ಕುಖ್ಯಾತ ಮನೆಗಳ್ಳರ ಬಂಧನ: ಎಸ್ಪಿ ರಾಥೋಡ್
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 13
ಇಪ್ಪತ್ತೇಳು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ರು. 12 ಲಕ್ಷ ಮೌಲ್ಯದ ಅರ್ಧ ಕೆಜಿ ಬಂಗಾರ, ರು. 2 ಲಕ್ಷ ಮೌಲ್ಯದ ಮೂರೂವರೆ ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಇದೀಗ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಇನ್ನು ಹೆಚ್ಚಿನ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಎಸ್ಪಿ ಡಾ. ಚೇತನ್ಸಿಂಗ್ ರಾಥೋಡ್ ತಿಳಿಸಿದರು.
ಗುರುವಾರ ಸಂಜೆ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಇಬ್ಬರು ಆರೋಪಿಗಳಲ್ಲಿ ಗದಗ ತಾಲೂಕಿನ ಅದಲಗೇರಿ ಗ್ರಾಮದ ಸತ್ಯಪ್ಪ, ಬಳ್ಳಾರಿಯ ವಿದ್ಯಾನಗರದ ಭತ್ರಿಯಲ್ಲಿ ವಾಸ ಮಾಡುತ್ತಿದ್ದು, ಮತ್ತೋರ್ವ ಆರೋಪಿ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಮಲ್ಲಿಕಾರ್ಜುನ ಶಂಕ್ರಪ್ಪ ಬಿರಾದಾರ್ ಬೆಂಗಳೂರಿನ ಬೆಳ್ತಗಂಡಿಯಲ್ಲಿ ವಾಸವಾಗಿದ್ದನು. ಇವರಿಬ್ಬರು ಬಳ್ಳಾರಿಯಲ್ಲಿ ಬೀಗ ಹಾಕಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದು, ಇವರನ್ನು ಫೆ. 5ರಂದು ಬಳ್ಳಾರಿಯಲ್ಲೆ ಬಂಧಿಸಲಾಗಿದೆ ಎಂದರು.
ಜೈಲಿನಲ್ಲೆ ಇಬ್ಬರಿಗೂ ಸ್ನೇಹ: ಆರೋಪಿ ಸತ್ಯಪ್ಪ ಗದಗಿನಲ್ಲಿ ಕಳ್ಳತನ ಮಾಡಿ ಬಿಜಾಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರೆ, ಅಂತೆಯೆ ಕಳ್ಳತನ ಆರೋಪದ ಮೇಲೆ ಮಲ್ಲಿಕಾರ್ಜುನ ಬಿಜಾಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದು, ಇಬ್ಬರಿಗೆ ಜೈಲಿನಲ್ಲಿ ಸ್ನೇಹ ಬೆಳದಿತ್ತು. ಜೈಲಿನಿಂದ ಬಿಡುಗಡೆಯಾದ ನಂತರ ಸತ್ಯಪ್ಪ ಬಳ್ಳಾರಿಯ ಭತ್ರಿ ರಸ್ತೆಯಲ್ಲಿ ವಾಸವಾಗಿದ್ದು, ಆಟೋ ಮತ್ತು ಟ್ರ್ಯಾಕ್ಟರ್ ಓಡಿಸುತ್ತಿದ್ದನು. ಮಲ್ಲಿಕಾರ್ಜುನ ಬೆಂಗಳೂರಿನಲ್ಲಿ ವಾಸವಾಗಿದ್ದನು. ಕಳ್ಳತನ ಮಾಡುವಾಗ ಮಲ್ಲಿಕಾರ್ಜುನ ಬಳ್ಳಾರಿಗೆ ಬರುತ್ತಿದ್ದನು. ನಂತರ ಕಳ್ಳತನದ ಪಾಲು ಪಡೆದು ಬೆಂಗಳೂರಿಗೆ ಹೋಗುತ್ತಿದ್ದ. ಸತ್ಯಪ್ಪ ಬಳ್ಳಾರಿಯಲ್ಲಿಯೆ ಇರುತ್ತಿದ್ದನು. ಇಬ್ಬರು ದ್ವಿಚಕ್ರ ವಾಹನದಲ್ಲಿ ಹಗಲು ಸಮಯದಲ್ಲಿ ನಗರದಲ್ಲಿ ಸುತ್ತಾಡಿ, ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ 9 ಮತ್ತು 10 ಗಂಟೆ ಸುಮಾರಿನಲ್ಲಿ ಮತ್ತೊಮ್ಮೆ ಬೀಗ ಹಾಕಿರುವುದನ್ನು ಖಾತ್ರಿ ಪಡಿಸಿಕೊಂಡು, ತಡರಾತ್ರಿ ಕಬ್ಬಿಣದ ರಾಡ್ಗಳಿಂದ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಹೀಗೆ 27 ಮನೆ ಕಳ್ಳತನ ಮಾಡಿದ್ದಾರೆ ಎಂದು ಹೇಳಿದರು.
10 ದಿನ ವಶಕ್ಕೆ: ಗಾಂಧಿನಗರ, ಕೌಲ್ಬಜಾರ್, ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಕಳ್ಳತನದಲ್ಲಿ ಈ ಇಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ. ಇದೀಗ ಹೆಚ್ಚಿನ ವಿಚಾರಣೆಗೆ ನ್ಯಾಯಾಲಯದಿಂದ 10 ದಿನಗಳ ಮಟ್ಟಿಗೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಡಿವೈಎಸ್ಪಿ ಮುರುಗಣ್ಣನವರ್, ಬಿ.ಎಸ್. ಚೌವ್ಹಾಣ್, ಇನ್ಸ್ಪೆಕ್ಟರ್ ಎಂ.ಬಿ. ಗೋಳಸಂಗಿ, ಪಿಎಸ್ಐ ಚಂದನ್ ಗೋಪಾಲ್, ನಜೀರ್ ಅಹ್ಮದ್ ಮತ್ತು ಸ್ಕ್ವಾಡ್ ಸಿಬ್ಬಂದಿ ಕೆ.ಎ. ಬಸವರಾಜ್, ಜಟ್ಟಿಂಗಪ್ಪ, ಧನಂಜಯ, ಕೆ. ಸಿದ್ದಪ್ಪ, ನಾಗರಾಜ್, ಅನ್ವರ್, ಪಿ.ಸಿ. ರಾಜನಾಗ, ವೈ. ಸಂತೋಷ್ಕುಮಾರ್, ಸುಮಾ, ಕುಮಾರಸ್ವಾಮಿ, ಪ್ರವೀಣ್ ಸೇರಿದಂತೆ ಇತರರಿಗೆ ಯೋಗ್ಯ ಬಹುಮಾನ ನೀಡುವುದಾಗಿ ತಿಳಿಸಿದರು.
ಎಎಸ್ಪಿ ಸಿ.ಕೆ. ಬಾಬು, ಡಿವೈಎಸ್ಪಿ ಮುರುಗಣ್ಣನವರ್, ಮಾಲ್ತೇಶ್, ಎಂ.ಬಿ. ಗೋಳಸಂಗಿ, ರವಿಕುಮಾರ್, ಚಂದನ್ಗೋಪಾಲ್, ನಿರಂಜನ್, ರಾಘವೇಂದ್ರ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

