ಸ್ಟೀಲ್ ಸಿಟಿಗೆ ಟ್ರಾಫಿಕ್ ಕಿರಿಕಿರಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 7
ಸಮಯ ಪಾಲನೆ ಜೀವನ ಯಶಸ್ಸಿನ ಹಾದಿ ನಿಜ, ಆದರೆ ಬಳ್ಳಾರಿ ನಗರದ ಹೃದಯ ಭಾಗದಲ್ಲಿರುವ ಗಡಿಗಿ ಚನ್ನಪ್ಪ (ರಾಯಲ್) ವೃತ್ತದಿಂದ ಕನಕ ದುರ್ಗಮ್ಮ ದೇವಸ್ಥಾನದ ಮಧ್ಯದ ರಸ್ತೆ ಇದಕ್ಕೆ ತೊಡಕಾಗಿದೆ ಎಂದೇ ಹೇಳಬಹುದು.
ಈ ರಸ್ತೆ ಸದಾ ಟ್ರಾಫಿಕ್ಮಯವಾಗಿದ್ದರಿಂದ ಬಳ್ಳಾರಿ ಜನತೆಗಿದು ಗೋಳಾಗಿ ಪರಿಣಮಿಸಿದೆ. ಗಡಿಗಿ ಚೆನ್ನಪ್ಪ ವೃತ್ತ ದಿನನಿತ್ಯ ಅನಗತ್ಯ ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿದೆ. ಸಾರಿಗೆ ಸಂಸ್ಥೆ ಬಸ್ ಹಾಗೂ ಇತರೆ ಖಾಸಗಿ ಬಸ್ಗಳು ಟ್ರಾಫಿಕ್ನಿಂದ ಅನತಿ ದೂರದಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
ನಗರದಲ್ಲಿ ಜನಸಂಖ್ಯೆ ಹೆಚ್ಚಾದಂತೆ ವಾಹನ ದಟ್ಟಣೆಯೂ ಹೆಚ್ಚಾಗಿದೆ. ಪ್ರತಿನಿತ್ಯ ಶಾಲೆಗೆ ತೆರಳುವ ಮಕ್ಕಳಿಂದ ಹಿಡಿದು ದ್ವಿಚಕ್ರ ವಾಹನ ಸವಾರರು, ಆಟೋಗಳು, ಕಾರ್ಗಳು ಹೀಗೆ ಪ್ರತಿ ವಾಹನಗಳ ಸಂಚಾರಕ್ಕೆ ಬಹು ಬೇಡಿಕೆ ರಸ್ತೆಯಾದ ನಗರದ ಡಬಲ್ ರಸ್ತೆ, ಬೆಳಗಿನ ಜಾವದಿಂದ ರಾತ್ರಿವರೆಗೂ ಟ್ರಾಫಿಕ್ನಿಂದ ಕೂಡಿರುತ್ತದೆ. ಆದರೆ ಪೊಲೀಸ್ ಇಲಾಖೆ ಮಾತ್ರ ಇದಕ್ಕೆ ಪರ್ಯಾಯ ವ್ಯವಸ್ಥೆಗೆ ಆಸಕ್ತಿ ತೋರುತ್ತಿಲ್ಲ.
ರಸ್ತೆಯಲ್ಲೇ ಬಸ್ ನಿಲುಗಡೆ: ದುರ್ಗಮ್ಮ ಗುಡಿ ಕಡೆಯಿಂದ ಗಡಿಗಿ ಚನ್ನಪ್ಪ ವೃತ್ತದ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಹಾದು ಹೋಗುವ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ಗಳಿಗೆ ಒಂದು ಪ್ರತ್ಯೇಕ, ನಿಗದಿತ ನಿಲ್ದಾಣ ಇಲ್ಲದಿರುವುದರಿಂದ ಬಸ್ಗಳು ಹಳೆ ಬಸ್ ನಿಲ್ದಾಣದ ಎದುರುಗಡೆ ರಸ್ತೆಯಲ್ಲೇ ನಿಂತು ಪ್ರಯಾಣಿಕರನ್ನು ಇಳಿಸುವುದರಿಂದ ಇತ್ತ ಗಡಿಗಿ ಚನ್ನಪ್ಪ ವೃತ್ತದಲ್ಲಿ ಈ ಭಾಗದಿಂದ ಹೋಗುವ ಇತರ ವಾಹನಗಳಿಗೆ ಸಂಚಾರಕ್ಕೆ ಅಡೆತಡೆಯಾಗುತ್ತದೆ. ಹೀಗಾಗಿ ಸದಾ ಟ್ರಾಫಿಕ್ ಜಾಮ್ ಇರುತ್ತದೆ. ರಾಜಧಾನಿ ಬೆಂಗಳೂರಿಗೆ ತಾನೇನು ಕಡಿಮೆ ಇಲ್ಲ ಎನ್ನುವಂತೆ ಸ್ಟೀಲ್ ಸಿಟಿ ಬಳ್ಳಾರಿಯ ಪ್ರಮುಖ ರಸ್ತೆಯಾದ ನಗರದ ಡಬಲ್ ರಸ್ತೆ ನಿತ್ಯವೂ ವಾಹನಗಳು ಗಿಜಿಗುಡುತ್ತ, ಶಬ್ದ ಮಾಡುತ್ತ ರಸ್ತೆ ದಾಟುವುದೇ ಒಂದು ಸಾಧನೆಯಾಗಿದೆ.
ಎರಡ್ಮೂರು ಬಾರಿ: ಇನ್ನು ದುರ್ಗಮ್ಮ ದೇವಸ್ಥಾನದ ಕಡೆಯಿಂದ ಗಡಿಗಿ ಚನ್ನಪ್ಪ ವೃತ್ತದ ಮೂಲಕ ಹಾದು ಹೋಗುವಾಗ ವಾಹನಗಳ ಸಂಚಾರಕ್ಕೆ ಟ್ರಾಫಿಕ್ ಸಿಗ್ನಲ್ ಪಲ್ಸ್ರೇಟ್ ಕೂಡ 30ರಿಂದ 60 ಸೆಕೆಂಡ್ ಮಾತ್ರ ಇದೆ. ಇನ್ನು ಬಸ್ಗಳು ತಮ್ಮ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸುವುದರಿಂದ ಇತರ ವಾಹನಗಳು ಸರಳವಾಗಿ ಒಂದೇ ಬಾರಿಗೆ ಟ್ರಾಫಿಕ್ ಸಿಗ್ನಲ್ ಬೀಳುವುದರೊಳಗಾಗಿ ಹೋಗದೆ, ಎರಡು- ಮೂರು ಬಾರಿ ಸಿಗ್ನಲ್ ಬೀಳುವವರೆಗೆ ಕಾಯಬೇಕಾಗುತ್ತದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರ ವಾಹನಗಳಿಗೆ ತುಂಬ ಕಿರಿಕಿರಿಯಾಗುತ್ತಿದೆ. ಇಂತಹ ವ್ಯವಸ್ಥೆಯ ಕಡೆಗೆ ಬಳ್ಳಾರಿ ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.
ಪರ್ಯಾಯ ವ್ಯವಸ್ಥೆ ಬೇಕು: ಹೊಸ ಬಸ್ ನಿಲ್ದಾಣ, ಬಸ್ ತಂಗುದಾಣಗಳಲ್ಲಿ ತಂಗಬೇಕಾದ ಕೆಎಸ್ಆರ್ಟಿಸಿ ಬಸ್ಗಳು, ಬೇರೆ ಬೇರೆ ಊರುಗಳಿಂದ ನಗರಕ್ಕೆ ಬಂದ ಪ್ರಯಾಣಿಕರಿಗೆ ಅನುವು ಮಾಡಿಕೊಡಬೇಕೆಂಬ ಉದ್ದೇಶದಿಂದ ಇಲ್ಲಿನ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿಲ್ಲುತ್ತವೆ. ಇದರಿಂದ ಒಂದರ ಹಿಂದೆ ಒಂದರಂತೆ ಸರದಿಯೋಪಾದಿಯಲ್ಲಿ ವಾಹನಗಳು ನಿಂತುಬಿಡುತ್ತವೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಸಂಚಾರಿ ಪೊಲೀಸರು ಆದ್ಯತೆ ನೀಡಬೇಕಿದೆ.
ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ನಗರದ ಜನತೆ ದೈನಂದಿನ ಕೆಲಸ ಕಾರ್ಯಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗದೆ ಅಸಮಧಾನ ವ್ಯಕ್ತಪಡಿಸುತ್ತಾರೆ. ಇನ್ನು ಪ್ರತಿಭಟನೆ, ಮೆರವಣಿಗೆ, ಉತ್ಸವಗಳಾದಾಗ ಕನಕದುರ್ಗಮ್ಮ ದೇವಸ್ಥಾನಕ್ಕೆ ತೆರಳುವ ಅಂಡರ್ ಬ್ರಿಡ್ಜ್ನಿಂದ ಗಡಿಗಿ ಚನ್ನಪ್ಪ ವೃತ್ತದ ವರೆಗೆ ವಾಹನಗಳ ದಟ್ಟಣೆಯಿಂದ ರಸ್ತೆ ದಾಟಲು ಕಿಂಚಿತ್ತು ಜಾಗವಿಲ್ಲದಂತೆ ಪಾದಚಾರಿಗಳು ಹರ ಸಾಹಸ ಪಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಎಸ್ಆರ್ಟಿಸಿ ಬಸ್ಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸ್ಥಳೀಯರ ಒತ್ತಾಯ.
-ವೈ.ಎಂ. ಸಿದ್ದಲಿಂಗಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

