ಬಳ್ಳಾರಿ

ಕಾಂಗ್ರೆಸ್ ವಿಸರ್ಜಿಸದೆ ಅಧಿಕಾರಕ್ಕೇರಿ ಲೂಟಿ

Published On :

ಕೊಟ್ಟೂರು: ಕಾಂಗ್ರೆಸ್ ವಿಸರ್ಜನೆ ತಡೆದ ನೆಹರು ವಂಶಸ್ಥರು ಅದೇ ಹೆಸರು ಬಳಸಿ ಅಧಿಕಾರಕ್ಕೇರಿ ನಿರಂತರ ದೇಶ ಲೂಟಿ ಮಾಡುತ್ತಿದ್ದು, ಮತದಾರರು ಈ ಬಾರಿ ಕಾಂಗ್ರೆಸ್‌ನ್ನು ಬೇರು ಸಮೇತ ಕಿತ್ತೊಗೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಪಟ್ಟಣದ ತೇರುಬಯಲಿನಲ್ಲಿ ಗುರುವಾರ ರಾತ್ರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಚುನಾವಣಾ ಪ್ರಚಾರದ ಬಹಿರಂಗಸಭೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದಾಗ ಕಾಂಗ್ರೆಸ್‌ನ್ನು ವಿಸರ್ಜಿಸುವಂತೆ ಸೂಚಿಸಿದ್ದರು. ನೆಹರು ಮಾತ್ರ ಗಾಂಧೀಜಿ ಸಲಹೆ ದೂರೀಕರಿಸಿ ತಮ್ಮ ಕುಟುಂಬದ ಆಡಳಿತಕ್ಕಾಗಿ ಕಾಂಗ್ರೆಸ್‌ನ್ನು ಉಳಿಸಿಕೊಂಡು ಸ್ವಾರ್ಥ ಮೆರೆದರು. ಈಗಿರುವುದು ನಕಲಿ ಕಾಂಗ್ರೆಸ್. ಈಗ ರಾಷ್ಟ್ರದೆಲ್ಲೆಡೆ ಮೋದಿ ಅಲೆ ಸುನಾಮಿ ಚಂಡಮಾರುತದಂತೆ ಬೀಸುತ್ತಿದ್ದು, ಮೋದಿ ಪ್ರಧಾನಿಯಾಗುವುದು ನಿಶ್ಟಿತ. ಇದನ್ನು ನಿಲ್ಲಿಸುವ ಶಕ್ತಿ ಕಾಂಗ್ರೆಸ್‌ಗಿಲ್ಲ ಎಂದರು.
ರಾಜ್ಯದಲ್ಲಿ ತಮ್ಮ ನೇತೃತ್ವದ ಬಿಜೆಪಿ ಸರ್ಕಾರ 43 ನೂತನ ತಾಲೂಕುಗಳ ರಚನೆಗೆ ಕ್ರಮ ಕೈಗೊಂಡು ಬಜೆಟ್‌ನಲ್ಲಿ ತಲಾ ರು. 2 ಕೋಟಿ ನಿಗದಿಗೊಳಿಸಿ ಶೀಘ್ರ ಜಾರಿಗೆ ನಿರ್ಧರಿಸಲಾಗಿತ್ತು. ಅನಂತರ ಬಂದ ಕಾಂಗ್ರೆಸ್ ಸರ್ಕಾರ ಅದು ಬಿಜೆಪಿ ಯೋಜನೆಯೆಂದು ತಡೆಯಿತು. ಅದನ್ನೇಕೆ ತಡೆದಿದ್ದೀರಿ ಎಂದು ಮತದಾರರು ಸಿಎಂರನ್ನು ಕೇಳಿ ಎಂದರು.
ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ರಾಷ್ಟ್ರದ ಜನ ಎದುರು ನೋಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಎಷ್ಟೇ ಸಾಹಸಪಟ್ಟರೂ ಮೋದಿ ಪ್ರಧಾನಿ ಆಗುವುದನ್ನು ತಪ್ಪಿಸಲಾಗುವುದಿಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ. ನೇಮಿರಾಜ್ ನಾಯ್ಕ, ವಕೀಲ ಎಂ.ಎಂ.ಜೆ. ಸ್ವರೂಪಾನಂದ, ಕೊಟ್ಟೂರು ಅಧ್ಯಕ್ಷ ಬೋರ್‌ವೆಲ್ ತಿಪ್ಪೇಸ್ವಾಮಿ, ಪಿ. ಸುಧಾಕರಗೌಡ, ಬಸವರಾಜ್ ಮಾತನಾಡಿದರು.
ಸೇರ್ಪಡೆ: ಪುರಸಭೆ ಮಾಜಿ ಅಧ್ಯಕ್ಷ ಕೆ. ಜಾತಪ್ಪ, ಮಾಜಿ ಸದಸ್ಯರಾದ ಪಿ. ಸುಧಾಕರಗೌಡ, ಎಚ್. ಗುರುಬಸವರಾಜ್, ಎನ್. ಅಪ್ಪಾಜಿ ಮತ್ತಿತರರ ಮುಖಂಡರು ಬಿಜೆಪಿಗೆ ಸೇರಿದರು. ಸಂಸದೆ ಜೆ. ಶಾಂತಾ, ಮುಖಂಡರಾದ ಪಿ. ಚನ್ನಬಸವನಗೌಡ, ಎಸ್. ತಿಂದಪ್ಪ, ಕೊಟ್ರೇಶ್ ಕಾಮಶೆಟ್ಟಿ, ಶಿರಿಬಿ ಕೊಟ್ರೇಶ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.