ಕ್ಯಾಮೆರಾ ಮುಂದೆ ಕಾಳಿಂಗಪ್ಪನ ಫೂತ್ಕಾರ!
ಕನ್ನಡಪ್ರಭ ವಾರ್ತೆ, ಹೊನ್ನಾವರ, ಏ. 1
ಲೋಕಸಭಾ ಚುನಾವಣೆಯ ದಿನಗಳು ಸಮೀಪಿಸುತ್ತಿರುವಂತೆ ರಾಜಕಾರಣಿಗಳ, ವಿವಿಧ ಪಕ್ಷಗಳ ಮುಖಂಡರ ಪ್ರೆಸ್ಮೀಟ್ ಸಹ ಜೋರಾಗೇ ಇರುತ್ತಿದೆ. ದಿಢೀರ್ ಪತ್ರಿಕಾಗೋಷ್ಠಿ ನಡೆಯುತ್ತದೆ. ಮಾಧ್ಯಮದವರು, ಪತ್ರಕರ್ತರು ಸಹ ಬ್ರೇಕಿಂಗ್ ನ್ಯೂಸ್ಗಾಗಿ ದೌಡಾಯಿಸುತ್ತಾರೆ. ರಾಜಕಾರಣಿಗಳು ಪ್ರೆಸ್ಮೀಟ್ ಮಾಡುವಂತೆ ತಾನೂ ಯಾಕೆ ಮಾಡಬಾರದು ಎಂದು ಕಾಡಿನಲ್ಲಿ ಬುಸ್ಗುಡುತ್ತ 'ರಾಜ'ನಂತೆ ಮೆರೆವ ಕಾಳಿಂಗ ಸರ್ಪ ಸಹ ಪ್ರೆಸ್ಮೀಟ್ ಮಾಡಿದ ಪ್ರಸಂಗ ಏ. 1ರಂದು ಹೊನ್ನಾವರದಲ್ಲಿ ನಡೆದಿದೆ! ಆದರೆ ಇದು ಏಪ್ರಿಲ್ ಫೂಲ್ ಅಲ್ಲ...
ಮಂಗಳವಾರ ಮಟಮಟ ಮಧ್ಯಾಹ್ನ 3 ಗಂಟೆ ವೇಳೆ ಡಿಎಫ್ಒ ಬಂಗ್ಲೆ ಬಳಿ ಉರಗ ತಜ್ಞ ಕರ್ಕಿಯ ನಾಗರಾಜ್ ಶೇಟ್ ಅವರು 12 ಅಡಿ ಉದ್ದದ ಭಾರಿ ಗಾತ್ರದ ಕಾಳಿಂಗಸರ್ಪ ಹಿಡಿದು ತಂದಿರುವುದಾಗಿ ವರ್ತಮಾನ ದೊರೆತ ವೇಳೆ ಅಲ್ಲಿ ಹೋಗಿ ನೋಡಿದರೆ... ಅದಾಗಲೇ ಕಾಳಿಂಗಪ್ಪ ಬುಸ್ ಬುಸ್ ಎಂದು ತನ್ನ ದೈತ್ಯ ಗಾತ್ರದ ಹೆಡೆ ಬಿಚ್ಚಿ ಅಲ್ಲಾಡಿಸುತ್ತ, ಸೇರಿದ್ದ ದೃಶ್ಯಮಾಧ್ಯಮ, ಪತ್ರಿಕಾ ಮಾಧ್ಯಮದವರೊಂದಿಗೆ 'ಪ್ರೆಸ್ಮೀಟ್' ಆರಂಭಿಸಿತ್ತು.
ಕಾಡಿನಂಚಿನ ಗುಂಡಬಾಳ ನಿವಾಸಿಯೋರ್ವರ ಮನೆಗೆ ಅತಿಥಿಯಾಗಿ ಬಂದಿದ್ದ ಕಿಂಗ್ಕೋಬ್ರಾವನ್ನು ನಾಗರಾಜ್ ಶೇಟ್ ಚಾಣಾಕ್ಷತನದಿಂದ ಹಿಡಿದು ಅರಣ್ಯ ಇಲಾಖೆಯ ವಶಕ್ಕೆ ನೀಡಲು ತಂದಿದ್ದರು. ಅಪರೂಪದ ಕಿಂಗ್ಕೋಬ್ರಾವನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದರು. ಬೆಳಗ್ಗೆ ರಾಜಕಾರಣಿಯೋರ್ವರು ಏರ್ಪಡಿಸಿದ್ದ ಪ್ರೆಸ್ಮೀಟ್ಗಾಗಿ ಆಗಮಿಸಿದ್ದ ದೃಶ್ಯಮಾಧ್ಯಮದವರಿಗೆ ಹಾಗೂ ಪತ್ರಕರ್ತರ ಸುದ್ದಿಯೊಡಲಿಗೆ ಕಿಂಗ್ಕೋಬ್ರಾ ಗ್ರಾಸವಾಯಿತು. ಉರಗ ತಜ್ಞ ನಾಗರಾಜ್ ಶೇಟ್ 'ಹೈಕಮಾಂಡ್'ನಂತೆ ಕಾಳಿಂಗ ಸರ್ಪದ ಬಾಲ ಹಿಡಿದು ಪ್ರದರ್ಶಿಸಿದರು. ರಾಜಕಾರಣಿಗಳಿಗಿಂತ ತಾನೇನು ಕಮ್ಮಿ ಎಂಬಂತೆ ಒಮ್ಮೆ ಹೆಡೆಯೆತ್ತಿ ಫೂತ್ಕರಿಸಿದರೆ ಇನ್ನೊಮ್ಮೆ ಹೈಕಮಾಂಡ್ ಹಿಡಿತದಲ್ಲಿ ತೆವಳಿತು. ವಿಡಿಯೋ ಕ್ಯಾಮೆರಾಕ್ಕೂ ಮೂತಿಯಿಟ್ಟು ಹಿಸ್... ಬುಸ್.. ಎಂದು ಹೇಳಿಕೆ ನೀಡಿತು. ಅದರ ಹೇಳಿಕೆ ಮಾತ್ರ ಅರ್ಥವಾಗಲಿಲ್ಲ. ಹೈಕಮಾಂಡ್ ಒತ್ತಡಕ್ಕೆ ಮಣಿದು ಕಾಳಿಂಗಪ್ಪ ಮರಳಿ ಚೀಲ ಸೇರಿ, ಮಾತೃಸ್ಥಳ ಸೇರಿ ಅರಣ್ಯಾಧಿಕಾರಿಗಳಿಂದ ಬಿಡುಗಡೆಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

