ಬಳ್ಳಾರಿ

ಬುಡಕಟ್ಟು ಸಂಸ್ಕೃತಿ ಬಿಡಿಸಿಟ್ಟ ಜಾನಪದ ಸಂಭ್ರಮ

Published On :

ಕೊಪ್ಪಳ: ಈ ನಾಡಿನಲ್ಲಿ ಸಾಂಸ್ಕೃತಿಕ ವೈವಿಧ್ಯತೆ ಕಾಣಬಹುದು ಎಂಬುದನ್ನು ಕೇಳಿದ್ದ ಕೊಪ್ಪಳದ ಜನತೆಗೆ ಅದನ್ನು ಕಣ್ಣಾರೆ ಕಂಡು ಸವಿಯುವ ಸದಾವಕಾಶ ಒದಗಿಬಂದದ್ದು, ವಾರ್ತಾ ಇಲಾಖೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಬುಡಕಟ್ಟು ಕಲಾವಿದರ ಜಾನಪದ ಸಂಭ್ರಮದಲ್ಲಿ.
ನಾಡಿನ ಸಾಂಸ್ಕೃತಿಕ ಹಿರಿಮೆಯಲ್ಲಿ ವಿಶಿಷ್ಟ ಪಾತ್ರ ಹೊಂದಿರುವ ಬುಡಕಟ್ಟು ಕಲಾ ಸಂಸ್ಕೃತಿಯ ಜಾನಪದ ಸಂಭ್ರಮ ಕೊಪ್ಪಳದ ಸಾಹಿತ್ಯ ಭವನದಲ್ಲಿ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬುಡಕಟ್ಟು ಜನಾಂಗದ ಕಲಾವಿದರು, ಅಪ್ಪಟ ಗ್ರಾಮೀಣ ಸೊಗಡಿನ ಅಪರೂಪದ ಕಲಾಪ್ರಕಾರಗಳನ್ನು ಅನಾವರಣಗೊಳಿಸಿದರು.
ಬೆಂಗಳೂರಿನ ರಂಗನಿರ್ದೇಶಕ ಅಮರದೇವ ನಿರ್ದೇಶನದಲ್ಲಿ ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಐದು ದಿನಗಳ ತರಬೇತಿಯಲ್ಲಿ ಮೂಡಿ ಬಂದ ಜಾನಪದ ಹಬ್ಬದಲ್ಲಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ವಿ. ರಾಮಾಂಜನೇಯ ನೇತೃತ್ವದ ತಂಡದವರಿಂದ ಹಗಲುವೇಷ, ಮೋಹನ್ ಮುಂದಾಳತ್ವದ ಬಳ್ಳಾರಿಯ ದುರ್ಗಾದೇವಿ ಜನಪದ ಕಲಾ ತಂಡದವರಿಂದ ತಾಷಾ ರಾಂಡೋಲ ನೃತ್ಯ, ಬಳ್ಳಾರಿ ಜಿಲ್ಲೆ ಶ್ರುತಿಲಯ ಕಲಾ ಸಂಘದವರಿಂದ ಮಹಿಳಾ ಡೊಳ್ಳು ಕುಣಿತ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸೊನಾರಜೆಡ್ಡಿ ಗ್ರಾಮದ ಇದ್ದು ಸಮುದಾಯದ ಲಿಲ್ಲಿ ಜಾಕಿ ನೇತೃತ್ವದ ಆಮ್ಚೆ ಮದ್ಲೆ ಕಲಾ ತಂಡದಿಂದ ಡಮಾಮಿ ನ್ಯತ್ಯ ಮತ್ತು ಪುಗಡಿ ನೃತ್ಯ, ಬಳ್ಳಾರಿ ಜಿಲ್ಲೆ ಕಂಪ್ಲಿಯ ಜಾನಕಿ ನೇತೃತ್ವದ ಆದಿವಾಸಿ ಬುಡಕಟ್ಟು ಜನಪದ ನೃತ್ಯ ತಂಡದವರಿಂದ ಹಕ್ಕಿ-ಪಿಕ್ಕಿ ಜಾನಪದ ನೃತ್ಯ, ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕು ಗುಳ್ಳಾಪುರ ಗ್ರಾಮದ ಶೇಖರ ಲಕ್ಷ್ಮಣ ಸಿದ್ದಿ ನೇತೃತ್ವದ ತಂಡದಿಂದ ಡಮಾಮಿ ನೃತ್ಯಗಳು ಪ್ರದರ್ಶನಗೊಂಡವು.  ಬುಡಕಟ್ಟು ಕಲಾವಿದರ ಕಲಾ ಪ್ರದರ್ಶನ ನೋಡುಗರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
 ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮೂಲ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿದ್ದು, ಗ್ರಾಮೀಣ ಸೊಗಡಿನ ಜಾನಪದ ಕಲೆಗಳು ಮಾಯವಾಗುತ್ತಿವೆ.  ಬುಡಕಟ್ಟು ಕಲೆಗಳನ್ನು ಗುರುತಿಸಿ, ಅವುಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆ ಹಮ್ಮಿಕೊಂಡ ಬುಡಕಟ್ಟು ಕಲೆಗಳ ಜಾನಪದ ಸಂಭ್ರಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಂತಹ ಪ್ರಯತ್ನಗಳು ನಿರಂತರವಾಗಿರಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಬಸವರಾಜ ಆಕಳವಾಡಿ ಭಾಗವಹಿಸಿದ್ದರು.  ವಾರ್ತಾ ಇಲಾಖೆಯ ಗುಲ್ಬರ್ಗ ವಿಭಾಗದ ಉಪನಿರ್ದೇಶಕ ಬಸವರಾಜ ಎಂ. ಕಂಬಿ ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ವಂದಿಸಿದರು. ಸಂಪನ್ಮೂಲ ಅಧಿಕಾರಿ ಪಿ.ಎಸ್. ಹಿರೇಮಠ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.