ಬಳ್ಳಾರಿ

ಹೊಸ ತಾಲೂಕು: ಸಂಘಟಿತ ಹಕ್ಕೊತ್ತಾಯ!

Published On :

ಘೋಷಿತ 43 ತಾಲೂಕುಗಳ ರಚನೆಗೆ ಸದಾ ಒಂದಿಲ್ಲ ಒಂದು ಸಬೂಬು ಹೇಳುತ್ತಾ ಹಿಂದೇಟು ಹಾಕುತ್ತಿರುವ ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲು ಹೊಸ ತಾಲೂಕುಗಳ ರಾಜ್ಯಮಟ್ಟದ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಸಂಘಟಿತ ಹಕ್ಕೊತ್ತಾಯಿಸುವ ಪ್ರಯತ್ನವನ್ನು ಸದ್ದಿಲ್ಲದೇ ಆರಂಭಿಸಿದೆ.
ಮಾಜಿ ಮುಖ್ಯಮಂತ್ರಿ ಬಿಜೆಪಿಯ ಜಗದೀಶ್ ಶೆಟ್ಟರ್ ಮಂಡಿಸಿದ ರಾಜ್ಯ ಬಜೆಟ್ನಲ್ಲಿ 43 ನೂತನ ತಾಲೂಕುಗಳ ರಚನೆಗೆ ತಲಾ ರು. 2 ಕೋಟಿ ಮೀಸಲಿರಿಸುವ ಯೋಜನೆ ರೂಪಿಸಿಸಿದ್ದರು. ನಂತರ ಬದಲಾವಣೆಗೊಂಡ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಸರ್ಕಾರದಲ್ಲಿನ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ 43 ತಾಲೂಕುಗಳ ರಚನೆಯಲ್ಲಿ ಈ ಹಿಂದಿನ ಸರ್ಕಾರ ಕೆಲ ಗೊಂದಲಗಳನ್ನು ಸೃಷ್ಟಿಸಿದ್ದು, ಅವುಗಳನ್ನೆಲ್ಲಾ ನಿವಾರಣೆ ಮಾಡಿ ಹೊಸ ತಾಲೂಕುಗಳನ್ನು ಖಂಡಿತ ರಚಿಸುತ್ತೇವೆ ಎಂದು ಭರವಸೆ ವ್ಯಕ್ತಮಾಡಿದ್ದಲ್ಲದೇ ಅಧಿಕಾರಿ ವಲಯದಲ್ಲಿ ಘೋಷಿತ ತಾಲೂಕುಗಳಿಗೆ ಸೇರ್ಪಡೆಗೊಳ್ಳುವ ಗ್ರಾಮಗಳ ವಿವರ ಮತ್ತಿತರ ದಾಖಲೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಗೂ ಚಾಲನೆ ನೀಡಿತ್ತು. ಆದರೆ, ಸರ್ಕಾರ ಹಠಾತ್ತಾಗಿ ತಾಲೂಕು ರಚನೆ ಪ್ರಕ್ರಿಯೆಯನ್ನು ಕೈಗೊಳ್ಳದೇ ನುಣುಚಿಕೊಳ್ಳುವ ಪ್ರಯತ್ನ ಸಾಗಿಸಿತ್ತು.
ಚುನಾವಣೆಯಿಂದ ಕಾರ್ಯ ಸ್ಥಗಿತ: ಸರ್ಕಾರದ ಈ ಧೋರಣೆ ರಾಜ್ಯದ ಜನರಲ್ಲಿ ನಿರಾಸೆ ತಂದಿತ್ತು. ಮತ್ತೆ ಹೋರಾಟಗಳನ್ನು ರೂಪಿಸುವ ಪ್ರಯತ್ನ ಘೋಷಿತ ತಾಲೂಕುಗಳ ಪಟ್ಟಣಗಳಲ್ಲಿ ನಡೆಯಿತಾದರೂ ಲೋಕಸಭಾ ಚುನಾವಣೆ ಪ್ರಕ್ರಿಯೆಯಿಂದಾಗಿ ಹೋರಾಟದ ಪ್ರಯತ್ನ ಹಾದಿ ಹಿಂದೆ ಸರಿಯಿತು. ಇದಕ್ಕೊಂದು ಹೊಸ ರೂಪ ಕೊಡಬೇಕೆಂದು ನಿಶ್ಚಯಿಸಿ ಹೊಸ ತಾಲೂಕುಗಳ ಹೋರಾಟ ಸಮಿತಿ ಬೆಂಗಳೂರಿನಲ್ಲಿ ಮಾ. 7ರಂದು ರಚನೆಗೊಂಡಿತ್ತು. ಘೋಷಿತ 43 ತಾಲೂಕುಗಳ ಪೈಕಿ 20 ನೂತನ ತಾಲೂಕುಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಹೋರಾಟ ಸಮಿತಿಗೆ ಶ್ರೀಕಾರ ಹಾಕಿದರು. ಬೀದರ ಜಿಲ್ಲೆಯ ಕಮಲಾನಗರದ ಬಸವರಾಜ್ ಪಾಟೀಲ್ ಈ ಸಮಿತಿಗೆ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಾಕನೂರು ಪೂಜಾರ್ ಕಾರ್ಯದರ್ಶಿಯಾಗಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಪತ್ತಿಕೊಂಡ ಶ್ರೀಧರ ಶೆಟ್ಟಿ ಖಜಾಂಚಿಯಾಗಿ ನಿಯುಕ್ತಿಗೊಂಡರು.
ಜನರ ಅಭಿಪ್ರಾಯ ಸಂಗ್ರಹ: ಸದ್ಯದ ಮಟ್ಟಿಗೆ ರಚನೆಗೊಂಡ ಈ ಮೂವರು ಪದಾಧಿಕಾರಿಗಳು ಮಾರ್ಚ್ನಲ್ಲಿಯೇ ಬೀದರ್, ಗುಲ್ಪರ್ಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಘೋಷಿತ ಪಟ್ಟಣಗಳಿಗೆ ಭೇಟಿ ನೀಡಿ ಅಲ್ಲಿನ ಹೋರಾಟಗಾರರನ್ನು ಸಂಪರ್ಕಿಸಿ ಹೊಸ ರೀತಿಯ ಹೋರಾಟಕ್ಕೆ ಅಣಿಗೊಳ್ಳಲು ವೇದಿಕೆ ಸಜ್ಜು ಮಾಡಿದರು. ಬರುವ ದಿನಗಳಲ್ಲಿ ಈ ಪದಾಧಿಕಾರಿಗಳು ರಾಜ್ಯದ ಉಳಿದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಭಿಪ್ರಾಯವನ್ನು ಹೋರಾಟ ಸಮಿತಿ ಸಂಗ್ರಹಿಸಿ ಸಂಘಟಿತ ಹೋರಾಟ ನಡೆಸಲು ಮುಂದಾಗುವಂತೆ ಪ್ರೇರೇಪಿಸಿದ್ದಲ್ಲದೇ ಈ ಬೇಡಿಕೆ ಜೀವಂತವಾಗಿರಿಸಿಕೊಂಡು ಸರ್ಕಾರದ ಮೇಲೆ ಒತ್ತಡ ತರಲು ಹಲವು ಬಗೆಯಲ್ಲಿ ಪ್ರಯತ್ನ ಸಾಗಿಸುವ ಸಂದೇಶ ರವಾನಿಸಲಿದ್ದಾರೆ.
ಸಂಚಾಲಕ ಪಟ್ಟಿ: ರಾಜ್ಯಮಟ್ಟದ ಹೋರಾಟ ಸಮಿತಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಘೋಷಿತ ತಾಲೂಕುಗಳ ಪಟ್ಟಣಗಳಲ್ಲಿನ ಪ್ರಮುಖರು ಮತ್ತು ಮುಖಂಡರು ನಿರ್ಧರಿಸಿದ್ದು, ಸಂಚಾಲಕರಾಗಿ ಕಾರ್ಯನಿರ್ವಹಿಸಲು ಹೊಸ ಪಡೆಯನ್ನೇ ಕಟ್ಟಲಾಗಿದೆ. 43 ತಾಲೂಕುಗಳಿಂದ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಬಳ್ಳಾರಿ ಜಿಲ್ಲೆಯ ಕುರುಗೋಡಿಗೆ ಜೈದೈವ್ಗೌಡ, ಕೊಟ್ಟೂರಿಗೆ ಎಂ.ಎಂ.ಜೆ. ಹರ್ಷವರ್ಧನ್, ಪಿ. ಶ್ರೀಧರ ಶೆಟ್ಟಿ, ಕಂಪ್ಲಿ ಅರವಿ ಬಸವನಗೌಡ, ಅಣ್ಣಿಗೆರೆ ಪ್ರಕಾಶ್ ಅಂಗಡಿ ಆಯ್ಕೆಯಾಗಿದ್ದಾರೆ. ಸರ್ಕಾರ ಹೊಸ ತಾಲೂಕುಗಳ ರಚನೆಗೆ ಯಾವುದೇ ಹಂತದಲ್ಲಿ ಹಿಂದೇಟು ಹಾಕದಂತೆ ಎಲ್ಲ ಬಗೆಯಲ್ಲಿ ಒತ್ತಡ ತರುವ ಕಾರಣಕ್ಕಾಗಿಯೇ ರಾಜ್ಯಮಟ್ಟದ ಹೋರಾಟ ಸಮಿತಿ ಹುಟ್ಟು ಹಾಕಲಾಗಿದೆ. ಮೇ 12ರಂದು ಬಾಗಲಕೋಟೆ, 13ರಂದು ಗಂಗಾವತಿಯಲ್ಲಿ ತಾಲೂಕು ಹೋರಾಟಗಾರರು ಮತ್ತು ಮುಖಂಡರ ಸಭೆ ನಡೆಸಲಾಗುತ್ತಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.