ಮೋದಿ ಬಗ್ಗೆ ವೈಯಕ್ತಿಕ ಟೀಕೆ ಸಲ್ಲದು
ಬಳ್ಳಾರಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಮಾಡಲು ಬೇರೆ ಕೆಲಸ ಇಲ್ಲದ ಕಾಂಗ್ರೆಸ್ನವರು ವೈಯಕ್ತಿಕ ಟೀಕೆ ಮಾಡಲು ಮುಂದಾಗಿದ್ದಾರೆಂದು ಬಿಜೆಪಿ ಸ್ಟಾರ್ ಪ್ರಚಾರಕಿ, ಚಿತ್ರನಟಿ ಶ್ರುತಿ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕ ಟೀಕೆ ಮಾಡುವ ಕ್ರಮ ಸರಿಯಲ್ಲ. ಇದನ್ನು ಹೊರತುಪಡಿಸಿ ವಿಷಯಾಧಾರಿತ ವಿಷಯಗಳ ಕುರಿತು ಚರ್ಚಿಸಲಿ. ಪ್ರಚಾರ ಕಾರ್ಯಕ್ಕಾಗಿ ಚುನಾವಣಾ ಆಯೋಗದ ಅನುಮತಿ ಪಡೆಯುವುದೆ ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ಸಾಕಷ್ಟು ಮತದಾರರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಬಳ್ಳಾರಿ, ಕಂಪ್ಲಿಯಲ್ಲಿ ಸೋಮವಾರವೇ ಮಾಡಬೇಕಿದ್ದ ಪ್ರಚಾರವನ್ನು ಜಿಲ್ಲಾಡಳಿತದಿಂದ ಅನುಮತಿ ಸಿಗದಿದ್ದರಿಂದ ಮಂಗಳವಾರ ಮಾಡಬೇಕಾಗಿದೆ. ಬಳ್ಳಾರಿ, ಕಂಪ್ಲಿ, ಶಿವಮೊಗ್ಗ, ಗಂಗಾವತಿ ಎಲ್ಲೆಡೆ ಇದೇ ರೀತಿ ಸಮಸ್ಯೆ ತಲೆದೋರಿದೆ ಎಂದರು.
ಪ್ರಚಾರದ ಅನುಮತಿಗೆಂದು ಜಿಲ್ಲಾಡಳಿತ ಬಳಿ ಹೋದ ಬಿಜೆಪಿ ಕಾರ್ಯಕರ್ತರನ್ನು ಬೆಳಗ್ಗೆಯಿಂದ ಸಂಜೆವರೆಗೂ ಕಾಯಿಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಚುನಾವಣಾ ಆಯೋಗವು ಪ್ರಚಾರಕ್ಕೆಂದು ತ್ವರಿತವಾಗಿ ಅನುಮತಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಸುಮಾ ರೆಡ್ಡಿ, ಜಿಪಂ ಮಾಜಿ ಉಪಾಧ್ಯಕ್ಷೆ ಮಂಜಮ್ಮ ಮಲ್ಲೇಶ್, ಕಾರ್ಯಕರ್ತೆಯರಾದ ಅಲವೇಲು, ಮುಖಂಡರಾದ ರಾಮಚಂದ್ರಯ್ಯ, ಯುವ ಮೋರ್ಚಾದ ನಗರ ಕಾರ್ಯದರ್ಶಿ ರಾಘವೇಂದ್ರ, ಮಲ್ಲೇಶ್ ಕುಮಾರ್ ಇದ್ದರು.
--
ತಂತ್ರದಿಂದ ಗೆಲವು ಸಾಧ್ಯವಿಲ್ಲ
ಬಳ್ಳಾರಿ: ಕ್ಷೇತ್ರದ ಚುನಾವಣೆ ಅಭ್ಯರ್ಥಿಗಳಲ್ಲಿ ಸಜ್ಜನ, ಸಚ್ಚಾರಿತ್ಯವುಳ್ಳ, ಉಚ್ಚನ್ಯಾಯಾಲಯ ನಿವೃತ್ತ ಮುಖ್ಯ ನ್ಯಾಯಾಧೀಶ, ಮಾಜಿ ಸಂಸದ ಎನ್.ವೈ. ಹನುಮಂತಪ್ಪ ಅವರನ್ನು ಆರಿಸಬೇಕೆಂದು ಕಾಂಗ್ರೆಸ್ ಮುಖಂಡರಾದ ಕೋಳೂರು ಬವಸನಗೌಡ, ವಿ.ಎನ್. ಗಿರಿಮಲ್ಲಪ್ಪ, ಮೀನಳ್ಳಿ ಎರಕಲಸ್ವಾಮಿ, ಜಿ. ಕೃಷ್ಣ, ಎಲ್. ಮಾರೆಣ್ಣ ಮುಂತಾದವರು ತಿಳಿಸಿದ್ದಾರೆ. 2009ರಲ್ಲಿ ಹಣ, ಹೆಂಡದಿಂದ ಮತದಾರರನ್ನು ದಾರಿ ತಪ್ಪಿಸಿದ್ದರೂ, ಈ ಸಂದರ್ಭದಲ್ಲೂ ಬಳ್ಳಾರಿ ಮತದಾರರು ಕಾಂಗ್ರೆಸ್ನ ಎನ್.ವೈ. ಹನುಮಂತಪ್ಪಗೆ ಹೆಚ್ಚಿನ ಮತಗಳನ್ನು ನೀಡಿದರು. ಕಾಣದ ಕೈಗಳ ತಂತ್ರದಿಂದ ಗೆಲ್ಲಲು ಆಗಲಿಲ್ಲ. ಕಳೆದ ಬಾರಿ ಆಯ್ಕೆಯಾದ ಸಂಸದರು ಜನರ ಸಮಸ್ಯೆಗಳನ್ನು ಆಲಿಸಲಿಲ್ಲ ಎಂದು ತಿಳಿಸಿದ್ದಾರೆ.
ಬಳ್ಳಾರಿ ಕ್ಷೇತ್ರಕ್ಕೆ ಕೇಂದ್ರದಿಂದ ಹೆಚ್ಚಿನ ಹಣ ತರಬೇಕಾದ ಚಾಕಚಕ್ಯತೆ, 371 ಜೆ ತಿದ್ದುಪಡಿ ಅನುಷ್ಠಾನ, ಬತ್ತುತ್ತಿರುವ ಅಂತರ್ಜಲ, ಬಾಡುತ್ತಿರುವ ಮಳೆಗೆ ಬದಲಿ ವ್ಯವಸ್ಥೆಯಾಗಿ ರೈತರಿಗೆ ಪರಿಚಯಿಸಬೇಕಾಗಿರುವ ವೈಜ್ಞಾನಿಕವಾಗಿ ನೀರಿನ ಬಳಕೆ, ಪ್ಲೋರೈಡ್ ಮುಕ್ತ ಜಿಲ್ಲೆಯಾಗಿಸಲು ಮಾಡಬೇಕಾಗಿರುವ ಕುಡಿಯುವ ನೀರಿನ ಶುದ್ಧೀಕರಣ ಮುಂತಾದ ಯೋಜನೆಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ಇಂಥ ಅಭಿವೃದ್ಧಿ ಪರ, ಜನಪರ ಕಾಳಜಿ, ಬದ್ಧತೆಯುಳ್ಳ, ದಕ್ಷ ಆಡಳಿತ ನಡೆಸುವ, ಕಾನೂನಿನ ಪಾಂಡಿತ್ಯ ಉಳ್ಳ, ನಾಡಿನ ಜನರ ಅನ್ನ, ಅಕ್ಷರ, ಆಶ್ರಯ, ಆರೋಗ್ಯದ ಬಗ್ಗೆ ಕಾಳಜಿಯುಳ್ಳ ಎನ್.ವೈ. ಹನುಮಂತಪ್ಪಗೆ ಮತ ಹಾಕುವಂತೆ ಕೋರಿದ್ದಾರೆ. ಯು. ವೆಂಕೋಬ, ಎ.ಕೆ. ಚೌದರಿ, ಡಿ. ರಾಮಾಂಜನೇಯ, ಜಿವೇಶ್ವರಿ, ನಾಗಜಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

