ಬಳ್ಳಾರಿ

ಕೆಂಧೂಳಿನ ಕಾರ್ಮಿಕರ ಕಷ್ಟ ಕರಗುತ್ತಾ?

Published On :

ಕನ್ನಡಪ್ರಭ ವಾರ್ತೆ, ಸಂಡೂರು, ಏ. 30
ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದಾಗ ಕಾರ್ಮಿಕರ ಶ್ರಮದಿಂದ ಶ್ರೀಮಂತರಾದ ಗಣಿ ಮಾಲೀಕರು ಹಲವರು. ಹಾಗೆ ಶ್ರೀಮಂತರಾದವರು ಗಣಿ ಕಾರ್ಮಿಕರ ಹಿತಕ್ಕಾಗಿ ಏನನ್ನೂ ಮಾಡಿಲ್ಲ. ಹೀಗಾಗಿ ಗಣಿಗಾರಿಕೆ ನಿಂತ ಬಳಿಕ ಕಾರ್ಮಿಕರ ಬದುಕು ದುಸ್ತರವಾಗಿದೆ.
3-4 ವರ್ಷಗಳಿಂದ ಹಲವು ಗಣಿ ಕಂಪನಿಗಳು ಕೆಲಸ ಸ್ಥಗಿತಗೊಳಿಸಿವೆ. ಕೆಂಧೂಳಿನ ಗಣಿಯಲ್ಲಿ ಜೀವದ ಹಂಗು ತೊರೆದು ಕಾರ್ಮಿಕರು ಬೆವರು ಸುರಿಸಿದ ಪರಿಣಾಮ ಕೋಟಿ ಕೋಟಿ ಆದಾಯ ಗಣಿಧಣಿಗಳಿಗೆ ಕಾಲ ಬುಡ ಸೇರುತ್ತಿತ್ತು. ಬಳ್ಳಾರಿ ಗಣಿ ಧಣಿಗಳಿಗೆ ಹಣದ ಹೊಳೆ ಹರಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 30 ಸಾವಿರಕ್ಕೂ ಹೆಚ್ಚು ಗಣಿ ಕಾರ್ಮಿಕರ ಕೈಗಳೀಗ ಕೆಲಸವಿಲ್ಲದೆ ಕೂತಿವೆ.
ಗಣಿಗಳಲ್ಲಿ ಮ್ಯಾನೇಜರ್, ಎಂಜಿನಿಯರ್, ಸರ್ವೇಯರ್, ಆಪರೇಟರ್ಸ್, ಡ್ರಿಲ್ಲರ್, ಹೆಲ್ಪರ್ಸ್, ಪೋರ್‌ಮನ್, ಮೇಟ್, ವೇಬ್ರಿಡ್ಜ್ ಆಪರೇಟರ್, ಕ್ಲೀನರ್, ಡ್ರೈವರ್, ಗಾರ್ಡ್, ಕಲ್ಲು ಒಡೆಯುವವರು, ಕಲ್ಲು ಹೊರುವವರು, ಜರಡಿ ಹಿಡಿಯುವವರು, ಕಲ್ಲು ಗ್ರೇಡ್ ಮಾಡುವವರು, ಲೋಡ್ ಮಾಡುವವರು... ಹೀಗೆ ಗಣಿ ವಲಯದಲ್ಲಿ ಕಾರ್ಮಿಕ ವರ್ಗ ತನ್ನದೇ ಆದ ಮಹತ್ವ ಹೊಂದಿದೆ. ಬಹುತೇಕ ಗಣಿ ಕಂಪನಿಗಳು ಬಾಕಿ ವೇತನ, ಭವಿಷ್ಯ ನಿಧಿ, ಪರಿಹಾರ ವಿತರಿಸಿಲ್ಲ ಎಂದು ಕಾರ್ಮಿಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾರ್ಮಿಕರು ನ್ಯಾಯಕ್ಕಾಗಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ನಡೆಸುವ ಪ್ರತಿಭಟನೆ, ಹೋರಾಟಗಳಿಗೆ ಬೆಲೆ ಇಲ್ಲದಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನ, ಸಿಇಸಿ ಶಿಫಾರಸಿನಂತೆ ನಿಯೋಜನೆಗೊಂಡ ಪರಿಸರ ಪುನರ್‌ನಿರ್ಮಾಣ ಮತ್ತು ಪುನಶ್ಚೇತನ (ಆರ್ ಆ್ಯಂಡ್ ಆರ್) ಯೋಜನೆ ಅಕ್ರಮ ಗಣಿಗಾರಿಕೆಯಿಂದ ಬದುಕು ಕಳೆದುಕೊಂಡ ಕಾರ್ಮಿಕರ, ಬಡ ರೈತರ, ಹಳ್ಳಿಗರ ಆರ್ಥಿಕ ಬದುಕು ಕಟ್ಟಿಕೊಡಲು ಬದ್ಧವಾಗಿ ಕೆಲಸ ಮಾಡಬೇಕಿದೆ. ಆರ್ ಆ್ಯಂಡ್ ಆರ್ ಯೋಜನೆ ಸದ್ಯ ಗಣಿ ಪ್ರದೇಶದ ಭಾಗದಲ್ಲಿ ಚೆಕ್ ಡ್ಯಾಂ ಮತ್ತು ತಡೆಗೋಡೆ ನಿರ್ಮಾಣಕ್ಕೆ ಸೀಮಿತವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಗಣಿ ಚಟುವಟಿಕೆ ಸ್ಥಗಿತಗೊಂಡ ಬಳಿಕ ಕಾರ್ಮಿಕರ ಬೆಂಬಲಕ್ಕೆ ಯಾರೂ ಇಲ್ಲ ಎಂಬಂತಾಗಿದೆ. ಕಾರ್ಮಿಕ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಜಿಲ್ಲೆಯ ಇತರ ಶಾಸಕರು ಜಾಣ ಮೌನವಹಿಸಿದ್ದಾರೆ. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವಾದರೂ ನಮಗೆ ನ್ಯಾಯ ಕೊಡಿಸಿ' ಎಂಬುದು ನೊಂದ ಕಾರ್ಮಿಕರ ಅಳಲು.
ರಾಮ್‌ದೇವ್‌ರನ್ನು ತಕ್ಷಣವೇ ಬಂಧಿಸಿ
ಹೊಸಪೇಟೆ: ಬಾಬಾ ರಾಮದೇವ್‌ರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬುಧವಾರ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಾಬಾ ರಾಮದೇವ್ ಪ್ರತಿಕೃತಿ ದಹಿಸಿದರು. ಸ್ಥಳೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಯಾಕತ್ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿ, ದಲಿತರ ಮನೆಗೆ ರಾಹುಲ್ ಗಾಂಧಿ ಹನಿಮೂನ್ ನಡೆಸಲು ತೆರಳುತ್ತಾರೆಂದು ಹೇಳಿ, ದಲಿತರನ್ನು ಅವಮಾನ ಮಾಡಿದ ಬಾಬಾ ರಾಮದೇವ್‌ರನ್ನು ತಕ್ಷಣವೇ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅನಂತಕುಮಾರ್, ಉಪಾಧ್ಯಕ್ಷ ರಮೇಶ್. ಸಂಜಯ್, ಸುದರ್ಶನರಾವ್, ಮುಖಂಡರಾದ ಜಲೀಲ್, ಸಾಧಿಕ್, ಲಾರೆನ್ಸ್, ಅಯ್ಯಳಿ ನವೀನ್, ಮಲ್ಲೇಶ ಪಿ.ಕೆ. ಹಳ್ಳಿ, ಕೃಷ್ಣ, ಮರಿದಾಸ (ಅಧ್ಯಕ್ಷರು ಎಸ್ಸಿ ಘಟಕ), ಹಾಗೂ ಜಿಲಾನ್ ಅಯ್ಯಳಿ ಬಸವರಾಜ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


-ಆರ್. ಶಿವರಾಮ, ಸಂಡೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.