ಪುಸ್ತಕ ವಿತರಣೆ ಜಾಲ ಸುಧಾರಣೆ ಆಗಿಲ್ಲ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 27
ಪುಸ್ತಕಗಳ ವಿತರಣೆ ಜಾಲ ಸುಧಾರಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಕನ್ನಡ ಪುಸ್ತಕ ಪ್ರಾಧಿಕಾರದ ಮೂಲ ಆಶಯ. ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಹಿ.ಚಿ. ಬೋರಲಿಂಗಯ್ಯ ಆರೋಪಿಸಿದರು.
ನಗರದ ಸಾಂಸ್ಕೃತಿಕ ಸಮುಚ್ಚಯ ವಿಚಾರ ಸಂಕಿರಣ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಾಯಿತ್ರಿ ಪ್ರಕಾಶನ ಉದ್ಘಾಟನೆ ಹಾಗೂ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ಸೇವಾ ಕ್ಷೇತ್ರವಾದ ಪುಸ್ತಕೋದ್ಯಮ ಒಂದು ದೊಡ್ಡ ದಂಧೆಯಾಗಿ ಪರಿವರ್ತನೆಗೊಂಡಿದೆ. ಗ್ರಂಥಾಲಯಗಳ ಪುಸ್ತಕ ಖರೀದಿಯಲ್ಲಿ ಗೋಲ್ಮಾಲ್ ನಡೆಯುತ್ತಿವೆ. ಇದರಿಂದ ಮೌಲ್ವಿಕ ಪುಸ್ತಕಗಳು ಓದುಗರಿಗೆ ತಲುಪುತ್ತಿಲ್ಲ. ರಾಜ್ಯದಲ್ಲಿ ಪ್ರತಿವರ್ಷ 4500 ಪುಸ್ತಕಗಳು ಪ್ರಕಟಗೊಳ್ಳುತ್ತಿದ್ದು, ಇದರ ಅರ್ಧದಷ್ಟು ಕೃತಿಗಳು ಚಿಂತನೆ ಒರೆಗೆ ಹಚ್ಚುವ ಕೆಲಸ ಮಾಡುತ್ತಿಲ್ಲ. ಆಯಾ ಕಾಲಕ್ಕೆ ಅನುಗುಣವಾಗಿ ಹೊಸ ವಿಚಾರಗಳನ್ನ ಬಿತ್ತುವ, ಜನರನ್ನು ಹೊಸ ಬದುಕಿನೆಡೆಗೆ ಕರೆದೊಯ್ಯುವಂಥ ಕೆಲಸ ಆಗುತ್ತಿಲ್ಲ. ಸಾಹಿತ್ಯಿಕ ಸಂಬಂಧಿ ಪುಸ್ತಕಗಳು ಮಾತ್ರ ಹೆಚ್ಚು ಪ್ರಕಟಗೊಳ್ಳುತ್ತಿವೆ. ವಿಜ್ಞಾನ, ಸಮಾಜಶಾಸ್ತ್ರ ಇತರ ವಿಚಾರಗಳನ್ನು ತೆರೆದಿಡುವ ಕೃತಿಗಳ ಲಭ್ಯತೆ ತೀರಾ ಕಡಿಮೆ ಇವೆ ಎಂದರು.
ಪುಸ್ತಕೋದ್ಯಮ ಬಲಪಡಿಸುವ ಅಗತ್ಯತೆ ಜತೆಗೆ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಯುವ ಓದುಗರು, ಸಾಹಿತ್ಯ ಪ್ರೇಮಿಗಳು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗಾಯಿತ್ರಿ ಪ್ರಕಾಶನದಿಂದ ಡಾ. ಕೆ. ಬಸಪ್ಪ ಅವರು ಹೊರ ತಂದಿರುವ ಹಿರಿಯ ಚಿಂತಕ ಡಾ. ಟಿ.ಆರ್. ಚಂದ್ರಶೇಖರ್ ಅವರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಮತ್ತು ಡಾ. ಎಂ. ಚಂದ್ರ ಪೂಜಾರಿ ಅವರ ಬದಲಾಗುತ್ತಿರುವ ಕರ್ನಾಟಕ ವಿಷಯ ಕುರಿತ ಕೃತಿಗಳು ಹೊಸ ಚಿಂತನೆಗಳಿಗೆ ಹಾಗೂ ಉತ್ತಮ ಮೌಲ್ಯ, ಸಂದೇಶಗಳನ್ನು ಹೊಂದಿವೆ ಎಂದರು.
ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ. ಟಿ.ಆರ್. ಚಂದ್ರಶೇಖರ್, ಅಭಿವೃದ್ಧಿ ವರಮಾನ ಏರಿಕೆಗೆ ಸೀಮಿತವಲ್ಲ. ಸಮಾಜದಲ್ಲಿ ಜನರು ಘನತೆಯಿಂದ ಬದುಕುವುದು ಅಭಿವೃದ್ಧಿಯಾಗಿದೆ. ಇದು ಸಾಮಾಜಿಕ ನ್ಯಾಯ ಎನಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕ ವಾತಾವರಣ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು. ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮುಖ್ಯಸ್ಥ ಪ್ರೊ. ಜೆ. ಸೋಮಶೇಖರ್ ಪುಸ್ತಕಗಳನ್ನು ಪರಿಚಯಿದರು. ಸ್ಥಳೀಯ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ. ಗಂಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ಡಾ. ಕೆ.ಬಸಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚೋರನೂರು ಕೊಟ್ರಪ್ಪ ಇತರರಿದ್ದರು. ಡಾ. ಎಸ್.ಪಿ. ನಾಗನಗೌಡ ನಿರೂಪಿಸಿದರು. ಡಾ. ಹೊನ್ನೂರು ಅಲಿ ಸ್ವಾಗತಿಸಿದರು. ಡಾ. ದೇವಣ್ಣ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

