ಬಳ್ಳಾರಿ

ಕೈ ಮುಖಂಡರ ಕಚ್ಚಾಟ: ವಿರೋಧ ಪಕ್ಷಕ್ಕೆ ಚಿನ್ನಾಟ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 1
ದಶಕದಿಂದ ಬಳ್ಳಾರಿ ಕಾಂಗ್ರೆಸ್ ಭದ್ರಕೋಟೆ ಛಿದ್ರವಾಗಿ, ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಪ್ರಾಬಲ್ಯ ಸಾಧಿಸಿದ್ದರು. ಆದರೆ ಕಳೆದ ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಾಬಲ್ಯವನ್ನು ಮರು ಸ್ಥಾಪಿಸುವಲ್ಲಿ ಕೊಂಚ ಯಶ ಕಂಡಿತ್ತು. ಬರುವ ಲೋಕಸಭೆ ಚುನಾವಣೆಯಲ್ಲೂ ತನ್ನ ಪ್ರಾಬಲ್ಯ ಸಾಧಿಸುವ ಹಂಬಲವನ್ನು ಕಾಂಗ್ರೆಸ್ ಹೊಂದಿದ್ದರೂ, ಆ ಪಕ್ಷದ ಮುಖಂಡರ ಗೊಂದಲ, ದೂರುಗಳು ಸಹಜವಾಗಿಯೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಕಠಿಣವಾಗುವುದೆ ಎಂಬ ಮಾತುಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಜಿಲ್ಲೆಯಲ್ಲಿ ಬೇರೆ ಯಾವುದೆ ರಾಜಕೀಯ ಪಕ್ಷಕ್ಕೆ ಇರದ ಘಟಾನುಘಟಿ ಮುಖಂಡರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಆದರೆ ಕಾಂಗ್ರೆಸ್ ದಿನದಿಂದ ದಿನಕ್ಕೆ ಗೊಂದಲದ ಗೂಡಾಗುವತ್ತ ಹಜ್ಜೆ ಹಾಕುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ನಾಯಕರ ಕೊರತೆ ಇಲ್ಲ, ಅವರಲ್ಲಿನ ಗೊಂದಲಗಳೆ ಪಕ್ಷಕ್ಕೆ ಮುಳುವಾಗುವುದೆ ಎಂಬ ಭೀತಿ ಕಾರ್ಯಕರ್ತರಲ್ಲಿ ಕಾಡುತ್ತಿವೆ. ಕಾಂಗ್ರೆಸ್‌ಗೆ ವಿರೋಧ ಪಕ್ಷಕ್ಕಿಂತ ಕಾಂಗ್ರೆಸ್‌ನಲ್ಲಿರುವ ಮುಖಂಡರ ಗೊಂದಲಗಳೆ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀಳುವ ಆತಂಕ ಶುರುವಾಗಿದೆ.
ಗೊಂದಲ ಸೃಷ್ಟಿ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷದ ಮುಖಂಡರಲ್ಲಿನ ಭಿನ್ನಮತಗಳು ದೂರವಾಗಿ ಒಗ್ಗಟ್ಟಿನ ಮಂತ್ರ ಜಪಿಸಬೇಕಾಗಿತ್ತು. ಆದರೆ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಮಟ್ಟಿಗೆ ಲೋಕಸಭೆ ಚುನಾವಣೆ ಹತ್ತಿರುವಾಗುತ್ತಿದಂತೆ ಭಿನ್ನಮತಗಳು, ದೂರುಗಳು ಹೆಚ್ಚಾಗುತ್ತಿರುವುದು ಕಾಂಗ್ರೆಸ್ ಮಟ್ಟಿಗೆ ಆತಂಕದ ಸಂಗತಿ. ಕಾಂಗ್ರೆಸ್ ಪಕ್ಷದಲ್ಲಿ ಕೆಲ ಆಂತರಿಕ ವಿಷಯಗಳು ದಿನದಿಂದ ದಿನಕ್ಕೆ ಬೀದಿರಂಪಾಗುವ ಭೀತಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕಾಂಗ್ರೆಸ್‌ನ ಜಿಲ್ಲಾ ನಗರ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರು ಕೆ.ಸಿ. ಕೊಂಡಯ್ಯ ಅವರ ಮೇಲೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ರಾಜೀನಾಮೆ ನೀಡುತ್ತೇವೆ ಎನ್ನುವ ದೂರಿನ ಬೆಳವಣಿಗೆಗಳು ಸಹಜವಾಗಿಯೇ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ.
ಕೆಪಿಸಿಸಿ ಮೌನ: ಕೆಪಿಸಿಸಿಯು ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಘಟಕದಲ್ಲಿ ಎದ್ದಿರುವ ಅಸಮಾಧಾನಗಳು, ಗೊಂದಲಗಳಿಗೆ ತೆರೆ ಳೆಯುವ ಪ್ರಯತ್ನ ಮಾಡದಿರುವುದು, ಇನ್ನು ಇಲ್ಲಿನ ಗೊಂದಲಗಳ ಕುರಿತಾಗಿ ತಲೆ ಕೆಡಿಸಿಕೊಳ್ಳದಿರುವುದು ಕಾಂಗ್ರೆಸ್ ಮುಖಂಡರಲ್ಲಿನ ಭಿನ್ನಮತಗಳು ದಿನದಿಂದ ದಿನಕ್ಕೆ ಹೆಚ್ಚಾಗಲು ಕಾರಣವಾಗಿವೆ. ಬಳ್ಳಾರಿಯಲ್ಲಿ ಎದ್ದಿರುವ ಭಿನ್ನಮತ ಶಮನಕ್ಕೆ, ಗೊಂದಲಗಳಿಗೆ ತೆರೆ ಎಳೆಯಲು ಕೆಪಿಸಿಸಿ ಹೆಚ್ಚಿನ ಆಸಕ್ತಿವಹಿಸದಿರುವುದು ಕೆಲ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಮುಖಂಡರ ಅಸಮಾಧಾನಗಳು ಹಾಗೂ ಕೆಪಿಸಿಸಿಯ ನಿರ್ಲಕ್ಷ್ಯ ಧೋರಣೆಗಳು ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ತರುವ ಸಾಧ್ಯತೆಗಳಿವೆ.
ವಿರೋಧ ಪಕ್ಷಕ್ಕೆ ವರ: ಇದು ಕೇವಲ ಪಕ್ಷದ ಮುಖಂಡರ ಆಂತರಿಕ ಕಿತ್ತಾಟವಾಗಿದ್ದರೆ, ಅಭ್ಯರ್ಥಿ ಆಯ್ಕೆಯ ಸಂದರ್ಭದಲ್ಲಿ ಗೊಂದಲಗಳು ಏರ್ಪಡುವುದನ್ನು ತಳ್ಳಿ ಹಾಕುವಂತಿಲ್ಲ. ಸ್ಥಳೀಯರು, ಹೊರಗಿನವರು ಎಂಬ ಕೂಗು ಈಗಾಗಲೆ ಆಂತರಿಕ ವಲಯದಲ್ಲಿ ಪಿಸುಗುಟ್ಟುತ್ತಿದೆ. ಆದರೆ ಅದು ಬಹಿರಂಗಗೊಂಡಿಲ್ಲ. ಲೋಕಸಭೆಯ ಟಿಕೆಟ್ ನೀಡುವಲ್ಲಿ ಇದು ಬಹಿರಂಗವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಜಿಲ್ಲಾ ಕಾಂಗ್ರೆಸ್ ಮತ್ತಷ್ಟು ಗೊಂದಲದ ಗೂಡಾಗುವ ಭೀತಿ ಎದುರಾಗಿದೆ. ಕಾಂಗ್ರೆಸ್ ನಾಯಕರ ಈ ಕಚ್ಚಾಟ, ಗೊಂದಲಗಳು ವಿರೋಧ ಪಕ್ಷಗಳಿಗೆ ವರದಾನವಾಗಲಿವೆ ಎನ್ನುತ್ತವೆ ರಾಜಕೀಯ ಪಂಡಿತರ ಲೆಕ್ಕಾಚಾರಗಳು. ಒಂದು ವೇಳೆ ಕಾಂಗ್ರೆಸ್‌ಗೆ ಇಂತಹ ಸನ್ನಿವೇಶಗಳು ಎದುರಾದರೆ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ಕನಸಿನ ಮಾತಾದೀತು. ಆದರೆ ಇವೆಲ್ಲವನ್ನು ಮೆಟ್ಟಿ ನಿಂತು ಒಗ್ಗಟ್ಟು ಪ್ರದರ್ಶಿಸಿ ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆ ಎಂದು ಸಾಬೀತು ಪಡಿಸುವ ಉದ್ದೇಶ ಕಷ್ಟ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಗೆಲವು ಸಾಧಿಸಿದರೆ, ಈ ಬಾರಿ ಎದುರಾಳಿಯೊಂದಿಗೆ, ಆಂತರಿಕ ವೈಮನಸ್ಸುಗಳು ಕಾಂಗ್ರೆಸ್‌ನನ್ನು ಕುಗ್ಗಿಸಲಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಲೋಕಸಭೆ ಚುನಾವಣೆ ಘೋಷಣೆಯಾಗುವ ಪೂರ್ವದಲ್ಲಿಯೆ ಕೆಪಿಸಿಸಿ ಎಚ್ಚೆತ್ತುಕೊಂಡು, ಜಿಲ್ಲೆಯ ಮುಖಂಡರ ವೈಮನಸ್ಸು, ಗೊಂದಲ, ಆರೋಪ, ಪ್ರತ್ಯಾರೋಪಗಳಿಗೆ ತೆರೆ ಎಳೆಯುವುದೆ ಎಂಬುದನ್ನು ಕಾದು ನೋಡಬೇಕು.
 -  ಜಿಲ್ಲಾ ಕಾಂಗ್ರೆಸ್ ಮುಖಂಡರಲ್ಲಿ ಎದ್ದಿದೆ ಭಿನ್ನಮತ
-  ಕಾಂಗ್ರೆಸ್‌ಗೆ ಶಾಪವಾಗಲಿರುವ ಮುಖಂಡರ ಕಚ್ಚಾಟ
-  ಲೋಕಸಭಾ ಚುನಾವಣೆಗೆ ಶಮನವಾಗುವುದೆ ಭಿನ್ನಮತ?
-  ಭಿನ್ನಮತ ಶಮನಕ್ಕೆ ಕೈ ಹಾಕದೆ ಮೌನ ವಹಿಸಿದ ಕೆಪಿಸಿಸಿ
-  ಮುಖಂಡರಲ್ಲಿನ ಗೊಂದಲ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ    ಹಿನ್ನಡೆ ಆಗುವ ಸಾಧ್ಯತೆ
-  ಕಾಂಗ್ರೆಸ್‌ನ ಭಿನ್ನಮತದ ಲಾಭ ಪಡೆಯಲು ವಿರೋಧ ಪಕ್ಷಗಳು ಮುಂದು


-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.