ಕರ್ಮದ ಮೇಲೆ ಬದುಕು ಕಟ್ಟಿಕೊಳ್ಳಲಾಗದು
ಕಾರಟಗಿ: ನೀತಿ ಎಂದರೆ ಮಾರ್ಗ. ಯಾವ ಮಾರ್ಗದಿಂದ ಹೋದರೆ ಬದುಕಿನ ಸಾರ್ಥಕತೆ ಮತ್ತು ಅಭ್ಯುದಯ ಮತ್ತು ನಿ-ಶ್ರೇಯಸ್. ಅಭ್ಯುದಯ ಎಂಬುದು ಸಮೃದ್ಧಿ, ನಿ-ಶ್ರೇಯಸ್ ಎಂದರೆ ಪರಮಶಾಂತಿ.
ಈ ಎರಡನ್ನು ಪಡೆದಾಗ ಬದುಕು ಪೂರ್ಣ. ಈ ಪೂರ್ಣ ಬದುಕಿನ ಮಾರ್ಗ ಕ್ರಮವೇ ನೀತಿ. ಈ ನೀತಿ ನಾಲ್ಕು ಬಗೆ. ನೀ.. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆ ಮಾತಿನಂತೆ ದುಡಿಮೆಯಿಂದಲೇ ಬದುಕಿನ ಸೌಂದರ್ಯ, ಸಮೃದ್ಧಿ. ಉಸುಕಿನ ಮೇಲೆ ಹೇಗೆ ನಮ್ಮ ಮಹಲನ್ನು ಕಟ್ಟಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ ಹಾಗೆ ಕರ್ಮದ ಮೇಲೆ ನಮ್ಮ ಬದುಕನ್ನು ಕಟ್ಟಿಕೊಳ್ಳಲಾಗದು. ಅದಕ್ಕಾಗಿ ನಾವು ಕರ್ಮ ಮಾಡಬೇಕು. ನಮ್ಮ ಕಾಯಕವನ್ನು ಪ್ರೀತಿಸಲೇಬೇಕು. ಕರ್ಮದ ದಾರಿ ಕಲ್ಲು ಮುಳ್ಳುಗಳಿಂದ ಕೂಡಿದೆ. ಜೀವನವೆಂಬುದು ಮುಳ್ಳಿನ ಹಾಸಿಗೆ. ದಾರಿಯಲ್ಲಿ ಬರುವ ವಿರೋಧ, ಅಡಚಣೆಗಳನ್ನು ಲೆಕ್ಕಿಸದೇ, ಅವುಗಳನ್ನು ತಡೆದುಕೊಳ್ಳುವುದೇ ತಪಸ್ಸು. ಕಷ್ಟ-ಸುಖ ಏನೇ ಬರಲಿ ಎದುರಿಸುತ್ತೇನೆ ಎಂಬ ಮನದ ಮಾತೇ ತಪಸ್ಸು.
ಈ ಬದುಕಿನ ಶಿಖರವನ್ನು ಏರಬೇಕಾದರೆ ನಿಧಾನವಾಗಿ ನಿರಂತರ ಏರುತ್ತಿರಬೇಕು. ಒಂದಿಲ್ಲೊಂದು ದಿನ ಶಿಖರದ ತುತ್ತ ತುದಿ ತಲುಪುತ್ತೇವೆ. ಯಶಸ್ಸಿನ ಶಿಖರವೂ ದುರ್ಗಮ. ಸುತು ದೀರ್ಘ ಕಾಲ ನೈರಂತರ್ಯಾ ಸತ್ಕಾರಾ ಸೇವಿ ತೋ ದೃಢ ಭೂಮಿ. ನೀನು ಮನಸ್ಸನ್ನು ದೀರ್ಘ ಕಾಲದ ವರೆಗೆ ಉತ್ತಾಹದಿಂದ ನಿರಂತರ ಪ್ರಯತ್ನಿಸಿದಾಗ ಒಂದು ದಿನ ನಿನಗೆ ಸಿದ್ಧಿ ಉಂಟಾಗುತ್ತದೆ, ನಿರಾಶನಾಗಬೇಡ. ಹತಾಶನಾಗಬೇಡ. ಒಂದು ಇಬ್ಬನಿ ಬಿಂದು ಹುಲ್ಲಿನ ಎಲೆಯ ಮೇಲೆ ಕುಳಿತಿತ್ತು. ಅದಕ್ಕೆ ಅನಂತಾಗಸಕ್ಕೆ ಏರುವ ಅಭಿಲಾಷೆ. ಕಾಲಲ್ಲ, ಪಕ್ಕದಲ್ಲಿದ್ದ ಹುಲ್ಲೆಲ್ಲ ಹೇಳಿತು. ಎಂಥಾ ಹುಚ್ಚ ನೀನು ಎಂದು ಮೂದಲಿಸಿತು. ಇಬ್ಬನಿ ಶಾಂತವಾಗಿ ಅಲುಗಾಡದಂತೆ ಕುಳಿತಿತ್ತು. ಸೂರ್ಯ ಬಂದ ಕಾವು ಕೊಟ್ಟ ಆವಿಯಾಗುತ್ತ ಹುಲ್ಲಿಗೆ ನಮಸ್ಕಾರ ಹೇಳಿ ಹೊರಟೇ ಹೋಯಿತು, ಅಂತರಕ್ಷಕ್ಕೇರಿತು. ಸೂರ್ಯನ ಕಾವಿಗೆ ತನ್ನನ್ನೊಡ್ಡಿಕೊಂಡಾಗ ಆಕಾಶಕ್ಕೇರುವ ಸಾಮರ್ಥ್ಯ ಇಬ್ಬನಿ ಬಿಂದುವಿಗೆ ಬಂತು. ಹಾಗೆ ನಮ್ಮನ್ನು ನಾವು ಕಷ್ಟಕ್ಕೆ ಒಡ್ಡಿಕೊಂಡಾಗ ಅನಂತತೆಯಡೆಗೆ ಸಾಗುವ ಸಾಮರ್ಥ್ಯ ಬರುತ್ತದೆ.
ಸುಭಾಶ್ಚಂದ್ರ ಭೋಸ್ಗೆ ಸೇನೆ ಕಟ್ಟುವ ಬಯಕೆ. ಆದರೆ ಒಬ್ಬರೂ ಹಿಂಬಾಲಕರಿಲ್ಲ. ಒಂದು ಸೇನೆ ಕಟ್ಟುವುದೇನು ಸಾಮಾನ್ಯವೇ? ಯಾವ ಶಸ್ತ್ರಾಸ್ತ್ರಗಳಿಲ್ಲ. ಅದರೆ, ಬರಿಗೈಲೆ ಹೋದರೂ ಕಷ್ಟನಷ್ಟ ಅನುಭವಿಸಿ ದೇಶ ದೇಶಗಳ ನೆಲೆಯಲ್ಲಿ ಒಂದು ಹಿಂದ್ ಸೇನೆ ಕಟ್ಟಿದ. ಆತನ ಸೇನೆ ಹೆಸರಿಗೆ ನಡುಗಿದ ಬ್ರಿಟಿಷ್ರು ದೇಶ ಬಿಡುವ ತಯಾರಿ ಶುರು ಮಾಡಿದರು. ಒಬ್ಬ ವ್ಯಕ್ತಿಯ ಪರಿಶ್ರಮ. ಅದು ತಪಸ್ಸು.
ಒಂದು ಘಟನೆ: ಅದೊಬ್ಬ ಶ್ರೇಷ್ಠ ವೈದ್ಯ ಅತ್ಯಂತ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾನೆ. ತನ್ನ ಹತ್ತಾರು ಸಹಾಯಕರೊಂದಿಗೆ ಆತನಿಗೆ ಒಬ್ಬನೇ ಮಗ ಅತ್ಯಂತ ಮುದ್ದಿನಿಂದ ಬೆಳಸಿದ್ದ. ಆತ ಶಸ್ತ್ರಚಿಕಿತ್ಸೆಯಲ್ಲಿ ಮಗ್ನನಾಗಿದ್ದ. ಕಿರಿಯ ವೈದ್ಯರೊಬ್ಬರು ಬಂದು ಆತನ ಮಗ ಅಪಘಾತದಲ್ಲಿ ತೀರಿ ಹೋದ ಸುದ್ದಿ ತಿಳಿಸಿದರು.
ಒಂದು ಕ್ಷಣ ವೈದ್ಯ ಪೂರ್ಣ ಶಿಥಿಲನಾದ. ಮರುಕ್ಷಣವೇ ಕರ್ತವ್ಯ ನಿರತನಾದ. ಅದೇ ಮಗ್ನತೆಯಿಂದ ಚಿಕಿತ್ಸೆ ಪೂರ್ಣಗೊಳಿಸಿದ. ರೋಗಿ ಬದುಕಿದ. ವೈದ್ಯ ಆತನನ್ನು ಕೈಕುಲಕಿ ಮುಗುಳ್ನಗೆ ಬೀರಿದ. ಮರುಕ್ಷಣವೇ ಕಣ್ಣು ತುಂಬಿಕೊಂಡು ಕಣ್ಣೀರ ಬಿಂದುಗಳನ್ನುದುರಿಸುತ್ತ ಹೊರನಡೆದ ಮಗನ ಶವವನ್ನು ನೋಡಲು....
ಆ ಮನಸ್ಸಿನ ಸಿದ್ಧತೆ ಎಂತಹುದಿರಬೇಕು. ಅದುವೇ ತಡೆದುಕೊಳ್ಳುವ ತಪಸ್ಸು...
(ಫೆ. 9ರ ಪ್ರವಚನ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

