ಮಾ. 2ರಂದು ಬಸವೇಶ್ವರರ ಕಂಚಿನ ಪುತ್ಥಳಿ ಲೋಕಾರ್ಪಣೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ಬಸವೇಶ್ವರ ಬಜಾರ್ನಲ್ಲಿ ಕಾಯಕಯೋಗಿ ಬಸವೇಶ್ವರರ ನೂತನ ಕಂಚಿನ ಪುತ್ಥಳಿಯನ್ನು ಮಾ. 2ರಂದು ಲೋಕಾರ್ಪಣೆಗೊಳಿಸಲು ಭಾನುವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ತಾಪಂ ಸಭಾಂಗಣದಲ್ಲಿ ನಡೆದ ಜನಪ್ರತಿನಿಧಿಗಳ, ವಿವಿಧ ಸಮಾಜದ ಅಧ್ಯಕ್ಷರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್. ಭೀಮಾನಾಯ್ಕ, ವಿವಿಧ ಮಠಾಧೀಶರು ಹಾಗೂ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಕಾಯಕಯೋಗಿ ಬಸವೇಶ್ವರರ ವೃತ್ತ ಹಾಗೂ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಉಜ್ಜಿನಿ ಸದ್ಧರ್ಮ ಪೀಠದ ಶ್ರೀಗಳು, ಡಂಬಳದ ತೋಂಟಾದಾರ್ಯ ಶ್ರೀಗಳು, ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ, ವೀರಶೈವ ಪಂಚಮಸಾಲಿ ಸಮಾಜದ ಶ್ರೀಗಳು, ವಾಲ್ಮೀಕಿ ಸಮಾಜದ ಶ್ರೀಗಳು, ಕನಕ ಗುರುಪೀಠದ ಶ್ರೀಗಳು, ಉಪ್ಪಾರ ಸಮಾಜದ ಸ್ವಾಮೀಜಿ, ಹೊಸಪೇಟೆ ಕೊಟ್ಟೂರು ಸಂಗನಬಸವ ಸ್ವಾಮೀಜಿ ಸೇರಿದಂತೆ ಎಲ್ಲ ಸಮಾಜದ ಮಠಾಧೀಶರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಮಂತ್ರಿ ಪಿ.ಟಿ. ಪರಮೇಶ್ವರ ನಾಯ್ಕ, ಜಿಲ್ಲೆಯ ಎಲ್ಲ ಶಾಸಕರು, ಸಂಸದರನ್ನು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಭೆ ನಿರ್ಧರಿಸಿತು.
ಲೋಕೋಪಯೋಗಿ ಇಲಾಖೆಯಿಂದ ಅಂದಾಜು ರು. 20 ಲಕ್ಷ ವೆಚ್ಚದಲ್ಲಿ ಅಶ್ವಾರೂಢ ಬಸವಣ್ಣನವರ ಕಂಚಿನ ಪುತ್ಥಳಿಯನ್ನು ನಿರ್ಮಿಸಲಾಗಿದ್ದು, ಈಗಾಗಲೆ ಪುತ್ಥಳಿ ಸಿದ್ಧಗೊಂಡಿದೆ.
ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರ ಶ್ರೀ, ಹಳೆ ಹಗರಿಬೊಮ್ಮನಹಳ್ಳಿಯ ಹಾಲಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ, ಉಪಾಧ್ಯಕ್ಷೆ ನಾಗರತ್ನಮ್ಮ ವೆಂಕಟೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಬೆಣಕಲ್ ಪ್ರಕಾಶ್, ಕಾಂಗ್ರೆಸ್ ಮುಖಂಡ ಹೆಗ್ಡಾಳ ರಾಮಣ್ಣ, ಆರ್. ರಾಮನಗೌಡ, ಚಟ್ರಿಕಿ ವೀರಭದ್ರಪ್ಪ, ವಕೀಲ ಬಿ.ವಿ. ಶಿವಯೋಗಿ, ಸಿನಿಮಾ ಮಂಜಣ್ಣ, ಎಪಿಎಂಸಿ ಸದಸ್ಯ ಹೂಗಾರ ಮಲ್ಲಣ್ಣ, ಜೆಡಿಎಸ್ ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ, ಎಚ್.ಎಂ. ಚೋಳರಾಜ, ವರದಾಪುರ ಕುಮಾರ್, ವೀರಶೈವ ಪಂಚಮಸಾಲಿ ಸಮಾಜದ ಮುಖಂಡ ಬಾವಿಬೆಟ್ಟಪ್ಪ, ಅಕ್ಕಿ ಶಿವಣ್ಣ, ಬನ್ನಿಗೋಳ ವೆಂಕಣ್ಣ, ಕೆ.ಎಂ. ಇಂದುಮತಿ ತಿಪ್ಪೇಸ್ವಾಮಿ, ಎಂ.ಪಿ.ಎಂ. ಚನ್ನವೀರಮ್ಮ, ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಭಾರತಮ್ಮ ಬೆಲ್ಲದ್, ಮಂಜುಳಾ ಕೃಷ್ಣನಾಯ್ಕ, ಗಂಗಮ್ಮ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ವಾಲ್ಮೀಕಿ ಸಂಘದ ಅಧ್ಯಕ್ಷ ಡಿಶ್ ಮಂಜುನಾಥ, ಕಡ್ಲಬಾಳು ಗ್ರಾಪಂ ಅಧ್ಯಕ್ಷೆ ಮಂಜುಳಾ ಕೃಷ್ಣಪ್ಪ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಹಗರಿಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಎಂ. ಶಿವಕುಮಾರ, ಎಚ್. ಯಮನೂರಪ್ಪ, ಡಿ. ಬಸವನಗೌಡ, ವೀರಯ್ಯ, ಆರ್. ಪ್ರಭು ಇದ್ದರು. ಕೆ. ರಾಮನಗೌಡ ಸ್ವಾಗತಿಸಿದರು. ತೇನ್ಸಿಂಗ್ ನಾಯ್ಕ ನಿರೂಪಿಸಿದರು.
ಪರ್ಸೆಂಟೇಜ್ ದಂಧೆ ಮಾಡಿದ್ದೆ ಸಾಧನೆ
ಐದು ವರ್ಷ ಪರ್ಸೆಂಟೇಜ್ ದಂಧೆಯಲ್ಲಿ ಮಗ್ನರಾಗಿದ್ದು, ಚುನಾವಣೆಗೆ ದಿನಾಂಕ ಘೋಷಣೆಯಾಗುವ ಕೊನೆ ಕ್ಷಣದಲ್ಲಿ ಮಾಲ್ವಿ ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆ ಕುರಿತಂತೆ ಹಸಿ, ಹಸಿ ಸುಳ್ಳು ಮಾತನಾಡಿದ್ದೆ ಮಾಜಿ ಶಾಸಕ ನೇಮಿರಾಜ್ ನಾಯ್ಕ ಅವರ ಬಹುದೊಡ್ಡ ಸಾಧನೆ ಎಂದು ಶಾಸಕ ಎಸ್. ಭೀಮಾನಾಯ್ಕ ಆರೋಪಿಸಿದರು. ಮಾಲ್ವಿ ಡ್ಯಾಂಗೆ ನೀರು ತುಂಬಿಸುವುದಾಗಿ ಹೇಳಿ ಜನರಿಂದ ಓಟು ಪಡೆದು ಶಾಸಕರಾಗಿದ್ದ ನೇಮಿರಾಜ್, 5 ವರ್ಷಗಳ ಕಾಲ ಮಾಲ್ವಿ ಡ್ಯಾಂ ಬಗ್ಗೆ ಎಲ್ಲೂ ಕೂಡ ಚಕಾರವೆತ್ತಲಿಲ್ಲ. ಆದರೆ ಶಾಸಕನಾಗಿ ಭಾಗವಹಿಸಿದ್ದ ಪ್ರಥಮ ಅಧಿವೇಶನದಲ್ಲಿಯೆ ನಾನು ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೆ ಈ ಸಂಬಂಧವಾಗಿ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಕೇಳಿದೆ. ಈ ಬಗ್ಗೆ ಬೇಕಿದ್ದರೆ ಅಧಿವೇಶನದ ದಾಖಲೆಗಳನ್ನು ಪರಿಶೀಲಿಸಲಿ ಎಂದು ಸವಾಲು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

