ಜೀವದ ಜತೆ ವೈದ್ಯಾಧಿಕಾರಿ ಚೆಲ್ಲಾಟ: ಆಕ್ರೋಶ
ಹೂವಿನಹಡಗಲಿ: ಏನ್ರಿ ಸಾರ್ವಜನಿಕರ ಜೀವದ ಜತೆಗೆ ಚೆಲ್ಲಾಟವಾಡುತ್ತೀರಾ? ನಿಮಗೇನಾದ್ರು ಮಾನವೀಯತೆ ಇದೇನಾ?
ಹೀಗೆಂದು ತಾಲೂಕು ವೈದ್ಯಾಧಿಕಾರಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಇಲ್ಲಿನ ತಾಪಂ ಮಲ್ಲಿಗೆ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಜರುಗಿತು. ತಾಲೂಕಿನ ಬಸರಹಳ್ಳಿ ತಾಂಡಾದ ಜನರಿಗೆ ಡೆಂಘೀ ತಗುಲಿದ್ದು, ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ, ವೈದ್ಯರನ್ನು ನಿಯೋಜಿಸಿ ಎಂದು ಹೇಳಿದರೂ ಯಾರು ಬಂದಿಲ್ಲ, ನೀವು ಅಲ್ಲಿಗೆ ಭೇಟಿ ನೀಡಿಲ್ಲ ಎಂದು ತಾಪಂ ಸದಸ್ಯ ಕೃಷ್ಣನಾಯ್ಕ ಟಿಎಚ್ಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಕ್ರಮ ತೆಗೆದುಕೊಳ್ಳಿ: ಇದಕ್ಕುತ್ತರಿಸಿದ ಟಿಎಚ್ಒ ಪಿ.ಬಿ. ನಾಯ್ಕ, ನಾನು ತಾಂಡಾಕ್ಕೆ ಭೇಟಿ ನೀಡಿಲ್ಲ ನಿಜ, ಆದರೆ ಬೇರೊಬ್ಬ ವೈದ್ಯರನ್ನು ನಿಯೋಜಿಸಿದ್ದೆ. ಆದರೆ ಡೆಂಘೀ ಪ್ರಕರಣ ಪತ್ತೆ ಹಚ್ಚುತ್ತೇವೆಂದು ಹೇಳಿದಾಗ ಸಿಟ್ಟಾದ ಕೃಷ್ಣ ನಾಯ್ಕ, ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದಾಗ ತಮ್ಮ ಮೇಲೆ ಶಿಸ್ತುಕ್ರಮ ಜರುಗಿಸಿ ಎಂದು ಟಿಎಚ್ಒ ನೇರವಾಗಿ ಹೇಳಿದರು.
ಪ್ರಭಾರಿ ತಾಪಂ ಇಒ ಯೋಗಾನಂದ ಮಾತನಾಡಿ, ಡೆಂಘೀ ಎಂದಾಗ ತಕ್ಷಣ ಕ್ರಮ ಕೈಗೊಳ್ಳಬೇಕು, ಸಮರ್ಪಕ ರೀತಿಯಲ್ಲಿ ಜನಪ್ರತಿನಿಧಿಗಳಿಗೆ ಉತ್ತರ ನೀಡುವುದನ್ನು ಅಧಿಕಾರಿಗಳು ಕಲಿಯಬೇಕು. ತಾಪಂ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಡೆಂಘೀಗೆ ಕ್ರಮ ಕೈಗೊಳ್ಳಬೇಕಿದೆ, ಚರಂಡಿ ಸ್ವಚ್ಛತೆ ಹಾಗೂ ನೀರಿನ ಗುಂಡಿಗಳನ್ನು ಮುಚ್ಚಲು ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಕೈಗೊಳ್ಳಬೇಕೆಂದು ಸೂಚಿಸಿದರು.
ಸಭೆಗೆ ಬಂದರು ಫಲಾನುಭವಿಗಳು: ಬಸವ ವಸತಿ ಹಾಗೂ ಇಂದಿರಾ ಅವಾಸ ಮನೆ ನಿರ್ಮಾಣ ಮಾಡಿ 10 ತಿಂಗಳು ಕಳೆದರೂ ಹಣ ಬಿಡುಗಡೆಯಾಗಿಲ್ಲ. ತಾಂತ್ರಿಕ ತೊಂದರೆಗಳಿಂದ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದಾಸರಹಳ್ಳಿ, ತಿಪ್ಪಾಪುರ ಗ್ರಾಮಗಳ ಫಲಾನುಭವಿಗಳು ತಾಪಂ ಸಾಮಾನ್ಯ ಸಭೆಗೆ ಬಂದು ತಮ್ಮ ಅಳಲನ್ನು ತೋಡಿಕೊಂಡರು. ಸಮಸ್ಯೆ ಬಗೆಹರಿಸಿ ಬಡವರಿಗೆ ನೀಡಿರುವ ಮನೆಗಳಿಗೆ ಹಣ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಹರವಿ ಪ್ರಕಾಶ ತಿಳಿಸಿದರು.
ಬಸ್ ಬಿಡಿ: ರಾಜವಾಳ, ಅಲ್ಲಿಪುರ, ಮಾಗಳ ಹಾಗೂ ಕೆ. ಅಯ್ಯನಹಳ್ಳಿ ಗ್ರಾಮಗಳಿಗೆ ಬಸ್ ಬಿಡಲು ರಸ್ತೆ ಸರಿ ಇಲ್ಲದೆ ಬಹಳಷ್ಟು ತೊಂದರೆಯಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದರೂ ಹಿಡಿ ಮಣ್ಣು ಹಾಕಿಲ್ಲವೆಂದು ಸದಸ್ಯೆ ಪಿ. ದುರುಗಮ್ಮ ತರಾಟೆಗೆ ತೆಗೆದುಕೊಂಡಾಗ, ಜಿಪಂ ಅಧಿಕಾರಿ ಮಹೇಶಪ್ಪ ಮಾತನಾಡಿ, ರಸ್ತೆ ಅಭಿವೃದ್ಧಿಗೆ ಯಾವ ಅನುದಾನವಿಲ್ಲ. 10-15 ದಿನದೊಳಗೆ ಬಸ್ ಸಂಚರಿಸುವಂತೆ ತಗ್ಗು, ಗುಂಡಿಗಳಿಗೆ ಮಣ್ಣು ಹಾಕುತ್ತೇವೆಂದು ಹೇಳಿದರು.
ತಾಪಂ ಅಧ್ಯಕ್ಷೆ ಪ್ರೇಮಾ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ತಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

