ಬಳ್ಳಾರಿ

ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಿ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಫೆ. 13
ಬೇಸಿಗೆ ಆರಂಭವಾಗುತ್ತಿರುವುದರಿಂದ ತಾಲೂಕಿನ ಯಾವುದೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಯಾವುದೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ತಕ್ಷಣ ಅಧಿಕಾರಿಗಳು ಪರಿಹರಿಸುವ ಮೂಲಕ ಜನತೆಗೆ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಕೋರಿ ಫಕ್ಕೀರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ 15ನೇ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಯಾವುದೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ವಿಪರೀತ ನೀರಿನ ಸಮಸ್ಯೆ ಕಂಡುಬಂದ ಕಡೆಗೆ ತಕ್ಷಣ ಬೋರ್‌ವೆಲ್ ಹಾಕಿಸಿ ನೀರು ಸರಬರಾಜು ಮಾಡಿಕೊಡಬೇಕು. ಯಾವುದೆ ಕಾರಣಕ್ಕೂ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಸ್ಥಳೀಯ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.
ಜಿಪಂ ಉಪ ವಿಭಾಗದ ಅಧಿಕಾರಿ ಕೆ. ದಿವಾಕರ್ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈಗಾಗಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ಕೆಲ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂಥ ಹಳ್ಳಿಗಳನ್ನು ಗುರುತಿಸಿ 15 ದಿನಗಳ ಒಳಗಾಗಿ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಬೋರ್‌ವೆಲ್ ಹಾಕಲು ಈಗಾಗಲೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಸಹಾಯವಾಣಿ: ಫ್ಲೋರೈಡ್ ಅಂಶ ಅಧಿಕವಾಗಿರುವ ಹಳ್ಳಿಗಳನ್ನು ಗುರುತಿಸಲಾಗಿದೆ. ಈ ಹಳ್ಳಿಗಳಲ್ಲಿ ಕೊಳವೆಬಾವಿ ಕೊರೆಯಿಸಿ ಶುದ್ಧ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಬೇಸಿಗೆಯಲ್ಲಿ ತಾಲೂಕಿನ ಯಾವುದೆ ಪ್ರದೇಶದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ನೀರಿನ ಸಹಾಯವಾಣಿಗೆ ಕರೆ ಮಾಡಬಹುದು. ಹೊಸಪೇಟೆಯಲ್ಲಿನ ಜಿಪಂ ಕಚೇರಿ ದೂ.ಸಂ.-231048, ಹೊಸಪೇಟೆ ತಾಪಂ ಕಚೇರಿ- 231753ಗೆ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದರೆ, ತಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ. ಈ ಸಂಖ್ಯೆಗೆ ಫೋನು ಮಾಡಬಹುದು ಎಂದು ಹೇಳಿದರು.
ವಸತಿ ಯೋಜನೆಯಲ್ಲಿ ಈಗಾಗಲೆ ಮನೆ ಮಂಜೂರು ಆಗಿರುವ ಫಲಾನುಭವಿಗಳಿಗೆ ಬೇಗನೆ ಮನೆಗಳನ್ನು ಕಟ್ಟಿಕೊಡಲು ಅವಕಾಶ ಕಲ್ಪಿಸಿಕೊಡಬೇಕು. ಈಗಾಗಲೆ ವಾಸಿಸುವ ಮನೆಗಳನ್ನು ಕೆಡವಿ ಬೀದಿಯಲ್ಲಿ ವಾಸಮಾಡುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಅರ್ಧಕ್ಕೆ ನಿಂತಿರುವ ಮನೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಾಪಂ ಸದಸ್ಯ ಸಿ.ಡಿ. ಮಹಾದೇವ ಅಧಿಕಾರಿಗಳಿಗೆ ಸೂಚಿಸಿದರು.
ಅನುಮೋದನೆ: ಕಂಪ್ಲಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ರಚಿಸಲು ಸರ್ಕಾರ ಈಗಾಗಲೆ ಸಕಲ ಸಿದ್ಧತೆಗಳನ್ನು ನಡೆಸಿದ್ದು, ಕಂಪ್ಲಿ ಹೋಬಳಿಯ ಎಲ್ಲ ಗ್ರಾಪಂಗಳು ಈಗಾಗಲೆ ಕಂಪ್ಲಿಯನ್ನು ತಾಲೂಕನ್ನಾಗಿ ರಚಿಸಲು ಅನುಮೋದನೆ ಕಳುಹಿಸಿದಂತೆ ತಾಲೂಕು ಪಂಚಾಯಿತಿಯಿಂದ ಅನುಮೋದನೆ ಕಳುಹಿಸಿಕೊಡುವಂತೆ ಸದಸ್ಯ ಮಾಹದೇವ ಸಭೆಯಲ್ಲಿ ವಿನಂತಿಸಿಕೊಂಡಾಗ, ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಅನುಮೋದನೆಗೆ ಬೆಂಬಲ ಸೂಚಿಸಿ ಅನುಮೋದಿಸಿದರು.
ಸದಸ್ಯರಾದ ಲಕ್ಷ್ಮಣ, ರಹಿಮತ್ ಗೌಡ ಸೇರಿದಂತೆ ಇತರೆ ಸದಸ್ಯರು ಸಭೆಯಲ್ಲಿ ಅನೇಕ ವಿಷಯಗಳನ್ನು ಚರ್ಚಿಸಿದರು. ತಾಪಂ ಅಧ್ಯಕ್ಷೆ ತಾರಿಹಳ್ಳಿ ಹಾಲಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಇಒ ರಮೇಶ್ ತಳವಾರ್, ಎಲ್ಲ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.