ಬಳ್ಳಾರಿ

ಬಿ. ಮುತ್ಕೂರಿನಲ್ಲಿ ಕುಡಿವ ನೀರಿಗೆ ಹಾಹಾಕಾರ

Published On :

ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ತಾಲೂಕು ಬಿ. ಮುತ್ಕೂರು ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕುಡಿಯುವ ನೀರಿನ ಜತೆಗೆ ದಿನ ಬಳಕೆಗೂ ನೀರಿನ ಕ್ಷಾಮ ಕಳೆದ ಡಿಸೆಂಬರ್ ತಿಂಗಳಿಂದಲೇ ಗ್ರಾಮದಲ್ಲಿ ಕಾಣಿಸಿಕೊಂಡಿದೆ. ಗ್ರಾಮದಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ತಾಲೂಕಾಡಳಿತ ಇಲ್ಲಿವರೆಗೂ ಸಂಪೂರ್ಣ ವಿಫಲವಾಗಿದ್ದು, ಹೀಗಾಗಿ ತಾಲೂಕು ಕೇಂದ್ರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಗ್ರಾಮಸ್ಥರು ಕೊಡ ಹಿಡಿದು ನೀರು ತರುವ ಸ್ಥಿತಿ ಇದೆ.
ವಿದ್ಯುತ್ ಇದ್ರೆ ಮಾತ್ರ ಗ್ರಾಮಕ್ಕೆ ನೀರು, ಇಲ್ಲದಿದ್ರೆ ಇಲ್ಲ. ಗ್ರಾಮದ ರೈತ ಸುಭಾಷ ತನ್ನ ಹೊಲದಲ್ಲಿನ ಬೆಳೆಗಳಿಗೆ ನೀರು ತಗ್ಗಿಸಿ ಗ್ರಾಮಸ್ಥರಿಗೆ ನೀರು ನೀಡುವ ಮೂಲಕ ಗ್ರಾಮಸ್ಥರ ಪಾಲಿಗೆ ಸುಡು ಬಿಸಿಲಿನಲ್ಲಿ ಭಗೀರಥನಾಗಿದ್ದಾನೆ.
ಟ್ಯಾಂಕರ್‌ನಿಂದ ನೀರು: ತಾಲೂಕು ಕೇಂದ್ರದಿಂದ ನಾಲ್ಕು ಕಿ.ಮೀ. ದೂರವಿರುವ ಬಿ. ಮುತ್ಕೂರು, ಚಿಂತ್ರಪಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದೆ. ಗ್ರಾಮಸ್ಥರ ಮನವಿ ಮೇರೆಗೆ ಗ್ರಾಪಂ ಅಧ್ಯಕ್ಷ ಎಂ. ಆನಂದ್ ಟ್ಯಾಂಕರ್ ಮೂಲಕ ನೀರು ಪೂರೈಸಿ ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ತಾತ್ಕಾಲಿಕ ನಿವಾರಣೆಗೆ ಮುಂದಾಗಿದ್ದಾರೆ.
ಮತದಾನ ಬಹಿಷ್ಕರಿಸಲು ಮುಂದಾಗಿದ್ದರು: ಈ ಮಧ್ಯೆ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ತೀವ್ರತೆ ಬಗ್ಗೆ ತಾಲೂಕಾಡಳಿತದ ಗಮನ ಸೆಳೆಯುವ ಸಲುವಾಗಿಯೇ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಗ್ರಾಮಸ್ಥರು ಮುಂದಾಗಿದ್ದರು. ಅಲ್ಲದೆ ಕನಿಷ್ಠ ಆರು ಗಂಟೆಗಳ ಕಾಲ ಮತದಾನ ಪ್ರಕ್ರಿಯೆಯಲ್ಲಿ ಗ್ರಾಮಸ್ಥರು ಭಾಗಿಯಾಗಿರಲಿಲ್ಲ. ವಾರದೊಳಗೆ ಪರಿಸ್ಥಿತಿ ನಿಭಾಯಿಸುವ ಖಚಿತ ಭರವಸೆ ತಾಲೂಕಾಡಳಿತದಿಂದ ಸಿಕ್ಕ ಬಳಿಕಷ್ಟೆ ಗ್ರಾಮಸ್ಥರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಿ: ಬಿಸಿಲಿನ ಪ್ರಖರತೆ ಹೆಚ್ಚಳವಾಗಿದ್ದರಿಂದ ಹೊಲದಲ್ಲಿನ ಬೆಳೆಗಳನ್ನು ಸಂರಕ್ಷಿಸಲು ಇರುವ ನೀರು ಸಾಲುತ್ತಿಲ್ಲ. ಹೀಗಾಗಿ ನೀವು ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ರೈತ ಸುಭಾಷ ಗ್ರಾಮಸ್ಥರಿಗೆ ಮನವಿ ಮಾಡಿದ್ದಾನೆ. ಒಂದು ವೇಳೆ ರೈತ ಸುಭಾಷ ತನ್ನ ಹೊಲದಿಂದ ನೀರು ಪೂರೈಸುವುದು ನಿಲ್ಲಿಸಿಬಿಟ್ಟರೆ ಗ್ರಾಮವೇ ಜಲಕ್ಷಾಮದಲ್ಲಿ ಸಿಲುಕಿ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿಮಾರ್ಣವಾಗಲಿದೆ. ಅದಷ್ಟು ಬೇಗ ನೀರಿನ ಸಮಸ್ಯೆ ಪರಿಹರಿಸುವತ್ತ ತಾಲೂಕಾಡಳಿತ ಗಮನಹರಿಸಬೇಕೆನ್ನುತ್ತಾರೆ ಗ್ರಾಮಸ್ಥ ಸರ್ದಾರ ರಾಮಣ್ಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.