ಬಳ್ಳಾರಿ

ಕೊಟ್ಟೂರಿಗೆ ಚಿಗಟೇರಿ ಹೋಬಳಿ ಸೇರಿಸಿ: ಒತ್ತಾಯ

Published On :

ಕೊಟ್ಟೂರು: ನೂತನ ಕೊಟ್ಟೂರು ತಾಲೂಕು ವ್ಯಾಪ್ತಿಗೆ ಹರಪ್ಪನಹಳ್ಳಿ ತಾಲೂಕಿನ ನಂದಿಬೇವೂರು, ಕೊಂಗನಹೊಸೂರು ಮತ್ತು ಕಣವಿಹಳ್ಳಿಗಳನ್ನು ಸೇರಿಸುವ ಮೂಲಕ ಸಂಪೂರ್ಣ ಚಿಗಟೇರಿ ಹೋಬಳಿಯನ್ನು ವಿಲೀನಗೊಳಿಸುವುದು ಜನಪ್ರತಿನಿಧಿಗಳ ಒಕ್ಕೂರಲಿನ ಬೇಡಿಕೆಯಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಒತ್ತಾಯಿಸಿದರು.
ಸೋಮವಾರ ಇಲ್ಲಿನ ಯಾತ್ರಿ ನಿವಾಸದಲ್ಲಿ ಕೂಡ್ಲಿಗಿ ತಾಲೂಕು ಆಡಳಿತ ಕರೆದಿದ್ದ ನೂತನ ಕೊಟ್ಟೂರು ತಾಲೂಕು ರಚನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುವ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನೂತನ ಕೊಟ್ಟೂರು ತಾಲೂಕಿಗೆ ಈಗಾಗಲೇ ಚಿಗಟೇರಿ ಹೋಬಳಿಯ 17 ಕಂದಾಯ ಗ್ರಾಮಗಳನ್ನು ಸೇರ್ಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜೊತೆಗೆ ಈ ಮೂರು ಗ್ರಾಮಗಳನ್ನು ಸೇರಿಸಿಕೊಳ್ಳುವುದು ಅತಿ ಸೂಕ್ತ. ಕೊಟ್ಟೂರು ತಾಲೂಕು ರಚನೆಗೆ ತಮ್ಮದೂ ಸಂಪೂರ್ಣ ಬೆಂಬಲವಿದೆ. ಇದರೊಟ್ಟಿಗೆ ಹರಪ್ಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಕೊಟ್ಟೂರು ಭಾಗದ ಜನಪ್ರತಿನಿಧಿಗಳು ನಿರ್ಣಯಕೈಗೊಳ್ಳಬೇಕು. ಈ ಮೂಲಕ ಹೈದರಾಬಾದ್ ಕರ್ನಾಟಕ ಭಾಗದವರಿಗೆ ಸಿಗುವ ವಿಶೇಷ ಸವಲತ್ತುಗಳು ಹರಪ್ಪನಹಳ್ಳಿಗೂ ದೊರಕುವಂತೆ ಸರ್ಕಾರದ ಮೇಲೆ ಒತ್ತಡ ತರೋಣ ಎಂದರು.
ನಿಜಕ್ಕೂ ದುರಂತ: ಕೊಟ್ಟೂರು ತಾಲೂಕು ಕೇಂದ್ರವಾಗಲು ಎಲ್ಲ ಬಗೆಯಿಂದಲೂ ಸಾಮರ್ಥ್ಯ ಹೊಂದಿದೆ. ಈಗಲಾದರೂ ಸರ್ಕಾರ ಈ ಪಟ್ಟಣವನ್ನು ತಾಲೂಕಾಗಿಸಲು ಹೊರಟಿರುವುದು ಅಭಿನಂದನಾರ್ಹ. ಜೆ.ಎಚ್. ಪಾಟೀಲರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಹರಪ್ಪನಹಳ್ಳಿ ನೂತನ ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾಗಿದ್ದು ನಿಜಕ್ಕೂ ದುರಂತ. ದಾವಣಗೆರೆ ಜಿಲ್ಲೆಗೆ ಸೇರಿಸುವ ಅವಶ್ಯಕತೆ ಇರಲಿಲ್ಲವಾದರೂ ಕೆಲವರ ಹಠಕ್ಕಾಗಿ ದಾವಣಗೆರೆ ಜಿಲ್ಲೆಗೆ ಸೇರಿಸಲಾಗಿದ್ದು, ಹರಪ್ಪನಹಳ್ಳಿ ಜನ ಇದೀಗ ಪಾಶ್ಚಾತ್ತಾಪ ಪಡುತ್ತಿದ್ದಾರೆ. ಈಗ ಕೊಟ್ಟೂರು ತಾಲೂಕು ರಚನೆಯೊಂದಿಗೆ ಹರಪನಹಳ್ಳಿ ತಾಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸುವ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.
ಸೂಕ್ತ ನಿರ್ಧಾರ: ಸಭೆಯ ನೇತೃತ್ವ ವಹಿಸಿದ್ದ ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಮಾತನಾಡಿ, ಕೊಟ್ಟೂರು ತಾಲೂಕು ರಚಿಸುವಾಗ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ಹೋಬಳಿಯನ್ನು ಸೇರಿಸುವುದು ಅತಿ ಸೂಕ್ತವಾದುದಾಗಿದೆ. ಇದಕ್ಕೆ ಈ ಭಾಗದ ಎಲ್ಲ ಜನಪ್ರತಿನಿಧಿಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ. 14ರಂದು ರಾಜ್ಯ ಬಜೆಟ್ ಮಂಡಿಸಲಿದ್ದು, ಕೊಟ್ಟೂರು ತಾಲೂಕು ರಚನೆಗೆ ಈ ಬಜೆಟ್ನಲ್ಲಿ ಅನುದಾನ ಮೀಸಲಿರಿಸುವ ಪ್ರಕಟಣೆ ಹೊರ ಬೀಳಲೇಬೇಕು ಎಂದು ಒತ್ತಾಯಿಸಿದರು.
ಮಾನದಂಡ ಇದೆ: ಕೂಡ್ಲಿಗಿ ತಹಸೀಲ್ದಾರ್ ನಿತೀಶ್ ಪಾಟೀಲ್ ಮಾತನಾಡಿ, ನೂತನ ಕೊಟ್ಟೂರು ತಾಲೂಕು ವ್ಯಾಪ್ತಿಗೆ ಹರಪನಹಳ್ಳಿ ತಾಲೂಕಿನ 17, ಹಗರಿಬೊಮ್ಮನಹಳ್ಳಿಯ 5, ಕೂಡ್ಲಿಗಿಯ 5 ಮತ್ತು ಕೊಟ್ಟೂರಿನ 21 ಕಂದಾಯ ಗ್ರಾಮಗಳನ್ನು ಸೇರಿಸಿಕೊಳ್ಳುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಎಲ್ಲ ಗ್ರಾಮಗಳು ಕೊಟ್ಟೂರಿಗೆ 13 ಕಿ.ಮೀ. ಅಂತರದಲ್ಲಿವೆ. ಇದು ತಾಲೂಕಾಗಲು ಎಲ್ಲ ಮಾನದಂಡ ಹೊಂದಿದೆ. ಈ ಸಂಬಂಧ ಜನಪ್ರತಿನಿಧಿಗಳು ಸಭೆಯಲ್ಲಿ ಮಂಡಿಸುವ ವಿಷಯಗಳನ್ನು ದಾಖಲಿಸಿಕೊಂಡು ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.
ಸಾಹಿತಿ ಕುಂ. ವೀರಭದ್ರಪ್ಪ, ಜಿಪಂ ಸದಸ್ಯರಾದ ಶಾರದಾ ಪ್ರಸಾದ್, ರತ್ನಮ್ಮ ಸಿದ್ದಲಿಂಗನಗೌಡ, ಕೆ.ಎಂ. ಶಶಿಧರ, ರೋಗಾಣಿ ಹುಲುಗಪ್ಪ, ಪಿ. ಚನ್ನಬಸವನಗೌಡ ಮಾತನಾಡಿ, ತಾವು ಪ್ರತಿನಿಧಿಸುವ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಕೊಟ್ಟೂರು ತಾಲೂಕಿಗೆ ಸೇರ್ಪಡೆಗೊಳ್ಳಲು ಸಹಮತ ವ್ಯಕ್ತಪಡಿಸಿದರು. ಎಂ.ಎಂ.ಜೆ. ಹರ್ಷವರ್ಧನ್, ಪಪಂ ಅಧ್ಯಕ್ಷೆ ಅನುಸೂಯಾ ಸೆರೆಗಾರ್, ಉಪಾಧ್ಯಕ್ಷ ಗುರುಶಾಂತಪ್ಪ, ತಾಪಂ ಸದಸ್ಯ ಎ.ಎಂ. ಗುರುಪ್ರಸಾದ್, ಕರಡಿ ಕೊಟ್ರೇಶ್, ಸಿದ್ದಲಿಂಗನಗೌಡ, ಅನಿಲ್ ಹೊಸಮನಿ, ಕೊಟ್ರೇಶ್, ಕನ್ನಿಹಳ್ಳಿ ಮಂಜುನಾಥಗೌಡ ಇದ್ದರು. ನಾಗೇಶ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.