ಕೂಲ್ ಕಲ್ಲಂಗಡಿಗೆ ಹೆಚ್ಚಿದ ಬೇಡಿಕೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 17
ಸುಡು ಬಿಸಿಲಿನಲ್ಲಿ ತಂಪಿನ ಅನುಭವ ಉಂಟು ಮಾಡುವ ಕಲ್ಲಂಗಡಿ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ ರಾಜ್ಯದಲ್ಲಿಯೆ ಬಿಸಿಲಿನ ನಾಡು ಎಂದು ಖ್ಯಾತಿ ಪಡೆದಿರುವ ಬಳ್ಳಾರಿ ಜನತೆಗೆ ಕಲ್ಲಂಗಡಿ ಹಣ್ಣು ಎಂದರೆ ಎಲ್ಲಿಲ್ಲದ ಪ್ರೀತಿ.
ಹೌದು, ಬೇಸಿಗೆ ಸಮೀಪಿಸುತ್ತಿದ್ದಂತೆ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದೆ. ಹಾಗೆಯೆ ಈ ಬಾರಿ ಅವಧಿಗೂ ಮುನ್ನವೆ ಬಿಸಿಲಿನ ತಾಪ ಅಧಿಕವಾಗಿದ್ದು, ನಗರದ ಜನತೆಯ ದಣಿವು, ಬಳಲಿಕೆ, ಬಾಯಾರಿಕೆ ನೀಗಿಸಿ, ಕೂಲ್ ಕೂಲ್ ಮಾಡುವ ನಾಮಧಾರಿ ಹೆಸರಿನ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ ಕುದುರುತ್ತಿದೆ.
ನಗರದ ದುರ್ಗಮ್ಮ ದೇವಸ್ಥಾನ ಸಮೀಪ, ಅಂಡರ್ ಬ್ರಿಡ್ಜ್, ಎಂ.ಜಿ. ರಸ್ತೆ, ಸುಧಾಕ್ರಾಸ್, ಕೌಲ್ಬಜಾರ್, ಬೆಂಗಳೂರು ರಸ್ತೆ ಸೇರಿದಂತೆ ನಗರದ ಹೊರ ವಲಯ, ಬೀದಿ ಬದಿಗಳಲ್ಲಿ, ವ್ಯಾಪಾರಕ್ಕಾಗಿ ಕೆಲವರು ಮರದ ನೆರಳಿನ ಆಶ್ರಯ ಪಡೆದರೆ, ತಳ್ಳು ಬಂಡಿಗಳಲ್ಲಿ, ಬಯಲು ಪ್ರದೇಶಗಳಲ್ಲಿ ಷಾಮಿಯಾನಗಳನ್ನು ಹಾಕಿ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡುವಲ್ಲಿ ನಿರತರಾಗಿದ್ದಾರೆ.
ವಿವಿಧೆಡೆಯಿಂದ ಹಣ್ಣು: ಈ ಬಾರಿ ಬಳ್ಳಾರಿ ಜಿಲ್ಲೆಯ ನಾಗೇನಹಳ್ಳಿ, ಮೋಕಾ, ರಾಂಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳು, ತಾಲೂಕುಗಳಿಂದ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದರೆ ಬಹುತೇಕ ವ್ಯಾಪಾರಿಗಳು ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ಚೆನ್ನೈ ಹಾಗೂ ವಿವಿಧೆಡೆಗಳಿಂದ ಹಣ್ಣನ್ನು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಈ ಹಣ್ಣುಗಳು ಆಕಾರದಲ್ಲಿ ದೊಡ್ಡ ಗಾತ್ರ, ಉತ್ತಮ ರುಚಿ, ಸಿಹಿಯೂ ಹೆಚ್ಚಾಗಿರುವುದರಿಂದ ಜನತೆಯ ಬೇಡಿಕೆಗೆ ಅನುಗುಣವಾಗಿ ಟನ್ ಲೆಕ್ಕದಲ್ಲಿ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದಾರೆ. ತಮಿಳುನಾಡು ರಾಜ್ಯದ ವಿವಿಧ ಪ್ರದೇಶಗಳಿಂದ ಖರೀದಿಸಿ ತರಲಾಗಿರುವ ಕಲ್ಲಂಗಡಿ ಹಣ್ಣಿನ ಬೆಲೆ ಪ್ರತಿ ಕೆಜಿಗೆ ರು. 15 ಇದ್ದರೆ. ಇಲ್ಲಿನ ಸುತ್ತಮುತ್ತಲು ಬೆಳೆದ ಹಣ್ಣಿಗೆ ಪ್ರತಿ ಕೆಜಿಗೆ ರು. 8ರಿಂದ 9 ಬೆಲೆ ಇದೆ. ಪ್ರತಿ ಪ್ಲೇಟ್ಗೆ ರು. 10 ರುಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಬೇಡಿಕೆ ಹೆಚ್ಚು: ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾದ ಜನತೆಯು ಈ ಮುಂಚೆ ದೇಹ ತಂಪಾಗಿಸಲು, ಬಳಲಿಕೆ, ದಣಿವು, ಬಾಯಾರಿಕೆ ನೀಗಿಸಲು ಎಳನೀರು, ಕಬ್ಬಿನ ಹಾಲಿನ ಜ್ಯೂಸ್ ಸೇವನೆಗೆ ಮುಂದಾಗುತ್ತಿದ್ದರು. ಬೇಸಿಗೆ ದಿನಗಳಲ್ಲಿ ಬಹುಬೇಗ ದೇಹದಲ್ಲಿ ನೀರಿನಂಶ ಕಳೆದುಕೊಳ್ಳುವುದರಿಂದ ಮನುಷ್ಯ ನಿತ್ರಾಣನಾಗುತ್ತಾನೆ. ಅಲ್ಲದೆ ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ನೀರಿನ ಅಗತ್ಯತೆ ದೇಹಕ್ಕೆ ಸ್ವಲ್ಪ ಹೆಚ್ಚೆ ಇರುವುದರಿಂದ ಕಲ್ಲಂಗಡಿ ಹಣ್ಣಿನ ಸೇವನೆಗೆ ಈ ಭಾಗದ ಜನರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅದರಲ್ಲೂ ಈ ಹಣ್ಣಿನ ಜತೆಗೆ ಸ್ವಲ್ಪ ಉಪ್ಪು, ಮೆಣಸಿನ ಪುಡಿ, ಜೇನುತುಪ್ಪ ಬೆರೆಸಿ ಕೊಡುವ ಹಣ್ಣು ನಾಲಿಗೆ ರುಚಿಯನ್ನು ಹೆಚ್ಚಿಸುತ್ತಿದೆ.
ಉತ್ತಮ ಆರೋಗ್ಯಕ್ಕೆ ಕಲ್ಲಂಗಡಿ: ಕಲ್ಲಂಗಡಿ ಹಣ್ಣಿನ ರಸದ ಸೇವನೆ ದಣಿದ ದೇಹಕ್ಕೆ ನವೋಲ್ಲಾಸ ನೀಡುತ್ತದೆ. ಬಳಲಿಕೆ ಮತ್ತು ದಾಹವನ್ನು ತೊಲಗಿಸುತ್ತದೆ. ಅದರಲ್ಲೂ ಸಾಮಾನ್ಯವಾಗಿ ಜನರನ್ನು ಕಾಡುವ ಕಾಮಾಲೆ ರೋಗದ ಉಪಶಮನಕ್ಕೆ ಪರಿಣಾಮಕಾರಿ ಔಷಧಿಯಾಗಿದೆ. ಜನರನ್ನು ಸಾಮಾನ್ಯವಾಗಿ ಬಾಧಿಸುವ ಕಣ್ಣು ಉರಿ, ತುರಿಕೆಗಳ ವಾಸಿಗೆ ಇದನ್ನು ಬಳಸಬಹುದು ಎನ್ನುತ್ತಾರೆ ತಜ್ಞರು.
ಹಲವಾರು ರೋಗ ನಿವಾರಕ ಗುಣ ಹೊಂದಿರುವ ಹಣ್ಣುಗಳಲ್ಲಿ ಕಲ್ಲಂಗಡಿ ಪ್ರಮುಖವಾದುದು. ಇದು ಹೆಚ್ಚಿನ ಭಾಗ ನೀರಿನಿಂದ ಕೂಡಿರುವುದೆ ಇದರ ಬಹುಮುಖ್ಯ ವಿಶೇಷತೆ. ಜತೆಗೆ ಇದರ ಬೀಜ, ಸಿಪ್ಪೆ, ಎಲೆಗಳು ಮನೆ ಔಷಧಿ ತಯಾರಿಕೆಗೆ ಬಹಳ ಸೂಕ್ತವೂ ಆಗಿವೆ. ಹಲವಾರು ಪೌಷ್ಟಿಕಾಂಶಗಳಿಂದ ಕೂಡಿರುವ ಈ ಹಣ್ಣು ಆರೋಗ್ಯಕ್ಕೆ ನೆರವಾಗಬಹುದಾದ ಜೀವಸತ್ವಗಳಿಂದ ಕೂಡಿದ್ದು, ಮಲಬದ್ಧತೆಗೆ ಇದರ ಬೀಜಗಳು ಉಪಯುಕ್ತ. ಜೀರ್ಣಶಕ್ತಿ ಹೆಚ್ಚಿಸುವಲ್ಲಿಯೂ ಕಲ್ಲಂಗಡಿ ಬಹು ಉಪಯೋಗಕಾರಿಯಾಗಿದೆ. ಸಿಪ್ಪೆಯನ್ನು ಅಂಗಾಲಿಗೆ ಉಜ್ಜಿದಲ್ಲಿ ಅಂಗಾಲಿನ ಉರಿಯು ಕಡಿಮೆಯಾಗಿ ದೇಹ ತಂಪಾಗುತ್ತದೆ. ಜತೆಗೆ ಸೌಂದರ್ಯವರ್ಧಕವಾಗಿಯೂ ಕಲ್ಲಂಗಡಿ ಹಣ್ಣು ಬಹುಮುಖಿಯಾಗಿ ಪ್ರಯೋಜನಕಾರಿಯಾಗಿದೆ.
ವೈ.ಎಂ. ಸಿದ್ಧಲಿಂಗಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

