ಬಳ್ಳಾರಿ

ಗಣಿಗಾರಿಕೆ ನಾಡಲ್ಲಿ ಕಾಯ್ದಿಟ್ಟ ಅರಣ್ಯ

Published On :

-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 3
ಗಣಿ ಜಿಲ್ಲೆಯ ಮಲೆನಾಡು ಸಂಡೂರು ತಾಲೂಕಿನ ರಮಣ ಮಲೈ ಬ್ಲಾಕ್‌ನ 19,424.62 ಎಕರೆ (7769.85 ಹೆಕ್ಟೇರ್) ಪ್ರದೇಶವನ್ನು ಕಾಯ್ದಿಟ್ಟ ಅರಣ್ಯ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
1985ರಲ್ಲಿ ರಾಜ್ಯ ಸರ್ಕಾರ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಘೋಷಣೆಗೆ ನೋಟಿಫಿಕೇಷನ್ ಹೊರಡಿಸಿತ್ತು. ಆದರೆ, ಘೋಷಣೆ ಬಾಕಿಯಿತ್ತು. ಈ ಹಿಂದೆ ಗಣಿ ಲಾಬಿ ಕೆಲಸ ಮಾಡಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ನೋಟಿಫಿಕೇಷನ್ ಜಾರಿ ಮಾಡುವುದಕ್ಕೆ ಕೈಹಾಕಿರಲಿಲ್ಲ. 29 ವರ್ಷಗಳಿಂದಲೂ ಸಂಡೂರಿನ ರಮಣ ಮಲೈ ಬ್ಲಾಕ್ ಕಾಯ್ದಿಟ್ಟ ಅರಣ್ಯ ಪ್ರದೇಶ ಎಂದು ಘೋಷಣೆಯಾಗಲೇ ಇಲ್ಲ.
372 ಆಕ್ಷೇಪಣೆ ಇತ್ಯರ್ಥ: ಸಂಡೂರು ತಾಲೂಕಿನ ರಮಣಮಲೈ ಬ್ಲಾಕ್‌ನ ಕುರಿತಾಗಿ ಹಿಂದಿನ ಜಿಲ್ಲಾಧಿಕಾರಿ, ಅರಣ್ಯ ಕ್ಷೇತ್ರಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಹಾಲಿ ಡಿಎಫ್‌ಒ ಮಣಿಕಂಠನ್ ಹಾಗೂ ಸಂಡೂರು ವಲಯ ಅರಣ್ಯಾಧಿಕಾರಿ ಗಣೇಶ್ ಅವರು ಕರ್ನಾಟಕ ಅರಣ್ಯ ಅಧಿನಿಯಮದ ಅಡಿಯಲ್ಲಿ ಇತ್ಯರ್ಥಕ್ಕೆ ಆಕ್ಷೇಪಣೆ ಅರ್ಜಿಗಳನ್ನು ಕರೆದಿದ್ದರು. ಜೂ. 3, 2014ರಂದು ಸಾರ್ವಜನಿಕರು ಸಲ್ಲಿಸಿದ 372 ಆಕ್ಷೇಪಣೆಗಳಲ್ಲಿ ಬಹುತೇಕ ಆಧಾರ ರಹಿತವಾಗಿದ್ದವು. ಕಂದಾಯ ಗ್ರಾಮದ ಸರ್ವೇ, ನಂ. 1, 2, 3 ಮತ್ತು 4ರಲ್ಲಿ ಬರುವ ರಾಮಘಡ ಗ್ರಾಮ, ತಾರಾಕುಟ್ಟಿ ಬಂಗ್ಲೆ, ಬೇಸಿಗೆ ಅರಮನೆ, ಯುರೋಪಿಯನ್ ಸ್ಮಶಾನ, ಚರ್ಚ್ ಕಟ್ಟಡಗಳು ಮುಂತಾದ ಆಧಾರ ಸಹಿತ ಆಕ್ಷೇಪಗಳನ್ನು ಸ್ವೀಕರಿಸಿ, ಉಳಿದವುಗಳನ್ನು ವಜಾಗೊಳಿಸಿದ್ದಾರೆ.
1883ರ ಸರ್ವೆಯಲ್ಲಿ ಅರಣ್ಯ ಭೂಮಿ:  1883ರಲ್ಲಿ ಸರ್ವೆ ನಡೆಸಿದ ವೇಳೆ 117 ಕ್ವಯರ್ ಮೈಲ್ ಅರಣ್ಯ ಪ್ರದೇಶವೆಂದು ಗುರುತಿಸಲಾಗಿತ್ತು. ಸಂಡೂರು ತಾಲೂಕಿನ ಸ್ವಾಮಿ ಮಲೈ ಬ್ಲಾಕ್, ರಮಣ ಮಲೈ ಬ್ಲಾಕ್, ದೋಣಿ ಮಲೈ ಬ್ಲಾಕ್, ನಾರ್ಥ ಈಸ್ಟರ್ನ್ ಬ್ಲಾಕ್‌ನಲ್ಲಿ 8 ಸ್ವಯರ್ ಮೈಲ್ ಮಾತ್ರ ಗ್ರಾಮ ಅರಣ್ಯವಾಗಿದ್ದು, ಅದರಲ್ಲಿ ಉಳಿದಿದ್ದು ಕಾಯ್ದಿಟ್ಟ ಅರಣ್ಯ ಪ್ರದೇಶ ಎಂದು ತಿಳಿಸಲಾಗಿತ್ತು.
ಅಂದು ರಾಜರ ಆಧೀನದಲ್ಲಿದ್ದ ಪ್ರದೇಶ ಆನಂತರ ಮದ್ರಾಸ್ ಪ್ರೆಸಿಡೆನ್ಸಿಗೆ ಒಳಪಟ್ಟಿತು. 1963ರಲ್ಲಿ ಕರ್ನಾಟಕ ಅರಣ್ಯ ಅಧಿನಿಯಮದ ವ್ಯಾಪ್ತಿಗೆ ಬಂತು. ಇದನ್ನು ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಸರ್ಕಾರ 1985ರಲ್ಲಿ ನೋಟಿಫಿಕೇಷನ್ ಮಾಡಿತ್ತು.

ಕೇಂದ್ರ ಸರ್ಕಾರದ ಅನುಮತಿ ಬಾಕಿ
ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ್ದರಿಂದ ಅರಣ್ಯ ಇಲಾಖೆ 368 ಆಕ್ಷೇಪಣೆಗಳ ಕುರಿತಾಗಿ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದಲ್ಲಿ 368 ಹಾಗೂ ಹೈಕೋರ್ಟ್‌ನಲ್ಲಿ 368 ಪ್ರಕರಣಗಳ ಕೆವಿಯಟ್ ಹಾಕಲಾಗಿದೆ. ಈ ಪ್ರದೇಶದಲ್ಲಿ 10ಕ್ಕೂ ಹೆಚ್ಚು ಗಣಿಗಾರಿಕೆ ಕಂಪನಿಗಳಿವೆ. ಕಾಯ್ದಿಟ್ಟ ಅರಣ್ಯ ಪ್ರದೇಶ ಘೋಷಣೆಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುಮತಿ ದೊರೆತ ತಕ್ಷಣ ರಾಜ್ಯ ಸರ್ಕಾರ ಸಂಡೂರಿನ ರಮಣ ಮಲೈ ಬ್ಲಾಕನ್ನು ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಲಿದೆ. ಸಂಡೂರು ತಾಲೂಕಿನಲ್ಲಿ ಇನ್ನುಳಿದ ಮೂರು ಬ್ಲಾಕ್‌ಗಳ ಕಾಯ್ದಿಟ್ಟ ಅರಣ್ಯ ಪ್ರದೇಶ ಘೋಷಣೆ ಕುರಿತಾಗಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.