ಶಾಂತೇಶ್ವರ ಬೆಟ್ಟಕ್ಕೆ ಅಧಿಕಾರಿಗಳ ಭೇಟಿ
ಕನ್ನಡಪ್ರಭ ವಾರ್ತೆ, ಕುರುಗೋಡು, ಸೆ. 25
ಪಟ್ಟಣಕ್ಕೆ ಸಮೀಪದ ಗೆಣಿಕಿಹಾಳ್ ಗ್ರಾಮದ ಐತಿಹಾಸಿಕ ಸ್ಥಳವಾದ ಶಾಂತೇಶ್ವರ ಬೆಟ್ಟಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಇತ್ತೀಚೆಗೆ ಐತಿಹಾಸಿಕ ಶಾಂತೇಶ್ವರ ಬೆಟ್ಟದ ಪಕ್ಕದಲ್ಲೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಹಾಳಾಗಿರುವ ಸ್ಮಾರಕದ ಸಂರಕ್ಷಣೆ ಹಾಗೂ ಕಲ್ಲು ಗಣಿಗಾರಿಕೆಗೆ ಪುನರ್ ನವೀಕರಣ ವಿರೋಧಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿ ನಿಮಿತ್ತ ಅಧಿಕಾರಿ ತಂಡ ಭೇಟಿ ನೀಡಿ ಪರಿಶೀಲಿಸಿತು.
ಈ ಸಂದರ್ಭದಲ್ಲಿ ಪರಿಸರ ಹಿತ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಆರ್. ಸೋಮನಗೌಡ ಮಾತನಾಡಿ, ಈ ಮೊದಲು ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಪರವಾನಗಿ ನೀಡಬಾರದೆಂದು ಗ್ರಾಪಂ, ಕಂದಾಯ ಹಾಗೂ ಜಿಲ್ಲಾಡಳಿತ ಅದೇಶಿಸಿದ್ದರೂ ಗಣಿ ಮತ್ತು ಭೂವಿಜ್ಞಾನ, ಪರಿಸರ ನಿಯಂತ್ರಣ ಇಲಾಖೆ ಪರವಾನಗಿ ನೀಡಿತ್ತು. ಇದರಿಂದ ಗಣಿ ಮಾಲೀಕರು ಬಲಯುತವಾದ ಸ್ಫೋಟಕ ಬಳಸಿ ಅಂದಾಜು 150 ಅಡಿ ಆಳ ಗಣಿಗಾರಿಕೆ ನಡೆಸಿದ್ದಾರೆ. ಹೀಗಾಗಿ ಐತಿಹಾಸಿಕ ಭೀಮನ ಬಂಡೆ, ಶಾಂತೇಶ್ವರರು ತಪಸ್ಸು ಮಾಡಿದ ಗುಹೆ, ಲಿಂಗದ ಕಲ್ಲು ನಾಶವಾಗಿವೆ. ಸರ್ಕಾರ ಸ್ಮಾರಕ ರಕ್ಷಿಸಿ ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡಲು ನೆರವಾಗಬೇಕು. ಆದರೆ ಇಲ್ಲಿ ನಡೆದಿರುವುದು ಬೇರೆಯಾಗಿದೆ. ಇಂತಹ ಕೃತ್ಯ ಖಂಡಿಸಲಾಗುವುದು. ಕಲ್ಲುಗಣಿ ನಡೆಸಲು ನೋಂದಣಿ ರದ್ದುಪಡಿಸಬೇಕು ಎಂದು ಮನವಿ ಸಲ್ಲಿಸಿದರು.
ಅನಂತರ ಮನವಿ ಬೆಂಬಲಿಸಿ ಕೆ.ಎಂ. ಉಮಾಪತಿಗೌಡ, ಎಸ್.ಪಿ. ಮಹ್ಮದ್ ಖಾನ್, ಎಚ್.ಎಂ. ವಿಶ್ವನಾಥಸ್ವಾಮಿ ಮತ್ತಿತರರು ಮಾತನಾಡಿದರು. ಗ್ರಾಮಸ್ತರ ಅಹವಾಲಿಗೆ ಸ್ಪಂದಿಸಿದ ಕುರುಗೋಡು ತಹಸೀಲ್ದಾರ್ ಸುರೇಶ್ ಬಾಬು, ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಕಳಿಸುವುದಾಗಿ ತಿಳಿಸಿದರು. ತಂಡದಲ್ಲಿ ಕಂದಾಯ ಪರಿವೀಕ್ಷಕ ರಾಜಶೇಖರ ಹಾಗೂ ಗ್ರಾಮದ ಮುಖಂಡ ಜಿ.ಟಿ. ಬಸವರಾಜ್, ಎನ್. ಕರಿಯಪ್ಪ, ಆರ್. ಯರ್ರೆಗೌಡ, ಕಗ್ಗಲ್ ಈರಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

