗುತ್ತಿರುವ ಮಹಿಳೆಯೋರ್ವಳ ಕತ್ತಿನಲ್ಲಿದ್ದ 20 ಗ್ರಾಂ ಬಂಗಾರದ ಮಾಂಗಲ್ಯವನ್ನು ಬೈಕ್ನಲ್ಲಿ ಬಂದ ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ಸತ್ಯನಾರಾಯಣ ಪೇಟೆ ಎರಡನೇ ಕ್ರಾಸ್ನಲ್ಲಿ ನಡೆದಿದೆ. ಸತ್ಯನಾರಾಯಣ ಪೇಟೆಯ 2ನೇ ಕ್ರಾಸ್ನ ನಿವಾಸಿ 46 ವರ್ಷದ ಪ್ರೀತಿ ಎನ್ನುವವರು ಸೋಮವಾರ ಮಧ್ಯಾಹ್ನ 12.15ರ ಸುಮಾರಿಗೆ ದೇವಸ್ಥಾನದಿಂದ ಮನೆಗೆ ಹೋಗುತ್ತಿರುವಾಗ ಬೈಕ್ನಲ್ಲಿ ಬಂದ ಕಳ್ಳರು ಮಾಂಗಲ್ಯ ಅಪಹರಿಸಿಕೊಂಡು ಪರಾರಿಯಾಗಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳನಿಗೆ ಆರು ತಿಂಗಳು ಜೈಲು
ಹೂವಿನಹಡಗಲಿ: ತಾಲೂಕಿನ ಹೊಳಗುಂದಿಯ ಸಮಾಹಿಪ್ರಾ ಶಾಲೆಯ ಹಳೇ ಕಟ್ಟಡ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದ ಆರೋಪಿ ಗ್ರಾಮದ ಮಹಾಬಲೇಶ್ವರ ಎಂಬಾತನಿಗೆ 6 ತಿಂಗಳು ಜೈಲು, ಒಂದು ಸಾವಿರ ರು. ದಂಡ ವಿಧಿಸಿ ಹೂವಿನಹಡಗಲಿ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ.
ಶಾಲೆಯ 5 ಹಳೇ ಕೊಠಡಿ ಸಾಮಗ್ರಿಗಳ ಕಳ್ಳತನ ನಡೆದಿರುವ ಕುರಿತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸುದೇಶ ರಾಜಾರಾಮ್ ಪರದೇಶಿ ಅವರು ಕಳ್ಳತನ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆಂದು ಸರ್ಕಾರಿ ಅಭಿಯೋಜಕ ಜಗದೀಶ ಬಿಸೇರೊಟ್ಟಿ ತಿಳಿಸಿದ್ದಾರೆ.
ಬೆಟ್ಟಿಂಗ್: ಓರ್ವನ ಬಂಧನ
ಬಳ್ಳಾರಿ: ಇಲ್ಲಿಯ ಎಕ್ಸ್ಸರ್ವೀಸ್ಮೆನ್ ಕಾಲನಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ನಿರತನಾಗಿದ್ದ ಓರ್ವನನ್ನು ಪೊಲೀಸರು ಬಂಧಿಸಿ, ಆತನಿಂದ ರು. 11,980, 8 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಶ್ರೀಕಾಂತ್ ಎಕ್ಸ್ಸರ್ವೀಸ್ಮೆನ್ ಕಾಲನಿಯಲ್ಲಿ ಮಹಮ್ಮದ್ ಶೇಟ್ ಅವರ ಬಾಡಿಗೆ ಮನೆಯಲ್ಲಿ ಕೌಂಟಿ ಮ್ಯಾನ್ ನೋಡುತ್ತ, ಫೋನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಕೊಳ್ಳುತ್ತ, ಚೀಟಿಯಲ್ಲಿ ಬರೆದುಕೊಳ್ಳುತ್ತಿದ್ದಾಗ ಬಳ್ಳಾರಿ ಡಿವೈಎಸ್ಪಿ ಹಾಗೂ ಪಿಎಸ್ಐಗಳು ದಾಳಿ ಮಾಡಿದ್ದಾರೆ. ರು. 11,980 ಹಾಗೂ 8 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು: 11 ಜನರ ಬಂಧನ
ಬಳ್ಳಾರಿ: ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ, 11 ಆರೋಪಿಗಳನ್ನು ಬಂಧಿಸಿ, ರು. 6,440 ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಸಿಂದುವಾಳ ಗ್ರಾಮದಲ್ಲಿ ನಡೆದಿದೆ. ಸಿಂದುವಾಳ ಗ್ರಾಮದ ಸಿದ್ದಮಲ್ಲಪ್ಪನ ಮನೆಯ ಪಕ್ಕದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿ ತಿಕ್ಕಯ್ಯ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ. ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬಳ್ಳಾರಿಗೆ ಮೀರಾ ಸಕ್ಸೇನಾ
ಬಳ್ಳಾರಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ಮೀರಾ ಸಿ. ಸಕ್ಸೇನಾ ಅವರು ಸೆ. 3ರಂದು ಮಧ್ಯಾಹ್ನ 1.30ಕ್ಕೆ ಬಳ್ಳಾರಿಗೆ ಆಗಮಿಸುವರು. ಸೆ. 4ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ವಿಲೇವಾರಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಯುವಕ ನೇಣಿಗೆ ಶರಣು
ಕೂಡ್ಲಿಗಿ: ಪಟ್ಟಣದ ಹೊರವಲಯದ ಲಚ್ಚಣ್ಣ ಎನ್ನುವವರ ಹೊಲದ ಹುಣಸೆ ಮರಕ್ಕೆ ಕುಪ್ಪಿನಕೇರಿ ಕರಿಯಪ್ಪ (26) ಎಂಬಾತ ಭಾನುವಾರ ನೇಣು ಹಾಕಿಕೊಂಡಿರುವ ಘಟನೆ ನಡೆದಿದೆ. ತಾಲೂಕಿನ ಕುಪ್ಪಿನಕೆರೆ ಗ್ರಾಮದ ಈತನು, ಕೂಡ್ಲಿಗಿ ಪಟ್ಟಣದ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಹಿರ್ದೆಸೆಗೆ ಹೋಗಿದ್ದ ಈ ಯುವಕ, ಹುಣಿಸೆ ಮರದಲ್ಲಿ ನೇತಾಡುತ್ತಿದ್ದನ್ನು ಕಂಡ ಜನತೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದ್ದಾರೆ. ಮೃತನ ತಾಯಿ ಶಿವಮ್ಮ ಸಂಶಯಾಸ್ಪದ ಸಾವು ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಹಾಯ್ದು ಸಾವು
ಕೂಡ್ಲಿಗಿ: ಟ್ಯಾಂಕರ್ ಹರಿದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಪಟ್ಟಣದ ರೇಣುಕಾ ಹೋಟೆಲ್ ಮುಂಭಾಗದಲ್ಲಿ ನಡೆದಿದೆ. ಬಳ್ಳಾರಿ ಬಳಿಯ ಅಲ್ಲೀಪುರ ಗ್ರಾಮದ ವಿ. ನಾಗರಾಜ (45) ಮೃತಪಟ್ಟ ದುರ್ದೈವಿ. ಅವರು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಡೂರು ಕಡೆಯಿಂದ ಬರುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಅವರ ಮೇಲೆ ಹಾದು ಹೋಗಿದೆ. ಲಾರಿ ಚಾಲಕ ಬೆಳ್ತಂಗಡಿ ಲಕ್ಷ್ಮೀಶನನ್ನು ಕೂಡ್ಲಿಗಿ ಪೊಲೀಸರು ಬಂಧಿಸಿದ್ದಾರೆ.
ಪಾದಚಾರಿ ಸಾವು
ಬಳ್ಳಾರಿ: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಸಿರುಗುಪ್ಪ ನಗರದಲ್ಲಿ ನಡೆದಿದೆ. ಧನಬಹದ್ದೂರ್ ಸಿಂಗ್ (50) ಮೃತಪಟ್ಟ ವ್ಯಕ್ತಿ. ಈತನು ಭಾನುವಾರ ರಾತ್ರಿ 10.30ರ ಸುಮಾರಿಗೆ ಸಿರುಗುಪ್ಪದ ಬಸ್ ನಿಲ್ದಾಣದ ಕಡೆಯಿಂದ ರಾಘವೇಂದ್ರ ಗುಡಿ ಸಮೀಪ ನಡೆದುಕೊಂಡು ಹೋಗುತ್ತಿರುವಾಗ ಲಾರಿ ಡಿಕ್ಕಿ ಹೊಡೆದಿದೆ. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ಉದ್ಘಾಟನೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ಗಂ.ಭೀ. ಸರ್ಕಾರಿ ಪದವಿಪೂರ್ವಕಾಲೇಜಿನಲ್ಲಿ ಸೆ. 4ರಂದು ಪ್ರಸಕ್ತ ಸಾಲಿನ ಸರಸ್ವತಿ ಪೂಜೆ, ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಕೆ. ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ 10.30 ಗಂಟೆಗೆ ಕ್ಷೇತ್ರದ ಶಾಸಕ ಎಸ್. ಭೀಮಾನಾಯ್ಕ ಸಮಾರಂಭ ಉದ್ಘಾಟಿಸಲಿದ್ದಾರೆ. ಪ್ರಭಾರಿ ಜಿಪಂ ಅಧ್ಯಕ್ಷೆ ಮಮತಾ ಸುರೇಶ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪೂರ್ಯನಾಯ್ಕ, ಉಪಾಧ್ಯಕ್ಷೆ ನಾಗರತ್ನಾ ವೆಂಕಟೇಶ್, ಜಿಪಂ ಸದಸ್ಯರಾದ ಕರಿಬಸವನಗೌಡ್ರ ರತ್ನಮ್ಮ ಸಿದ್ದಲಿಂಗನಗೌಡ, ಹೇಮ್ಲವ್ವ ಕೃಷ್ಣನಾಯ್ಕ, ಕಡ್ಲಬಾಳು ಗ್ರಾಪಂ ಅಧ್ಯಕ್ಷೆ ಬಡಲಡಿಕಿ ಮಂಜುಳಾಕೃಷ್ಣಪ್ಪ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ತಾಪಂ ಸದಸ್ಯರಾದ ಉಪ್ಪಾರಬಾಲಪ್ಪ, ಪವಾಡಿ ಗಂಗಮ್ಮ ಹನುಮಂತಪ್ಪ, ನಾಯಕರ ಗೌರಮ್ಮ, ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಜಿ. ಮಂಜುನಾಥ, ಉಪ ನಿರ್ದೇಶಕ ಅಬ್ದುಲ್ ರಷೀದ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
5ರಂದು ವಿಚಾರ ಸಂಕಿರಣ
ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಜಿಲ್ಲಾ ಘಟಕ ಹಾಗೂ ಬೆಂಗಳೂರಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಸೆ. 5ರಂದು ಬೆಳಗ್ಗೆ 10.30ಕ್ಕೆ ನಗರದ ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪಿ. ಲಂಕೇಶ್ ಒಂದು ನೆನಪು ಎಂಬ ವಿಚಾರ ಸಂಕಿರಣ, ಚಲನಚಿತ್ರ ಪ್ರದರ್ಶನ, ಸಂವಾದ ಕಾರ್ಯಕ್ರಮ ನಡೆಯಲಿದೆ. ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸುವರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಅರವಿಂದ ಪಟೇಲ್ ಉಪಸ್ಥಿತರಿರುವರು. ವಿಚಾರ ಸಂಕಿರಣದಲ್ಲಿ ಕತೆಗಾರ ಮೈಸೂರಿನ ಚಂದ್ರಕಾಂತ ವಡ್ಡು ಅವರು ಪಿ. ಲಂಕೇಶ್ ಮತ್ತು ಸಾಹಿತ್ಯ, ಅಂಕಣಕಾರ ಚಿಕ್ಕಮಗಳೂರಿನ ಬಿ. ಚಂದ್ರೇಗೌಡ ಪಿ. ಲಂಕೇಶ್ ಮತ್ತು ಪತ್ರಿಕೋದ್ಯಮ ಹಾಗೂ ಕವಿ ಬೆಂಗಳೂರಿನ ಬಿ.ಆರ್. ಲಕ್ಷ್ಮಣರಾವ್ ಅವರು ಪಿ. ಲಂಕೇಶ್ ಮತ್ತು ಸಿನಿಮಾ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ನಂತರ ಪಿ. ಲಂಕೇಶ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಪಲ್ಲವಿ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಸಂವಾದ ಕಾರ್ಯಕ್ರಮದಲ್ಲಿ ಹುರಕಡ್ಲಿ ಶಿವಕುಮಾರ, ಮೇಟಿ ಕೊಟ್ರಪ್ಪ, ಡಾ. ಸಂಪಿಗೆ ನಾಗರಾಜ, ಬಾದಾಮಿ ಶಿವಲಿಂಗ, ಪಾಂಡುರಂಗ, ಕೆ.ವಿ. ಜಯಲಕ್ಷ್ಮಿ, ಮದಿರೆ ಕುಮಾರಸ್ವಾಮಿ, ಈ. ಗೋವರ್ಧನ ರೆಡ್ಡಿ, ಸಿ. ದೇವಣ್ಣ, ಪಂಪಾಪತಿ, ಕಳಕಪ್ಪ, ಸಿ.ಎಂ. ಚನ್ನಬಸಯ್ಯ, ಎಸ್.ಎಂ. ನಾಗರಾಜ, ಅಯೂಬ್, ಎಸ್.ಎಂ. ಗುರುಪ್ರಸಾದ್, ಸುರೇಶ್ ಅಂಗಡಿ, ರೆಡ್ಡಿನಾಯ್ಕ್ ಅವರು ಭಾಗವಹಿಸುವರು ಎಂದು ಕಸಾಪ ಗೌರವ ಕಾರ್ಯದರ್ಶಿ ನಾಗರಾಜ ಪ್ರಸಾದಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

