ಬಳ್ಳಾರಿ

ಸಿ ಕೆಟಗರಿ ಕಂಪನಿ ಅದಿರು ಲೆಕ್ಕಾಚಾರ

Published On :

- ಶಶಿಧರ ಮೇಟಿ
ಬಳ್ಳಾರಿ:
ಎ ಮತ್ತು ಬಿ ಕೆಟಗರಿಯಲ್ಲಿರುವ ಗಣಿ ಕಂಪನಿಗಳಲ್ಲಿ ಆರ್ ಅಂಡ್ ಆರ್ ಯೋಜನೆ ಅನುಷ್ಠಾನಗೊಳಿಸಿ, ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿದ ವರದಿಯಂತೆ ಗಣಿಗಾರಿಕೆ ನಡೆಸಲು ನ್ಯಾಯಾಲಯ ಅವಕಾಶ ಕಲ್ಪಿಸಿತ್ತು. ಈಗ ಸಿ ಕೆಟಗರಿ ಕಂಪನಿಗಳ ಗಣಿ ಗುತ್ತಿಗೆ ಪ್ರದೇಶದ ಜಾಗತಿಕ ಹರಾಜು ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ. ಈ ಪ್ರದೇಶದಲ್ಲಿರುವ ಅದಿರು ಪ್ರಮಾಣ ಅಳೆಯಲು ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ)ಗೆ ವಹಿಸಿಕೊಟ್ಟಿದೆ.
ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸಿಇಸಿ ಜಾಗತಿಕ ಟೆಂಡರ್ ಮೂಲಕ ಹರಾಜು ಹಾಕಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸಿ ಕೆಟಗರಿ ಕಂಪನಿಗಳ ಗಣಿ ಗುತ್ತಿಗೆ ಪ್ರದೇಶದಲ್ಲಿರುವ ಅದಿರು ಪ್ರಮಾಣ ಲೆಕ್ಕಹಾಕಿ ಮಾಹಿತಿ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಸುರತ್ಕಲ್‌ನ ಎನ್‌ಐಟಿಕೆಗೆ ಅದಿರು ಪ್ರಮಾಣದ ಲೆಕ್ಕಹಾಕಿ, ವರದಿ ನೀಡುವಂತೆ ಸಿಇಸಿ ಸೂಚಿಸಿದೆ.
ಒಂದು ಕಂಪನಿ ಅದಿರು ಪರಿಶೀಲನೆ:ಡಾ. ಹರ್ಷವರ್ಧನ್ ಮಾರ್ಗದರ್ಶನದಲ್ಲಿ ರಾಜೇಶ್ ಹಾಗೂ ಇನ್ನಿಬ್ಬರು ಇರುವ ತಂಡ ಪೈಲಟ್ ಯೋಜನೆಯಾಗಿ ಸಂಡೂರು ಸಮೀಪದ ರಾಮಘಡ ಪ್ರದೇಶದಲ್ಲಿರುವ ಕನೆಲಾಲ್ ದುದೇರಿಯಾ ಕಂಪನಿಯ 30.8 ಹೆಕ್ಟೇರ್ ಪ್ರದೇಶದಲ್ಲಿರುವ ಅದಿರು ಪ್ರಮಾಣವನ್ನು ಪತ್ತೆ ಹಚ್ಚಲು ಎನ್‌ಐಟಿಕೆ ಮುಂದಾಗಿದೆ. ಜಿಪಿಎಸ್ ಗುರುತಿಸಿ, ಟೋಟಲ್ ಸ್ಟೇಷನ್ ಸರ್ವೆ ಮೂಲಕ ತಂತ್ರಜ್ಞಾನ ಬಳಸಿಕೊಂಡು ಅಲ್ಲಿ ಯಾವ ಗ್ರೇಡ್ ಅದಿರು, ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಲೆಕ್ಕ ಹಾಕುತ್ತಿದೆ.
ಅದಿರು ಪ್ರಮಾಣ ಪತ್ತೆಗೆ ಚಾಲನೆ: ನಾಲ್ಕು ದಿನಗಳಿಂದ ಬಳ್ಳಾರಿ ಜಿಲ್ಲೆಯಲ್ಲಿರುವ ದುದೇರಿಯಾ ಕಂಪನಿಯ ಅದಿರು ಪ್ರಮಾಣ  ಪತ್ತೆ ಹಚ್ಚುತ್ತಿರುವ ತಂಡ ಈ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಅದಿರು ಇದೆ ಎಂಬುದನ್ನು ತಮ್ಮ ವೈಜ್ಞಾನಿಕ ಉಪಕರಣಗಳ ಮೂಲಕ ಪತ್ತೆ ಹಚ್ಚಿ, ಸಿಇಸಿಗೆ ವರದಿ ಸಲ್ಲಿಸಲಿದೆ. ಕೇಂದ್ರ ಉನ್ನತಾಧಿಕಾರ ಸಮಿತಿ ಪರಿಶೀಲಿಸಿ, ಸುಪ್ರೀಂಗೆ ವರದಿ ಸಲ್ಲಿಸಲಿದೆ. ಸುಪ್ರೀಂ ಕೋರ್ಟ್ ವರದಿ ಪರಿಶೀಲಿಸಿ, ಒಪ್ಪಿದರೆ, ಸಿ ಕೆಟಗರಿಯ ಉಳಿದ 50 ಕಂಪನಿಗಳ ಗಣಿ ಗುತ್ತಿಗೆ ಪ್ರದೇಶದಲ್ಲಿರುವ ಅದಿರಿನ ಪ್ರಮಾಣ, ಅದಿರಿನ ಗ್ರೇಡ್ ಕಂಡು ಹಿಡಿಯಲು ಎನ್‌ಐಟಿಕೆ ಸೂಚಿಸುವ ಸಾಧ್ಯತೆ ಇದೆ.
ಬಿಡ್ ಹಣ ನಿಗದಿ ಮಾಡಲು ಈ ಕ್ರಮ:ಸಿ ಕೆಟಗರಿ ಗಣಿ ಕಂಪನಿಗಳ ಗುತ್ತಿಗೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದರಿಂದ, ಗಣಿ ಗುತ್ತಿಗೆ ಪ್ರದೇಶದಲ್ಲಿ ಎಷ್ಟು ಅದಿರು ಇದೆ ಎಂಬುದನ್ನು ತಿಳಿಯದೆ, ಜಾಗತಿಕ ಟೆಂಡರ್ ಕರೆಯಲು, ಟೆಂಡರ್‌ಗೆ ಬಿಡ್ ಹಣ ನಿಗದಿ ಮಾಡಲು ಬರುವುದಿಲ್ಲ. ಅದಿರು ಗುಣಮಟ್ಟ ಹಾಗೂ ಪ್ರಮಾಣದ ಮಾಹಿತಿ ಸಿಕ್ಕರೆ, ಜಾಗತಿಕ ಟೆಂಡರ್‌ನಲ್ಲಿ ಬಿಡ್ ಹಣ ನಿಗದಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ಅದಕ್ಕಾಗಿ ಸಿಇಸಿ ಎನ್‌ಐಟಿಕೆ ಮೊರೆ ಹೋಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.