ಕರೆಯುತಿದೆ ಸೊಬಗಿನ ಅಂಗೂರು ನಡುಗಡ್ಡೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಏ. 30
ಸುಂದರ ಆಕೃತಿಯ ಕಲ್ಲುಗಳ ಮಧ್ಯೆ ತುಂಬಿ ಹರಿಯುತ್ತಿರುವ ತುಂಗಭದ್ರೆಯ ಜುಳುಜುಳು ನಿನಾದ, ಹತ್ತಾರು ಜೀವ ಸಂಕುಲಗಳ ಬೀಡು, ಪಕ್ಷಿಗಳ ಚಿಲಿಪಿಲಿ ನಾದ, ನದಿ ಸುತ್ತುವರಿದಿರುವ ನಡುಗಡ್ಡೆ ಸುಂದರ ಪ್ರಕೃತಿ ತಾಣ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಂಗೂರು ತುಂಗಭದ್ರಾ ನದಿಯಲ್ಲಿರುವ ಸುಂದರ ನಡುಗಡ್ಡೆ. ನದಿಯ ಇನ್ನೊಂದು ಕಡೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸಾಸಲವಾಡ ಗ್ರಾಮವಿದೆ. ಆಯುರ್ವೇದ ಸಸ್ಯ ಸಂಪತ್ತು, ಇತರ ವೃಕ್ಷಗಳು ಹೇರಳವಾಗಿದ್ದು, ಹಚ್ಚ ಹಸಿರಾಗಿರುವ ಸುಂದರ ಪ್ರಕೃತಿಯ ತಾಣ. ಶರಣರು, ಸಂತರು ಮನಸೋತು ತಪಸ್ಸು ಮಾಡಿರುವ ಪುಣ್ಯಭೂಮಿ ಇದು. ಶ್ರಾವಣ ಮಾಸದ ಸಮಯದಲ್ಲಿ ಸ್ವಾಮೀಜಿಗಳು ಇಲ್ಲಿಗೆ ಆಗಮಿಸುತ್ತಾರೆ. ಹಲವು ತಿಂಗಳ ಕಾಲ ನೆಲೆಸಿ ತಪಸ್ಸು ಮಾಡುತ್ತಾರೆ.
ಸರ್ಕಾರ ಗಮನ ಹರಿಸಿಲ್ಲ: ಅಪಾರ ಪ್ರಮಾಣದ ಆಯುರ್ವೇದ ಸಸ್ಯ ಸಂಪತ್ತುಗಳ ನಡುವೆ ರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಗಡ್ಡಿ ಬಸವೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನವಿದೆ. ನಡುಗಡ್ಡೆಯನ್ನು ಸುಂದರ ಪ್ರವಾಸೋದ್ಯಮ ಕೇಂದ್ರವನ್ನಾಗಿ ನಿರ್ಮಾಣ ಮಾಡಲು ಸರ್ಕಾರ ಇಂದಿಗೂ ಯಾವ ಪ್ರಯತ್ನ ನಡೆಸಿಲ್ಲ. ಪ್ರವಾಸಿಗರು ನಡುಗಡ್ಡೆಗೆ ನದಿ ದಾಟಿ ಹೋಗಲು ದೋಣಿ ವ್ಯವಸ್ಥೆ ಇಲ್ಲದ ಕಾರಣ ತೆಪ್ಪದ ಮೂಲಕ ದಾಟುವ ಪರಿಸ್ಥಿತಿ ಇದೆ.
ಮೂರ್ತಿಗಳ ತಾಣ: ತುಂಗಾ, ಭದ್ರಾ, ವರದಾ, ಧರ್ಮಾ, ಸರಸ್ವತಿ, ಕುಮದ್ವತಿ ನದಿಗಳ ಸಂಗಮವಾಗಿ ಹರಿಯುತ್ತಿರುವ ಪಂಚ ನದಿಗಳ ತೀರದ ಬಹುತೇಕ ಪ್ರದೇಶಗಳು ಕಲ್ಯಾಣಿ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಈ ನದಿ ತೀರದಲ್ಲಿರುವ ಅಂಗೂರು ಗ್ರಾಮದಲ್ಲಿ ಕಲ್ಲೇಶ್ವರ, ಮಹಿಷಾಸುರ ಮರ್ದಿನಿ, ನಂದಿ ಇತರ ಸುಂದರ ಮೂರ್ತಿಗಳಿರುವ ದೇವಸ್ಥಾನಗಳಿವೆ. ಈ ದೇವಸ್ಥಾನದಲ್ಲಿರುವ ಕಲಾಕೃತಿಗಳು ಗಮನ ಸೆಳೆಯುತ್ತವೆ. ಪುರಾತತ್ವ ಇಲಾಖೆ ಉದ್ಯಾನ ಹಾಗೂ ದೇವಸ್ಥಾನ ಅಭಿವೃದ್ಧಿಪಡಿಸಿದೆ. ಈ ದೇವಸ್ಥಾನದ ಮುಂದಿರುವ ನಡುಗಡ್ಡೆ ಕಣ್ಸೆಳೆಯುತ್ತದೆ.
ಪ್ರವಾಸಿ ತಾಣವಾಗಲಿ: ಹಾವೇರಿ, ಗದಗ, ಧಾರವಾಡ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಪ್ರದೇಶಕ್ಕೆ ಹತ್ತಿರದ ಈ ನಡುಗಡ್ಡೆಯನ್ನು ಪ್ರವಾಸಿ ಕೇಂದ್ರವಾಗಿ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಆಶಯ. ಇಲ್ಲಿರುವ ಸಸ್ಯ ಸಂಪತ್ತು, ಪ್ರಾಣಿಗಳನ್ನು ಸಂರಕ್ಷಿಸಿ, ಸುಂದರ ತಾಣವನ್ನಾಗಿ ನಿರ್ಮಿಸಬಹುದು. ಪ್ರವಾಸಿಗರ ಮನ ತಣಿಸಲು ಯಾಂತ್ರೀಕೃತ ದೋಣಿ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ಪ್ರವಾಸೋದ್ಯಮ ಇಲಾಖೆ ಮಾಡಿದರೆ ಪ್ರವಾಸಿಗರಿಗೆ ಅನುಕೂಲವಾದೀತು.
ಅಂಗೂರು ನಡುಗಡ್ಡೆಯನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ಮಾಡಬೇಕಾಗಿದೆ. ಅಲ್ಲಿ ವಾಸಿಸುವ ನವಿಲು ಮತ್ತಿತರ ಪ್ರಾಣಿ, ಪಕ್ಷಿಗಳಿಗೆ ರಕ್ಷಣೆ ಒದಗಿಸಬೇಕಾಗಿದೆ. ಈ ಪ್ರದೇಶವನ್ನು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
- ಪಿ.ಟಿ. ಪರಮೇಶ್ವರ ನಾಯ್ಕ, ಜಿಲ್ಲಾ ಉಸ್ತುವಾರಿ ಸಚಿವ
-ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

