ಬಳ್ಳಾರಿ

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 24
ರಾಜ್ಯ ವಾಲ್ಮೀಕಿ ಸಮಾಜಕ್ಕೆ ಅಗತ್ಯವಿರುವ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ತಾವು ಸಿಎಂ ಜತೆ ಚರ್ಚೆ ಮಾಡಿ ಕ್ರಮಕೊಳ್ಳುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ನೀಡಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಪೂಜ್ಯ ಶ್ರೀಗಳಿಗೆ ತುಲಾಭಾರ ಹಾಗೂ ಸಚಿವ, ಶಾಸಕರಿಗೆ ಸನ್ಮಾನ ಸಮಾರಂಭವನ್ನು ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ತಮ್ಮ ರಾಜಕೀಯ ಜೀವನದಲ್ಲಿ ನಿರಂತರ ತಮ್ಮ ಬೆಂಬಲಕ್ಕೆ ವಾಲ್ಮೀಕಿ ಸಮಾಜವಿದೆ, ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶರ ಆಶಯದಂತೆ ಅವರ ಹೆಸರಿಗೆ ಕಳಂಕ ಬರದಂತೆ ಹಾಗೂ ಮಠ ಮಾನ್ಯಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆಂದು ಹೇಳಿದರು.
ಈ ನಾಯಕ ಸಮಾಜ ಎಲ್ಲ ಸಮುದಾಯಗಳ ಜತೆಗೆ ಒಗ್ಗೂಡಿ ನಡೆಯಬೇಕು, ಬಳ್ಳಾರಿ ಸಂಪೂರ್ಣ ವಾಲ್ಮೀಕಿ ಮಯಾವಾಗಿದೆ, ಇದರಿಂದ ರಾಜಕೀಯ ಕ್ಷೇತ್ರದಲ್ಲಿ ಮುಂದುವರೆಯಬೇಕೆಂದು ಕರೆ ನೀಡಿದ ಅವರು, ಸಮುದಾಯ ಭವನದ ಕಾಪೌಂಡ್ ನಿರ್ಮಾಣಕ್ಕೆ ಅಗತ್ಯವಿರುವ 10 ಲಕ್ಷ ಅನುದಾನವನ್ನು ನೀಡುತ್ತೇವೆಂದು ಹೇಳಿದರು. ಸಮಾಜ ಗುರುಪೀಠಕ್ಕೆ ಸರ್ಕಾರಿ ಐಟಿಐ ಕಾಲೇಜು ಮಂಜೂರು ಮಾಡಬೇಕೆಂಬ ಬೇಡಿಕೆಗೆ ಇದರ ಸಾಧಕ ಭಾದಕಗಳನ್ನು ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಮಾತನಾಡುತ್ತಾ, ಎಂ.ಪಿ. ಪ್ರಕಾಶರು ಜಾತ್ಯತೀತ ನಿಲುವು ಹೊಂದಿದ್ದ ಕಾರಣ ಅವರು ರಾಜ್ಯದಲ್ಲಿ ದೊಡ್ಡ ನಾಯಕರಾಗಿ ಬೆಳೆಯಲು ಕಾರಣಭೂತರಾಗಿದ್ದೀರಿ, ವಾಲ್ಮೀಕಿ ಸಮುದಾಯ ಜತೆಗೆ ನಿರಂತರ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ರಂಗರಾಜ ವನದುರ್ಗ ಮಾತನಾಡಿ, ವಾಲ್ಮೀಕಿ ಕಟ್ಟಿದ ಸಮಾಜ ದೊಡ್ಡ ಸಮಾಜವಾಗಿದ್ದು, ವಿಜಯ ನಗರ ಅರಸರ ಕಾಲದಲ್ಲಿ 72 ಪ್ರಾಂತಗಳಲ್ಲಿ ಆಳ್ವಿಕೆ ಮಾಡಿದ್ದ ಪಾಳೆಪಟ್ಟುಗಳು ಇಂದು ಮಾಯವಾಗಿವೆ. ಇದು ಮರುಕಳಿಸಲು ರಾಜಕೀಯವಾಗಿ ಎಲ್ಲರು ಪ್ರಬುದ್ಧರಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹಾಗೂ ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಅವರನ್ನು ಉಭಯ ಶ್ರೀಗಳು ಸನ್ಮಾನಿಸಿ, ಗೌರವಿಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಗವಿಮಠದ ಶ್ರೀ ಹಿರಿಶಾಂತವೀರ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಉಭಯ ಶ್ರೀಗಳಿಗೂ ತುಲಾಭಾರ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್.ಜಿ. ಹೊನ್ನಪ್ಪನವರ್ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ್ ಚಿದಾನಂದ, ಎಂ. ಪರಮೇಶ್ವರಪ್ಪ, ಜಿಪಂ ಸದಸ್ಯ ವಸಂತ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೋಹಿದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪರಸಪ್ಪ ನಿರೂಪಿಸಿದರು. ಹನುಮಂತಪ್ಪ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.