ಅಮೂ ಹೇಳಿಕೆ ಖಂಡಿಸಿ ವಿಪ್ರರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 30
ಬ್ರಾಹ್ಮಣರಲ್ಲಿ ಗೋಮಾಂಸ ಸೇವಿಸುವ ಪರಿಪಾಠವಿತ್ತು ಎಂಬ ಡಾ. ಯು.ಆರ್. ಅನಂತಮೂರ್ತಿ ಹೇಳಿಕೆ ಖಂಡಿಸಿ ಮತ್ತು ಅನಂತಮೂರ್ತಿ ಅವರಿಗೆ ನೀಡಿರುವ ಜ್ಞಾನಪೀಠ ಪ್ರಶಸ್ತಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ತಾಲೂಕು ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆ ಉದ್ದೇಶಿಸಿ ಬ್ರಾಹ್ಮಣ ಸಂಘದ ಮುಖಂಡ ಶ್ರೀಕರ ಆಚಾರ್ಯ ಮಾತನಾಡಿ, ಅನಂತಮೂರ್ತಿ ಆಧಾರ ರಹಿತ ಹೇಳಿಕೆ ನೀಡಿದ್ದನ್ನು ವಾಪಸ್ ಪಡೆದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಬ್ರಾಹ್ಮಣರು ಗೋಹತ್ಯೆ ಮಾಡಿ ಗೋಮಾಂಸ ತಿನ್ನುತ್ತಿದ್ದರು ಎನ್ನುವುದು ಸುಳ್ಳು. ವೇದೋಪನಿಷತ್, ಪುರಾಣಗಳಲ್ಲೂ ಇದನ್ನು ಸೂಚಿಸಿಲ್ಲ. ಅದಕ್ಕೆ ಆಧಾರವೂ ಇಲ್ಲ. ಗೋವುಗಳಿಗೆ ಮಾತೃಸ್ಥಾನ ಕಲ್ಪಿಸಿರುವ ಹಿಂದೂ ಧರ್ಮ ಗ್ರಂಥಗಳು ಗೋಹತ್ಯೆ ಪ್ರೇರೇಪಿಸಲು ಸಾಧ್ಯವೇ ಇಲ್ಲ. ಅನಂತಮೂರ್ತಿ ಕಪೋಲ ಕಲ್ಪಿತ ಹೇಳಿಕೆ ನೀಡಿದ್ದಾರೆ ಎಂದರು.
ಸ್ವಯಂ ಘೋಷಿತ ಜ್ಞಾನಿ: ಬ್ರಾಹ್ಮಣ ಸಂಘದ ಮುಖಂಡ ಹೊಳಲು ಕೃಷ್ಣಮೂರ್ತಿ ಮಾತನಾಡಿ, ಜನ್ಮ ಜನ್ಮಗಳನ್ನೆತ್ತಿ ಬಂದರೂ ವೇದಗಳ ನಿಗೂಢತೆ, ಅವುಗಳ ನಿಜ ಅರ್ಥಗಳನ್ನು ಅದರಲ್ಲಿರುವ ಪರಮಶ್ರೇಷ್ಠ ವಿಚಾರಗಳನ್ನು ಅರ್ಥೈಸಿಕೊಳ್ಳುವುದು ಅತಿ ಕಷ್ಟ. ಆದರೆ ವೇದಗಳಿಗೆ ತನ್ನದೇ ನಿಕೃಷ್ಟ ಅರ್ಥ, ಅಧಾರ ರಹಿತ ಅರ್ಥಗಳನ್ನು ಮಂಡಿಸುತ್ತಾ, ಬ್ರಾಹ್ಮಣರನ್ನು ಅವಹೇಳನ ಮಾಡುವ ಮತ್ತು ಗೋಹತ್ಯೆ, ಗೋಮಾಂಸ ಸೇವನೆಗೆ ಪರೋಪಕ್ಷವಾಗಿ ಬೆಂಬಲ ನೀಡುವ ಮೂಲಕ ಕೆಲ ವರ್ಗಗಳನ್ನು ಸಂತೋಷಪಡಿಸಿ, ಅವರಿಂದ ಪರಮ ಪಂಡಿತನೆಂದು, ಜಾತ್ಯತೀತನೆಂದು ಕರೆಸಿಕೊಳ್ಳಲು ಹವಣಿಸಿರುವ ಸ್ವಯಂ ಷೋಷಿತ ಜ್ಞಾನಿ ಅನಂತಮೂರ್ತಿ ಸಮಾಜಘಾತುಕ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸೂಕ್ತ ಕ್ರಮ ಜರುಗಿಸಿ: ಬ್ರಾಹ್ಮರ ಸಂಘದ ಇನ್ನೋರ್ವ ಮುಖಂಡ ಗೋವಿಂದ ಕುಲಕರ್ಣಿ ಮಾತನಾಡಿ, ಅನಂತಮೂರ್ತಿ ವಿಘ್ನ ಸಂತೋಷಿ (ಸ್ಯಾಡಿಸ್ಟ್) ಮನೋಭಾವ ಹೊಂದಿರುವ ಸಮಾಜ ವಿದ್ರೋಹಿ ಗುಣಗಳನ್ನು ಹೊಂದಿರುವ ವ್ಯಕ್ತಿ. ನಮ್ಮ ದೇಶದ ಮನೋಧರ್ಮ, ದೇಶ ಅಂಗೀಕರಿಸಿದ ಸಂವಿಧಾನದ ಮೂಲ ಆಶಯಗಳಿಗೆ ಭಂಗ ಉಂಟು ಮಾಡುತ್ತಿದ್ದಾರೆ. ಆ ಮೂಲಕ ಜಾತಿ ಜಾತಿಗಳ ನಡುವೆ ವೈಷಮ್ಯ ಹೆಚ್ಚಿಸುವ ಕಾರ್ಯಕ್ಕೆ ಅನಂತಮೂರ್ತಿ ಮುಂದಾಗಿದ್ದಾರೆ. ಇಂತಹ ವ್ಯಕ್ತಿಗಳಿಂದ ಶಾಂತಿ, ಸಹಬಾಳ್ವೆಗೆ ಭಂಗ ಉಂಟಾಗುತ್ತದೆ. ಹೀಗಾಗಿ ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬ್ರಾಹ್ಮಣ ಸಂಘದ ಮುಖಂಡ ಅಪ್ಪರಾವ್, ಡಾ. ಹನುಮಂತರಾವ್ ಮಾತನಾಡಿದರು. ಬ್ರಾಹ್ಮಣ ಸಂಘದ ಮುಖಂಡ ನರಸಿಂಹಮೂರ್ತಿ ಅಪ್ಪಣ್ಣ ಮನವಿ ಪತ್ರವನ್ನು ಓದಿ ತಹಸೀಲ್ದಾರ್ ರಮೇಶ್ ಕೋನರಡ್ಡಿ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಯುವ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

