ಬಳ್ಳಾರಿ

ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜಿಗೆ 50ರ ಗರಿ

Published On :

 ವೈ.ಎಂ. ಸಿದ್ಧಲಿಂಗಸ್ವಾಮಿ
ಬಳ್ಳಾರಿ: ನಾಲ್ಕೈದು ದಶಕಗಳಿಂದೆ ಶಿಕ್ಷಣ ಎಂದರೆ ಅದರಲ್ಲೂ ಉನ್ನತ ಶಿಕ್ಷಣ ಮಾಡಬೇಕೆಂದರೆ ತೀರಾ ಕಷ್ಟದ ಕಾಲ, ಅಂತಹ ಸಂದರ್ಭದಲ್ಲಿ 1963ರಲ್ಲಿ ಬಳ್ಳಾರಿಯಲ್ಲಿ ಸ್ಥಾಪಿತವಾದ ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯ ಇಂದಿಗೆ ಸುಮಾರು 5000 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಸಮಾಜಕ್ಕೆ ನೀಡಿದೆ. ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಶಿಕ್ಷಕರನ್ನು ತಯಾರಿಸಿದ ಬಳ್ಳಾರಿಯ ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಈಗ 50ರ ಸಂಭ್ರಮ. ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು ಮದುವಣಗಿತ್ತಿಯಂತೆ ಕಾಲೇಜು ಸಿದ್ಧಗೊಂಡಿದೆ.
50 ವರ್ಷಗಳಿಂದ ಮಹಾವಿದ್ಯಾಲಯವು ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವುದು ಮೆಚ್ಚಲೆ ಬೇಕಾದ ಸಂಗತಿ. ಈ ಭಾಗದ ಒಂದು ಉತ್ತಮ ಶಿಕ್ಷಣ ಸಂಸ್ಥೆ ಫೆ. 16 ಮತ್ತು 17ರಂದು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ತಮ್ಮ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮಹಾದಾಸೆಯನ್ನು ವೀವಿ ಸಂಘ ಕೊಟ್ಟೂರ ಸ್ವಾಮಿಗಳ ಬಳಿ ಹೇಳಿಕೊಂಡಾಗ ಅಂದು 1961-62ರಲ್ಲಿ ಸ್ವಾಮೀಜಿ  464 ಎಕರೆ ಜಮೀನನ್ನು ದಾನವಾಗಿ ನೀಡಿದರು. ಅದರ ಫಲವಾಗಿಯೇ 1963ರಲ್ಲಿ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘವು ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯವನ್ನು ಹುಟ್ಟುಹಾಕಿತು.
ಬಿಇಡಿ ಕಾಲೇಜು ಇರಲಿಲ್ಲ: ಬಳ್ಳಾರಿಯ ಪದವಿ ವಿದ್ಯಾರ್ಥಿಗಳು ಬಿಇಡಿ ಮಾಡಬೇಕಾದರೆ ಬಳ್ಳಾರಿಯಿಂದ ದೂರದ ಗುಲ್ಬರ್ಗ, ಮೈಸೂರು, ಧಾರವಾಡ ಸೇರಿದಂತೆ ಇತರ ಕಡೆಗೆ ಹೋಗಬೇಕಾಗಿತ್ತು. ಇಲ್ಲವಾದರೆ ಬಳ್ಳಾರಿಯ ಗಡಿ ಭಾಗವಾದ ಆಂಧ್ರಪ್ರದೇಶದ ಜಿಲ್ಲೆಗಳಾದ ಅನಂತಪುರ, ಕರ್ನೂಲು, ಕಡಪ, ಮೆಹಬೂಬ್ ನಗರ, ಚಿತ್ತೂರು ಜಿಲ್ಲೆಗಳಿಗೆ ಹೋಗಬೇಕಿತ್ತು. ಆದರೆ ಅಂದು ಆ ವಿದ್ಯಾರ್ಥಿಗಳಿಗೆ ತವರಿನಲ್ಲೆ ಬಿಇಡಿ ಪದವಿ ಶಿಕ್ಷಣ ನೀಡಲು ವೀವಿ ಸಂಘ ಮುನ್ನುಡಿ ಬರೆಯಿತು. ಅದರ ಫಲವಾಗಿಯೆ ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯ ಉದಯಿಸಿತು.
ಭದ್ರ ಬುನಾದಿ: ಕೇವಲ ರಾಜ್ಯದ ವಿದ್ಯಾರ್ಥಿಗಳಲ್ಲದೆ ಆಂಧ್ರಪ್ರದೇಶ ಮತ್ತು ಕೇರಳದ ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ರೂಪಿಸಿದ ಕೀರ್ತಿ ಈ ಮಹಾವಿದ್ಯಾಲಯಕ್ಕಿದೆ. ದಿ. ಡಿ. ಮರಿಯಪ್ಪ ಅವರು ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರಾಗಿ ಶಿಕ್ಷಣ ಮಹಾವಿದ್ಯಾಲಯದಕ್ಕೆ ಭದ್ರ ಆಡಳಿತ ಹಾಗೂ ಶೈಕ್ಷಣಿಕ ಬುನಾದಿಯನ್ನು ಹಾಕಿದರು. ಇವರಿಗೆ ಸಾಥ್ ನೀಡಿದವರು ಜಿ.ಎಂ. ವೀರಭದ್ರಯ್ಯನವರು. ಆರಂಭದಲ್ಲಿ ಸಂಸ್ಥಾಪಕ ಪ್ರಾಂಶುಪಾಲರಾದ ಮರಿಯಪ್ಪನವರು 12 ವರ್ಷಗಳ ಕಾಲ ಮಹಾವಿದ್ಯಾಲಯದಲ್ಲಿ ಚುಕ್ಕಾಣಿ ಹಿಡಿಯುವ ಮೂಲಕ ಉತ್ತಮ ಆಡಳಿತ ನಡೆಸಿಕೊಟ್ಟಿದ್ದೇ ಇಂದಿಗೂ ಕೊಟ್ಟೂರು ಸ್ವಾಮಿ ಬಿಇಡಿ ಕಾಲೇಜು ಗುಣಾತ್ಮಕತೆ ಕಾಯ್ದುಕೊಂಡು ಬಂದಿದೆ. ಕಾಲೇಜಿನ ಏಳಿಗೆಯಲ್ಲಿ ಜಿ.ಎಂ. ವೀರಭದ್ರಯ್ಯನವರ ಪಾತ್ರ ಹೆಚ್ಚು ಎಂದು ಹಳೆ ವಿದ್ಯಾರ್ಥಿಗಳ ಬಳಗ ಸ್ಮರಿಸುತ್ತದೆ.
1963- 64ರಲ್ಲಿ ಆರಂಭವಾದ ಶಿಕ್ಷಣ ಮಹಾವಿದ್ಯಾಲಯ ಮೈಸೂರು ವಿಶ್ವವಿದ್ಯಾಲಯ ಸಂಲಗ್ನತೆಯನ್ನು ಪಡೆದು, ಅದೇ ವರ್ಷ ಶಾಶ್ವತ ಸಂಲಗ್ನತೆಯನ್ನು ಪಡೆಯುವಂತಾಯಿತು. 1965ರಿಂದ ಈ ಕಾಲೇಜು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂಲಗ್ನತೆಯಲ್ಲಿಗೊಂಡಿತು. ನಂತರ 1980ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಸಂಲಗ್ನತೆಗೆ ಒಳಪಟ್ಟಿದೆ. 1972ರಲ್ಲಿ ಈ ಶಿಕ್ಷಣ ಮಹಾವಿದ್ಯಾಲಯವು ಅಖಿಲ ಕರ್ನಾಟಕ 5ನೇ ಪ್ರಶಿಕ್ಷಕರ ಸಮ್ಮೇಳನವನ್ನು ಆಯೋಜಿಸಿದ್ದು, ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು, ಶಿಕ್ಷಣ ಮಂತ್ರಿ ಎಸ್.ಆರ್. ಕಂಠಿ ಅವರು ಸಮ್ಮೇಳನಕ್ಕೆ ಆಗಮಿಸಿ, ಶಿಕ್ಷಣ ಸಂಸ್ಥೆಯನ್ನು ಪ್ರೋತ್ಸಾಹಿಸಿದ್ದರು.
ಉನ್ನತ ಹುದ್ದೆಗೇರಿದ್ದಾರೆ: ಸುಮಾರು 50 ವರ್ಷಗಳ ಅವಧಿಯಲ್ಲಿ 5000 ಶಿಕ್ಷಕರನ್ನು ಸಮಾಜಕ್ಕೆ ನೀಡಿದೆ ಈ ಕಾಲೇಜು. ಕೊಟ್ಟೂರು ಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಕೇವಲ ಶಿಕ್ಷಕರಾಗದೆ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುವುದು ವಿಶೇಷ. ಬೆಂಗಳೂರಿನ ಆರ್ಐಇ ನಿರ್ದೇಶಕ ಸಿ.ವ್ಹಿ. ಹಿರೇಮಠ್, ಗುಲ್ಬರ್ಗ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಎ. ರುದ್ರಪ್ಪ, ಧಾರವಾಡ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ನಿರ್ದೇಶಕ ಜಿ.ಆರ್. ನಾಯಕ್, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗ ಪ್ರಾಧ್ಯಾಪಕ ಡಾ.ಎಚ್.ಎಂ. ಕಾಶೀನಾಥ್, ಬೆಂಗಳೂರಿನ ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ ನಿರ್ದೇಶಕ ಸಿದ್ದರಾಮ ಮನಹಳ್ಳಿ ಅವರು ಇದೇ ಕಾಲೇಜಿನ ವಿದ್ಯಾರ್ಥಿಗಳು ಎಂಬುದು ಕಾಲೇಜಿನ ಹೆಗ್ಗಳಿಕೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.