ಬಳ್ಳಾರಿ

ಇಬ್ರಾಹಿಂ ನಾಪತ್ತೆ: ಸಿಬಿಐ ತನಿಖೆಗೆ ಆಗ್ರಹ

Published On :

ಬಳ್ಳಾರಿ: ಇಂಡಿಯನ್ ಬ್ಯೂರೋ ಆಫ್ ಮೈನ್ಸ್‌ನ ಅಧಿಕಾರಿಯಾಗಿ ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಕ್ಷ ಅಧಿಕಾರಿ, ಬಳ್ಳಾರಿ ಜಿಲ್ಲೆಯ ಸಂಡೂರು ನಿವಾಸಿ ಇಬ್ರಾಹಿಂ ಷರೀಫ್ ಅವರು ನಿಗೂಢ ರೀತಿ ನಾಪತ್ತೆಯಾಗಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಕರ್ನಾಟಕ ಜನಶಕ್ತಿ ಸಂಘದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಕಾರ್ಯಕರ್ತರ ಮೆರವಣಿಗೆ ಅಂಡರ್‌ಬ್ರಿಡ್ಜ್ ಮೂಲಕ ಗಡಿಗಿ ಚನ್ನಪ್ಪ ವೃತ್ತ ತಲುಪಿ ಅಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ಇಬ್ರಾಹಿಂ ಷರೀಫ್ ನಾಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಘೋಷಣೆ ಕೂಗಿ, ರಾಜ್ಯ ಸರ್ಕಾರ, ಒಡಿಶಾ ಸರ್ಕಾರ, ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಯ ಸಂಡೂರು ಮೂಲದ ಇಬ್ರಾಹಿಂ ಷರೀಫ್ ಕಳೆದ ನವೆಂಬರ್ 25ರಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿ 75 ದಿನಗಳು ಕಳೆದರೂ ಇದುವರೆಗೆ ಅವರು ಪತ್ತೆಯಾಗಿಲ್ಲ. ಅವರು ಎಲ್ಲಿದ್ದಾರೆ? ಪರಿಸ್ಥಿತಿ ಏನು ಎಂಬುದರ ಬಗ್ಗೆ ಒಡಿಶಾ ಸರ್ಕಾರ ತನಿಖೆ ನಡೆಸುತ್ತಿಲ್ಲ. ಆ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಕರ್ನಾಟಕ ಸರ್ಕಾರದ ಸಿಎಂ ಸಿದ್ದರಾಮಯ್ಯ ಅವರು ಒತ್ತಡ ಹೇರುತ್ತಿಲ್ಲ. ಜತೆಗೆ ಕೇಂದ್ರ ಸರ್ಕಾರವು ಸಹ ಮೌನ ತಳೆದಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಳ್ಳಾರಿ ಎಸ್ಪಿ ಡಾ. ಚೇತನ್‌ಸಿಂಗ್ ರಾಥೋರ್ ಈಚೆಗೆ ಸಂಡೂರು ಸಿಪಿಐ ರಮೇಶ್ ರಾವ್ ನೇತೃತ್ವದ ತಂಡವನ್ನು ಒಡಿಶಾ ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ತಂಡದವರು ಒಡಿಶಾ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳನ್ನು, ಕಮಿಷನರ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಇದರಿಂದಾಗಿ ಒಡಿಶಾ ಸರ್ಕಾರದ ಅಧಿಕಾರಿಗಳ, ಪೊಲೀಸರ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ಕೂಡಲೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕಾರ್ಯಕರ್ತರು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲಿರುವ ಉನ್ನತ ಅಧಿಕಾರಿಗಳಿಗೆ ದೇಶದಲ್ಲಿ ಭದ್ರತೆ, ರಕ್ಷಣೆ ಇಲ್ಲವೆಂದರೆ ಇನ್ನು ಜನ ಸಾಮಾನ್ಯರ ಪಾಡೇನು? ಇಡೀ ಪ್ರಕರಣವನ್ನು ಶೀಘ್ರವೆ ಸಿಬಿಐಗೆ ಒಪ್ಪಿಸಿ ಅಧಿಕಾರಿಯನ್ನು ಸಂಬಂಧಿಸಿದ ಸರ್ಕಾರಗಳು ಪತ್ತೆಹಚ್ಚಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ಸಂಘದ ರಾಜ್ಯಾಧ್ಯಕ್ಷ ವೈ. ಪ್ರತಾಪರೆಡ್ಡಿ, ಜಿಲ್ಲಾಧ್ಯಕ್ಷ ಪಿ. ಅಲ್ಲಾಸಾಬ್, ಪದಾಧಿಕಾರಿಗಳಾದ ಜಿ. ಲಕ್ಷ್ಮೀನಾರಾಯಣ ಯಾದವ್, ಕುಬೇರಾ, ಹಸೇನ್, ಭಾಸ್ಕರ್, ಬಸವ, ಜಗದೀಶ್ ಪ್ರಸಾದ್ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.