15ರಂದು ವಿಚಾರ ಸಂಕಿರಣ
ಬಳ್ಳಾರಿ: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಘಟಕ ಸೆ. 15ರಂದು ಬೆಳಗ್ಗೆ 11ಕ್ಕೆ ಶಿಕ್ಷಣದಲ್ಲಿ ಗುಣಮಟ್ಟದಲ್ಲಿ ಕುಸಿತ ಎಂಬ ವಿಷಯ ಕುರಿತು ನಗರದ ಐ.ಎಂ.ಎ. ಸಭಾಂಗಣದಲ್ಲಿ ವಿಚಾರ ಸಂಕಿರಣ ಏರ್ಪಡಿಸಿದೆ. ಈ ಸಂಕಿರಣದಲ್ಲಿ ರಾಜ್ಯ ಸರ್ಕಾರ ಶಿಕ್ಷಣ ವಿಸ್ತರಣೆ ಮಾಡುವ ಹೆಸರಿನಲ್ಲಿ ತರುತ್ತಿರುವ ನೀತಿಗಳಾದ ನಲಿ-ಕಲಿ, 1ರಿಂದ 9ನೇ ತರಗತಿವರೆಗೆ ಪಾಸ್-ಫೇಲ್ ಪದ್ಧತಿ ತೆಗೆದುಹಾಕಿರುವ ಕ್ರಮ, ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸೆಮಿಸ್ಟರ್ ಪದ್ಧತಿ, ಅಂತರಿಕ ಮೌಲ್ಯಮಾಪನ, ನಿರಂತರ ಮೌಲ್ಯಮಾಪನ, ಪರಿಹಾರ ಬೋಧನೆ, ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ, ಶಿಕ್ಷಕರಿಗೆ ಶಿಕ್ಷಣೇತರ ಕೆಲಸಗಳ ಹೊರೆ, ನೇಮಕಾತಿಯಲ್ಲಿ ಹೊರಗುತ್ತಿಗೆ ನೀತಿಯಂತಹ ವಿಷಯಗಳ ಕುರಿತು ಚರ್ಚಿಸಲಾಗುವುದು. ಎಲ್ಲಾ ಶಿಕ್ಷಕರು, ಉಪನ್ಯಾಸಕರು, ಶಿಕ್ಷಣ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಎಐಎಸ್ಇಸಿ ಸಂಚಾಲಕ ಆರ್. ಸೋಮಶೇಖರಗೌಡ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ರಾಯಚೂರು ಕೃಷಿ ವಿಶ್ವವಿದ್ಯಾಲಯವು 2013-14ನೇ ಸಾಲಿಗಾಗಿ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆಯರ ಆಯ್ಕೆಗಾಗಿ ಅರ್ಜಿ ಆಹ್ವಾನಿಸಿದೆ. ಜಿಲ್ಲೆಯ ಆಸಕ್ತ ರೈತ, ರೈತ ಮಹಿಳೆಯರು ನಿಗದಿತ ಅರ್ಜಿ ನಮೂನೆಯನ್ನು ಹಗರಿ ಕೃಷಿ ವಿಜ್ಞಾನ ಕೇಂದ್ರ ಅಥವಾ ಹಡಗಲಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಸೆ. 15ರೊಳಗಾಗಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಸೆ. 20ರೊಳಗಾಗಿ ಸಲ್ಲಿಸಬೇಕು. ಈಗಾಗಲೇ ಯಾವುದೇ ರಾಷ್ಟ್ರ, ರಾಜ್ಯ, ಕೃಷಿ ವಿಶ್ವವಿದ್ಯಾಲಯ ಹಾಗೂ ಆಸ್ಪೀ ಮುಂತಾದ ಖಾಸಗಿ ಕಂಪನಿಗಳ ಮಟ್ಟದಲ್ಲಿ ಕೃಷಿಗೆ ಸಂಬಂಧಿಸಿದ ಪ್ರಶಸ್ತಿ ಪಡೆದ ರೈತ, ರೈತ ಮಹಿಳೆಯರು ಅರ್ಜಿ ಸಲ್ಲಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಕ್ಕಳಿಗೆ ಡಿಡಿ ವಿತರಣೆ
ಬಳ್ಳಾರಿ: ಬಳ್ಳಾರಿ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ವಿವಿಧ ಸಂಕಷ್ಟದಲ್ಲಿರುವ ಮಕ್ಕಳಿಗೆ ಪ್ರಾಯೋಜಕತ್ವ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕ ಸಹಾಯ ಒದಗಿಸಲು ಡಿಡಿಗಳನ್ನು ವಿತರಿಸಲಾಯಿತು. ಸರ್ಕಾರಿ ಬಾಲಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಸಂಕಷ್ಟದಲ್ಲಿರುವ 28 ಮಕ್ಕಳಿಗೆ ಡಿಡಿಯನ್ನು ವಿತರಿಸಿ ಮಾತನಾಡಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಅವರು, ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಇಂಥ ಕಾರ್ಯಕ್ರಮದ ಮೂಲಕ ಮಕ್ಕಳು ಹಣಕಾಸಿನ ತೊಂದರೆಯಿಂದ ಶಿಕ್ಷಣ ವಂಚಿತರಾಗುವುದನ್ನು ತಡೆಯಬಹುದು ಎಂದರು. ಈ ಸಂದರ್ಭದಲ್ಲಿ ಬಾಲಮಂದಿರದ ಅಧೀಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ದಲಿತ ಸೇನೆಯಿಂದ ಗುರುವಂದನೆ
ಬಳ್ಳಾರಿ: ನಗರದ ಕೌಲ್ಬಜಾರ್ ಪ್ರದೇಶದ ವಟ್ಟಪ್ಪ ಕೇರಿಯ ಕೆಂಚಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಸೇನೆ ಜಿಲ್ಲಾ ಸಮಿತಿ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ. ಮಲ್ಲೇಶಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಿಗೆ ಗೌರವ ಸೂಚಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಉತ್ತಮ ಕಾರ್ಯ. ಇಂತಹ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸಿ.ಬಿ. ಪುರದ, ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಹನುಮಂತಪ್ಪ, ರಾಷ್ಟ್ರ ಪ್ರಶಸ್ತಿ ವಿಜೇತ ಡಿ. ಮೋಹನ್ದಾಸ್ ಹಾಗೂ ಸಹ ಶಿಕ್ಷಕಿ ಈರಮ್ಮ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಎಚ್. ಸಂಡೂರಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಟಿ. ಆನಂದ, ಜಂಟಿ ಕಾರ್ಯದರ್ಶಿ ಈಶ್ವರಪ್ಪ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕೆ. ಪೃಥ್ವಿರಾಜ್, ಮುಖಂಡರಾದ ಹರಿಬಾಬು, ರಾಜು, ವಿಜಯಕುಮಾರ್, ನಾಸೀರ್, ಮಾಬುಬಾಷಾ, ಮುನ್ನಾಬಾಯಿ, ಗೋಪಾಲ್, ಮಲ್ಲೇಶಪ್ಪ, ಸಿ. ಕೊಟ್ರೇಶಪ್ಪ, ಹೊನ್ನಪ್ಪ, ಬಸಪ್ಪ, ಜಗನ್, ರಾಮದಾಸ್, ನಾಗೇಶ್, ಕೃಷ್ಣ, ಶೇಖರ್, ಸಂತೋಷ್ ಉಪಸ್ಥಿತರಿದ್ದರು. ಶಿಕ್ಷಕ ಕಾಂತರಾಜ್ ನಿರೂಪಿಸಿದರು. ಕ್ರೀಡಾ ಇಲಾಖೆಯ ಮಲಕಪ್ಪ ವಂದಿಸಿದರು. ಹನುಮಯ್ಯ, ಯಂಕಪ್ಪ ಜಾನಪದ ಗೀತೆ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

