ಪರಿಹಾರಕ್ಕೆ ಆಗ್ರಹ: ರೇಲ್ವೆ ಕಾಮಗಾರಿಗೆ ಅಡ್ಡಿ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಸೆ. 26
ಕೊಟ್ಟೂರು -ಹರಿಹರ ರೈಲು ಮಾರ್ಗಕ್ಕೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ರೇಲ್ವೆ ಕಾಮಗಾರಿಗೆ ಅಡ್ಡಿಪಡಿಸಿ ಪ್ರತಿಭಟನೆ ಮಾಡಿದ ಘಟನೆ ಸಮೀಪದ ಬೆಣ್ಣಿಹಳ್ಳಿ ಬಳಿ ಗುರುವಾರ ಜರ ುಗಿದೆ.
ರೈಲು ಮಾರ್ಗದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಅಲ್ಪ ಸ್ವಲ್ಪ ಕಾಮಗಾರಿ ನಡೆಸಲು ಸಿಬ್ಬಂದಿ ಟ್ರಾಲಿ ತೆಗೆದುಕೊಂಡು ಬೆಣ್ಣಿಹಳ್ಳಿ ಗ್ರಾಮದ ಬಳಿ ಮಧ್ಯಾಹ್ನ ಬಂದಾಗ ಬೆಣ್ಣಿಹಳ್ಳಿ, ಕಡಕೋಳ ಸುತ್ತಮುತ್ತಲ ಭೂಮಿ ಕಳೆದುಕೊಂಡ ರೈತರು ರೈಲ್ವೆ ಹಳಿ ಹತ್ತಿರ ಆಗಮಿಸಿ ಕಾಮಗಾರಿ ಮಾಡದಂತೆ ತಡೆ ಹಿಡಿದಿದ್ದಾರೆ. ಈಗ ನೀಡಿರುವ ಪರಿಹಾರ ಸಾಲದು, ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಿಲುವಂಜಿ ರೈತ ಪ್ರಭಾಕರ ಮಾತನಾಡಿ, ನಾವು ಐವರು ಸಹೋದರರಿಗೆ ಇದ್ದಿದ್ದು ಐದು ಎಕರೆ ಭೂಮಿ. ಅದರಲ್ಲಿ 3 ಎಕರೆ ರೈಲು ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ರು. 72 ಸಾವಿರ ಪರಿಹಾರ ಕೊಟ್ಟಿದ್ದಾರೆ. ಈ ಪರಿಹಾರ ಬಹಳ ಕಡಿಮೆ ಆಗಿದೆ. ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಹೆಚ್ಚಿನ ಪರಿಹಾರ ಸಿಗುವವರೆಗೂ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಹೇಳಿದರು.
ಮಲ್ಲಪ್ಪ ಎಂಬವರು 26 ಸೆಂಟ್ಗೆ ರು. 14 ಸಾವಿರ, ಕಡಕೋಳ ಹನುಮಂತಪ್ಪ ಅವರ 1.25 ಎಕರೆಗೆ ರು. 45 ಸಾವಿರ, ರೇವಣ್ಣ ಅವರ 4 ಎಕರೆ ನಿರಾವರಿ ಜನೀಮಿಗೆ ತಲಾ 1 ಎಕರೆಗೆ ರು. 38 ಸಾವಿರದಂತೆ ನೀಡಲಾಗಿದೆ. ಸಿ. ಚೆನ್ನಪ್ಪ ಅವರ 1.20 ಎಕರೆಗೆ ರು. 30 ಸಾವಿರ, ಅಡವಿಹಳ್ಳಿ ಎ.ಜಿ. ವಿಶ್ವನಾಥ ಅವರ ಪಂಪ್ಸೆಟ್ ಉಳ್ಳ 3.50 ಎಕರೆ ಭೂಭಾಗಕ್ಕೆ 1 ಎಕರೆಗೆ ರು. 1 ಲಕ್ಷದಂತೆ ನೀಡಲಾಗಿದೆ. ಹೀಗೆ ಅವೈಜ್ಞಾನಿಕ ಪರಿಹಾರ ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಬೇಡಿಕೆಗಳು: ಹರಿಹರ ಭಾಗದಲ್ಲಿ ನೀಡಿರುವಂತೆ ಇಲ್ಲಿಯೂ ಹೆಚ್ಚಿನ ಪರಿಹಾರ ನೀಡಬೇಕು. ಜಮೀನು ಕಳೆದುಕೊಂಡ ಮನೆಗೊಬ್ಬರಿಗೆ ಉದ್ಯೋಗ ಕೊಡಬೇಕು. ನೀರು ನಿಲ್ಲುವಂತೆ ಅವೈಜ್ಞಾನಿಕ ಸೇತುವೆ ನಿರ್ಮಿಸಿದ್ದು, ಸರಿಪಡಿಸಬೇಕು ಎಂದು ಅವರು ರೇಲ್ವೆ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಅಂಡರ್ಪಾಸ್ ಸೇತುವೆಗಳನ್ನು ತೀರ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರೈತರು ಸೊಪ್ಪೆ, ತೆನೆಗಳನ್ನು ಬಂಡಿ ಮೇಲೆ ಹೇರಿಕೊಂಡು ಬರುವ ಹಾಗಿಲ್ಲ ಎಂದು ರೈತ ರೇವಣ್ಣ ದೂರಿದರು.
ಎಇಇ ಆಗಮನ: ರೇಲ್ವೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ ಅವರು ಬೆಣ್ಣಿಹಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸಿ ರೈತರ ಮನವೊಲಿಸುವ ಪ್ರಯತ್ನ ವಿಫಲವಾಯಿತು. ಅನಂತರ ರೈತರ ಬೇಡಿಕೆಗಳನ್ನು ಪಟ್ಟಿ ಮಾಡಿಕೊಂಡ ಅವರು ರೇಲ್ವೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗೆ ಮಾಹಿತಿ ಕೊಡುವುದಾಗಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ರೈತರಾದ ಅಡವಿಹಳ್ಳಿ ವಿಶ್ವನಾಥ, ಪಿ. ಶಂಬಣ್ಣ, ಜಿ. ಪಂಪಣ್ಣ, ತೂಲಹಳ್ಳಿ ಕೆಂಚಪ್ಪ, ಮಲ್ಲಪ್ಪ, ಹನುಮಂತಪ್ಪ ಸೇರಿದಂತೆ ಅನೇಕ ರೈತರು ಕಾಮಗಾರಿ ಮಾಡಲು ಬಿಡದೆ ಪ್ರತಿಭಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

