ಕ್ಲಿನಿಕ್ ಮೇಲೆ ದಾಳಿ: ನಕಲಿ ವೈದ್ಯರ ಬಂಧನ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 19
ರಾಜ್ಯ ಆಯುರ್ವೇದ ಮತ್ತು ಯೂನಾನಿ ವೈದ್ಯ ಮಂಡಳಿಯ ಅಧ್ಯಕ್ಷ ಡಾ. ಸತ್ಯಮೂರ್ತಿ ಮತ್ತು ತಂಡ ಪಟ್ಟಣ ಸೇರಿದಂತೆ ವಿವಿಧೆಡೆ ದಾಳಿ ಮಾಡಿ ನಕಲಿ ವೈದ್ಯರಿಬ್ಬರನ್ನು ಬಂಧಿಸಿ ನ್ಯಾಯಾಂಗ ಇಲಾಖೆಗೆ ಒಪ್ಪಿಸಿದೆ.
ಪಟ್ಟಣದ ನಕಲಿ ವೈದ್ಯ ಜಯಕುಮಾರ ಗುರುವಾರ ಬೆಳಗ್ಗೆ ತಮ್ಮ ದೀಪಾಲಿ ಕ್ಲಿನಿಕ್ ತೆರೆದು ದೇವರ ಪೂಜೆ ಮಾಡಿ ಇನ್ನೇನು ವೃತ್ತಿ ಆರಂಭಿಸಲು ಸಿದ್ಧರಾಗುತ್ತಿದ್ದಂತೆಯೇ ತಂಡ ದಾಳಿ ಮಾಡಿದೆ. ಸತ್ಯಮೂರ್ತಿ ನೇತೃತ್ವದ ತಂಡ ನಕಲಿ ವೈದ್ಯನಿಗೆ, ನಿವೇನು ಕೋರ್ಸ್ ಓದಿದ್ದು? ಬಿಎಎಂಎಸ್ ಅಭ್ಯಾಸ ಮಾಡಿರುವ ದಾಖಲೆಗಳನ್ನು ನೀಡಿ ಎಂದಾಗ ನಕಲಿ ವೈದ್ಯ 1 ಗಂಟೆಗೂ ಹೆಚ್ಚು ಅಲ್ಲಿದೆ, ಇಲ್ಲಿದೆ ಎಂದು ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಇದನ್ನರಿತ ತಂಡವು ಅವರು ವಿದ್ಯಾಭ್ಯಾಸ ಮಾಡಿರುವ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಪಶ್ಚಿಮ ಬಂಗಾಲದ ವಿವಿ ನೀಡಿರುವ ದಾಖಲೆಗಳನ್ನು ನೀಡಿದ್ದಾನೆ. ಇದರ ಆಧಾರದ ಮೇಲೆ ತಾವು ವೈದ್ಯ ವೃತ್ತಿ ಆರಂಭಿಸಿದ್ದೇನೆ ಎಂದು ತಿಳಿಸಿದ್ದಾನೆ.
ಆದರೆ ಇದನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದ ತಂಡ ಈ ದಾಖಲೆಯ ಆಧಾರದ ಮೇಲೆ ವೈದ್ಯ ವೃತ್ತಿ ಆರಂಭಿಸಲು ಬರುವುದಿಲ್ಲ, ರಾಜ್ಯದ ವಿವಿಗಳಲ್ಲಿ ವೈದ್ಯ ವೃತ್ತಿ ಅಭ್ಯಾಸ ಮಾಡಿರುವ ದಾಖಲೆಗಳನ್ನು ನೀಡಿ ಎಂದಾಗ ವೈದ್ಯನ ಬಳಿ ದಾಖಲೆ ಇಲ್ಲದ ಕಾರಣ, ನನ್ನ ಮೂಲ ದಾಖಲೆಗಳನ್ನು ವಕೀಲರೊಬ್ಬರ ಬಳಿ ನೀಡಿದ್ದೇನೆಂದು ತ ಂಡದೆದುರು ಸುಳ್ಳು ಹೇಳಿದನು.
ಇಡೀ ಕ್ಲಿನಿಕ್ನಲ್ಲಿ ಶೋಧ ಮಾಡಿದ ತಂಡ ಇವರು ಬಳಕೆ ಮಾಡುತ್ತಿದ್ದ ಲೆಟರ್ ಪ್ಯಾಡ್, ಔಷಧಿ ಬಾಟಲಿ, ಮಾತ್ರೆಗಳು, ಮಾತ್ರೆಗಳನ್ನು ಬರೆಯುವ ಚೀಟಿ ಸೇರಿದಂತೆ ಎಲ್ಲವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ದಂಗಾದ ತಂಡ: ನಕಲಿ ವೈದ್ಯ ಡಾ. ಜಯಕುಮಾರ್ ಬಿಎಎಂಎಸ್ (ಕೋಲ್ಕತ್ತ) ಎಂಎಸ್ಸಿ (ಬೆಂಗಳೂರು-2013) ದೀಪಾಲಿ ಮೂಲವ್ಯಾಧಿ ಆಸ್ಪತ್ರೆ ಎಂದು ನಾಮಫಲಕ ಹಾಕಿಕೊಂಡಿದ್ದನ್ನು ನೋಡಿ ಕ್ಷಣಕಾಲ ತಂಡ ದಂಗಾಯಿತು. ವೈದ್ಯ ತನ್ನ ವಾಸ ಸ್ಥಳ ಹೇಳುತ್ತಿಲ್ಲ, ಪಶ್ಚಿಮಬಂಗಾಲ, ಹೊಸಪೇಟೆ ಅಂತಾ ಹೇಳುತ್ತಾರೆ. ತಮ್ಮ ಅಜ್ಜನ ಆಸ್ತಿ ಹೂವಿನಹಡಗಲಿಯಲ್ಲಿದೆ ಆದ್ದರಿಂದ ಇಲ್ಲಿಗೆ ಬಂದಿದ್ದೇನೆಂದು ಹೇಳುತ್ತಾನೆ. ಈ ನಕಲಿ ವೈದ್ಯ ಈ ರೀತಿ ನಾಮಫಲಕ ಹಾಕಿಕೊಂಡು ಜನರಿಗೆ ಮೋಸ ಮಾಡುತ್ತಾ ಸುಲಭವಾಗಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆಂದು ಡಾ. ಸತ್ಯಮೂರ್ತಿ ಹೇಳಿದರು. ಈತನ ವಿರುದ್ಧ ತಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಪೊಲೀಸ್ ತಂಡ ನಕಲಿ ವೈದ್ಯ ಜಯಕುಮಾರ ಇವರನ್ನು ನ್ಯಾಯಾಂಗ ಇಲಾಖೆಗೆ ಒಪ್ಪಿಸಿದ್ದಾರೆ.
ಇದೇ ತಂಡ ತಾಲೂಕಿನ ದಾಸರಹಳ್ಳಿ ತಾಂಡಾದಲ್ಲಿಯೂ ದಾಳಿ ಮಾಡಿ ನಕಲಿ ವೈದ್ಯ ರಾಕೇಶ ಮಂಡಲ್ ಎಂಬುವವರನ್ನು ಬಂಧಿಸಿದೆ. ಕೋಲ್ಕತಾ ಮೂಲದ ಸರ್ಟಿಫಿಕೇಟ್ಗಳನ್ನು ವಶಕ್ಕೆ ತೆಗೆದುಕೊಂಡು ಕ್ಲಿನಿಕ್ನಲ್ಲಿದ್ದ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಟಾಸ್ಕ್ಫೋರ್ಸ್ ಇಲ್ಲ: ರಾಜ್ಯದ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ನಕಲಿ ವೈದ್ಯ ಹಾವಳಿ ತಡೆಯಲು ಈವರೆಗೂ ಟಾಸ್ಕ್ಫೋರ್ಸ್ ರಚಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆಂದು ರಾಜ್ಯ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಅಧ್ಯಕ್ಷ ಡಾ. ಸತ್ಯಮೂರ್ತಿ ಹೇಳಿದರು.
ಸ್ಥಳೀಯ ಪೊಲೀಸ್ ಇಲಾಖೆ ತಮ್ಮ ದಾಳಿಗೆ ಸರಿಯಾಗಿ ಸ್ಪಂದಿಸದ ಕಾರಣ ಮಂಡಳಿಯ ದಾಳಿಗೆ ಸಿಸಿಬಿ ಪೊಲೀಸ್ ಸಿಬ್ಬಂದಿ ಅಗತ್ಯವಿದೆ ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದು ಕೂಡಾ ಒಂದು ರೀತಿಯಲ್ಲಿ ಲೋಕಾಯುಕ್ತರು ದಾಳಿ ಮಾಡುವ ರೀತಿಯಲ್ಲೇ ನಡೆದರೆ ಮಾತ್ರ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಯಬಹುದು ಎಂದು ತಿಳಿಸಿದರು. ಮಂಡಳಿ ರಿಜಿಸ್ಟರ್ ಡಾ. ತಿಮ್ಮಪ್ಪ ಶೆಟ್ಟರ್, ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

