ಬಂಡವಾಳಶಾಹಿಗೆ ಪಕ್ಷಗಳ ಮಣೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಏ. 4
ಕಾಂಗ್ರೆಸ್, ಬಿಜೆಪಿ ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದ್ದರೆ ಅತ್ತ ಎಡಪಂಥಿ ಪಕ್ಷಗಳಾದ ಸಿಪಿಐ, ಸಿಪಿಎಂ ಜನಾಂದೋಲ ಹೋರಾಟಕ್ಕೆ ಹಿಂದೇಟು ಹಾಕಿ ಅಧಿಕಾರಕ್ಕೆ ಅಂಟಿಕೊಂಡಿವೆ ಎಂದು ಎಸ್ಯುಸಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಸೋಮಶೇಖರ್ ಆರೋಪಿಸಿದ್ದಾರೆ.
ಎಸ್ಯುಸಿಐದಿಂದ ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಎ. ದೇವದಾಸ್ ಅಭ್ಯರ್ಥಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಎಸ್ಯುಸಿಐ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಬಂಡವಾಳ ಶಾಹಿಗಳಿಗೆ ರತ್ನಗಂಬಳಿ ಹಾಕಿ ಸ್ವಾಗತಿಸುವ ಮೂಲಕ, ಉದಾರೀಕರಣ, ಜಾಗತೀಕರಣ ನೀತಿಗಳನ್ನು ಜಾರಿಗೊಳಿಸಿದ್ದಾರೆಂದು ದೂರಿದರು.
ದೇಶದಲ್ಲಿ 5 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ. ಗುಜರಾತ್ ದೇಶದಲ್ಲೇ ನಂಬರ್ ಒನ್ ಎಂದು ಹೇಳುವ ಮೋದಿ, ರು. 1.25 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಗುಜರಾತ್ನಲ್ಲಿ 7 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಯರ ಆತ್ಮಹತ್ಯೆಯಲ್ಲಿ ಗುಜರಾತ್ 2 ಸ್ಥಾನದಲ್ಲಿದೆ. ಅಭಿವೃದ್ಧಿ ವಿಚಾರದಲ್ಲಿ 17 ಸ್ಥಾನ ಪಡೆದಿದ್ದರೆ, ಗುಜರಾತ್ ಹಸಿವು ಮುಕ್ತ ಮಾಡದೇ 4 ಸ್ಥಾನಕ್ಕೆ ಧಕ್ಕಿರುವುದು ದುರಂತ ಎಂದರು.
ಜಿಂದಾಲ್ ಕಾರ್ಖಾನೆಗೆ ತುಂಗಭದ್ರಾ ನದಿಯಿಂದ 2 ಟಿಎಂಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವ ಸರ್ಕಾರ ಇದೇ ನೀರನ್ನು ಬಳಸಿ ರೈತರಿಗೆ ನೀರಾವರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾದರೆ ಇವರಿಗೆ ಎಲ್ಲಿದೆ ರೈತಪರ ಕಾಳಜಿ ಎಂದು ಪ್ರಶ್ನಿಸಿದರು.
ಬಳ್ಳಾರಿ ಲೋಕಸಭಾ ಅಭ್ಯರ್ಥಿ ಎ. ದೇವದಾಸ್ ಮಾತನಾಡಿ, ಜಿಲ್ಲೆಯ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಆದರೆ, ಹಳ್ಳಿಗಳಿಗೆ ಇಂದಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನೀರಾವರಿ ವ್ಯವಸ್ಥೆ ಇಲ್ಲದೇ ಜಿಲ್ಲೆಯಲ್ಲಿ ಶೇ. 30ರಷ್ಟು ಮಾತ್ರ ನೀರಾವರಿ ಪ್ರದೇಶ ಹೊಂದಿದೆ. ಇದಕ್ಕೆ ಮೂಲ ಕಾರಣ ಈವರೆಗೂ ಆಳ್ವಿಕೆ ಮಾಡಿದ ಸರ್ಕಾರ ಧೋರಣೆಗಳೇ ಕಾರಣ ಎಂದು ಆರೋಪಿಸಿದರು.
ತನ್ನ ಸ್ಪರ್ಧೆ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುತ್ತದೆ. ಜನಾಂದೋಲನ ಹೋರಾಟದ ಮೂಲಕ ದೇಶ ಕಟ್ಟುವ ಕೆಲಸ ಮಾಡಬೇಕಿದೆ ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ರಹಮತ್ ಬೀರಬ್ಬಿ ಮಾತನಾಡಿ, ಲೋಕಸಭೆಯಲ್ಲಿ ಪ್ರಜಾತಾಂತ್ರಿಕ ಹೋರಾಟಗಳನ್ನು ಕಟ್ಟಬೇಕಿದೆ. ಈ ಬೇಡಿಕೆಯೊಂದಿಗೆ ಸ್ಪರ್ಧಿ ಸುತ್ತಿರುವ ಎಸ್ಯುಸಿಐಗೆ ಮತದಾರರು ಗಾಜಿನ ಲೋಟಕ್ಕೆ ಮತ ಹಾಕಬೇಕೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

