ಬಳ್ಳಾರಿ

51 ಗಣಿ ಕಂಪನಿಗಳ ಪರವಾನಗಿ ರದ್ದು

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 13
ಲಾಡ್ ಸಹೋದರರು, ಜನಾರ್ದನ ರೆಡ್ಡಿ, ಅಲ್ಲಂ ವೀರಭದ್ರಪ್ಪ ಸೇರಿದಂತೆ ಇತರರಿಗೆ 'ಗಣಿ ಧಣಿ'ಗಳು ಎಂಬ ಪಟ್ಟ ಕಳಚಿ ಬಿದ್ದಿದೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿ ಕೆಟಗರಿಯಲ್ಲಿರುವ 51 ಗಣಿ ಕಂಪನಿಗಳ ಗಣಿ ಪರವಾನಗಿ ರದ್ದುಪಡಿಸಿ ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಉಪಕಾರ್ಯದರ್ಶಿ ಆದೇಶ ಹೊರಡಿಸಿದೆ. ಪರವಾನಗಿ ರದ್ದು ಮಾಡಿ ಹೊರಡಿಸಿರುವ ಆದೇಶದ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ಸಮಾಜ ಪರಿವರ್ತನಾ ಸಮುದಾಯವು ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. 2013, ಏ.18ರಂದು ಸಿ ಕೆಟಗರಿಯಲ್ಲಿರುವ ಗಣಿ ಗುತ್ತಿಗೆ ರದ್ದುಪಡಿಸಬೇಕೆಂದು ಸಿಇಸಿ ಮೂಲಕ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ರಾಜ್ಯ ಸರ್ಕಾರ ಸೆ.12ರಂದು ಗಣಿ ಗುತ್ತಿಗೆ ಪರವಾನಗಿ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಗಣಿಧಣಿಗಳ ಆರ್ಭಟಕ್ಕೆ ಕಡಿವಾಣ ಹಾಕಿದೆ. ಇದರಿಂದಾಗಿ ಗಣಿಧಣಿಗಳು ಎಂದು ಕರೆಸುತ್ತಿರುವ ಬಳ್ಳಾರಿ, ತುಮಕೂರು, ಚಿತ್ರದುರ್ಗದಲ್ಲಿರುವ ಗಣಿ ಮಾಲೀಕರು ಪಟ್ಟ ಕಳಚಿ ಬಿದ್ದಿದೆ.
ಕಾಂಗ್ರೆಸ್‌ನವರೇ ಹೆಚ್ಚು: ಸಿ ಕೆಟಗರಿಯಲ್ಲಿರುವ ಬಹುತೇಕ ಗಣಿ ಕಂಪನಿಗಳು ಕಾಂಗ್ರೆಸ್‌ನವರ ಮಾಲೀಕತ್ವದಲ್ಲಿವೆ. ಲಾಡ್ ಸೋದರರಾದ ಅನಿಲ್ ಲಾಡ್, ಸಂತೋಷ್ ಲಾಡ್, ಅಲ್ಲಂ ವೀರಭದ್ರಪ್ಪ, ಎಚ್. ವಹಾಬ್, ಅಂಬಿಕಾ ಘೋರ್ಪಡೆ, ಅನ್ಯ ರಾಜಕೀಯ ಪಕ್ಷಗಳ ಮುಖಂಡರಾದ ಮಾಜಿ ಸಚಿವ ವಿ. ಸೋಮಣ್ಣ, ಜನಾರ್ದನ ರೆಡ್ಡಿ, ರಂಗನಗೌಡ, ದಿನೇಶ್ ಸಿಂಘ್ವಿ ಸೇರಿದಂತೆ ಹೆಸರಾಂತ ಗಣಿ ಮಾಲೀಕರಿಗೆ ರಾಜ್ಯ ಸರ್ಕಾರ ಆದೇಶ ಕಂಟಕವಾಗಿ ಪರಿಣಮಿಸಿದೆ.
ಕೇವಲ ಗಣಿ ಕಂಪನಿಗಳು ಗುತ್ತಿಗೆ ರದ್ದುಪಡಿಸುವುದು ಮಾತ್ರವಲ್ಲದೆ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಎಲ್ಲ ಖರ್ಚು-ವೆಚ್ಚಗಳನ್ನು ಕೂಡಲೇ ವಸೂಲಿ ಮಾಡಬೇಕು. ಲೀಜ್ ರೆಂಟ್, ರಾಯಲ್ಟಿ, ಅರಣ್ಯ ತೆರಿಗೆ ಹೀಗೆ ವಿವಿಧ ಬಾಕಿಗಳನ್ನು ವಸೂಲಾತಿ ಮಾಡಬೇಕೆಂದು ಆದೇಶ ಹೊರಡಿಸಿದ್ದು, ಇನ್ನು ಆರ್ ಆ್ಯಂಡ್ ಆರ್ ಯೋಜನೆಯನ್ನು ಅನುಷ್ಠಾನಗೊಳಿಸಲು ಬೇಕಾಗುವ ಖರ್ಚನ್ನು ಅದೇ ಗಣಿ ಮಾಲೀಕರಿಂದ ವಸೂಲಿ ಮಾಡಬೇಕೆಂದು ಆದೇಶ ಹೊರಡಿಸಿದ್ದಾರೆ. ಇದೊಂದು ರಾಜ್ಯ ಸರ್ಕಾರದ ಮಹತ್ವದ ನಿರ್ಧಾರವಾಗಿದೆ.
ದಿಟ್ಟ ನಿರ್ಧಾರ: ಬಳ್ಳಾರಿಯ ಗಣಿ ಲಾಬಿಗೆ ಇದೊಂದು ದೊಡ್ಡ ಹೊಡೆತ. ಸುಪ್ರೀಂ ಕೋರ್ಟ್‌ನಲ್ಲಿ ಸಿ ಕೆಟಗರಿಯಲ್ಲಿರುವ ಗಣಿ ಮಾಲೀಕರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುವುದರ ನಡುವೆಯೇ ಈಗ ರಾಜ್ಯ ಸರ್ಕಾರದಿಂದ ಪರವಾನಗಿ ರದ್ದು ಆದೇಶ ಹೊರ ಬಿದ್ದಿದೆ. ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಉಪಕಾರ್ಯದರ್ಶಿಗಳು ಕಾಂತರಾಜ್ ಸಿ ಕೆಟಗರಿಯಲ್ಲಿರುವ 51 ಗಣಿ ಕಂಪನಿಗಳು ಗಣಿ ಗುತ್ತಿಗೆ ರದ್ದುಪಡಿಸಿರುವ ಆದೇಶ ರವಾನಿಸಿದ್ದಾರೆ. ಕಾಂಗ್ರೆಸ್ ಮುಖಂಡರ ಒತ್ತಡ ತಂತ್ರ ಕೂಡ ಫಲಿಸಿಲ್ಲ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.