ಅಧಿಕಾರಿಗಳ ಬೆನ್ನಿಗೆ ಸಿವಿಲ್ ಸರ್ವಿಸ್ ಬೋರ್ಡ್
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 22
ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆ ಎಂಬ ಆರೋಪದ ಮಾತುಗಳು ಸಾಕಷ್ಟು ಇದೆ. ಹಲವು ಸಂದರ್ಭದಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಅಧಿಕಾರಿಗಳು ಕೂಡ ಜನಪ್ರತಿನಿಧಿಗಳು ಮಾತು ಕೇಳದಿದ್ದರೆ, ವರ್ಗಾವಣೆ ಸೇರಿದಂತೆ ಇತರ ಅಸ್ತ್ರಗಳ ಮೂಲಕ ಅವರನ್ನು ಮಣಿಸುವ ತಂತ್ರಗಳು ನಡೆಯುವ ಮೂಲಕ ರಾಜಕಾರಣಿಗಳು ತಮ್ಮ ಪ್ರಭಾವ ಕರಾಮತ್ತು ತೋರಿಸುತ್ತಿದ್ದರು. ರಾಜಕಾರಣಿಗಳ ಇಂತಹ ಕರಾಮತ್ತಿಗೆ ಇದೀಗ ಸಿವಿಲ್ ಸರ್ವಿಸ್ ಬೋರ್ಡ್ ಬ್ರೇಕ್ ಹಾಕಿ, ನಿಷ್ಠಾವಂತ, ಪಾರದರ್ಶಕ ಆಡಳಿತಗಾರರ ಬೆನ್ನಿಗೆ ನಿಲ್ಲಲು ಹೊರಟಿದೆ.
ಐಎಎಸ್, ಐಪಿಎಸ್ ಸೇರಿದಂತೆ ಅಧಿಕಾರಿಗಳ ಅವಧಿ ಪೂರ್ವ ವರ್ಗಾವಣೆ ಆಗುವುದು ಸೇರಿದಂತೆ ಇತರ ವಿಷಯಗಳ ಕುರಿತಾಗಿ ಕೆಲವೊಂದು ಅಧಿಕಾರಿಗಳು ಸುಪ್ರೀಂಕೋರ್ಟ್ನಲ್ಲಿ 2011ರಲ್ಲಿ ರಿಟ್ ಪಿಟಿಷನ್ ಹಾಕಿದ್ದು, ಸುಪ್ರೀಂಕೋರ್ಟ್ ಈ ನಿಟ್ಟಿನಲ್ಲಿ ಅ. 31, 2013ರಂದು ತೀರ್ಪು ನೀಡಿ, ತೀರ್ಪು ನೀಡಿದ 3 ತಿಂಗಳ ಒಳಗಾಗಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿವಿಲ್ ಸರ್ವಿಸ್ ಬೋರ್ಡ್ ರಚಿಸುವಂತೆ ಸೂಚನೆ ನೀಡಿತ್ತು. ರಾಜ್ಯದಲ್ಲಿ ಸಿವಿಲ್ ಸರ್ವಿಸ್ ಬೋರ್ಡ್ ರಚನೆಯಾಗಿದ್ದು, ಇದೀಗ ಅಧಿಕಾರಿಗಳ ಅನಗತ್ಯ ವರ್ಗಾವಣೆಗೆ ಕಡಿವಾಣ ಹಾಕಿದಂತಾಗುತ್ತಿದೆ.
ರಾಜಕಾರಣಿಗಳ ತಾಳಕ್ಕೆ ಕುಣಿಯುವ ಅಗತ್ಯವಿಲ್ಲ: ಆಯಾ ಸರ್ಕಾರಗಳು ಬಂದಾಗ ಅಧಿಕಾರಿಗಳು ಆಯಾ ಸರ್ಕಾರದ ಪರ ಕೆಲಸ ಮಾಡುತ್ತಾರೆ ಎಂಬ ಆರೋಪಗಳು ಸಾಕಷ್ಟು ಇವೆ. ಆದರೆ, ಇದಕ್ಕೆ ಕೆಲವೊಂದು ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್, ಮುಖ್ಯ ಅಭಿಯಂತರು ಹಾಗೂ ಸರ್ಕಾರದ ಇಲಾಖೆಗಳ ಕಾರ್ಯದರ್ಶಿಗಳ ಕಚೇರಿ ಅಧಿಕಾರಿಗಳು ಹೊರತಾಗಿದ್ದು, ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲ. ಇಂತಹ ಸಂದರ್ಭ ಅಧಿಕಾರಿಗಳನ್ನು ಮೇಲಿಂದ ಮೇಲೆ ವರ್ಗಾವಣೆ ಮಾಡುವ ಮೂಲಕ ಅವರನ್ನು ಮಣಿಸುವ ಪ್ರಯತ್ನಗಳು ಸಾಕಷ್ಟು ನಡೆಯುತ್ತದೆ. ಈ ಸಂದರ್ಭದಲ್ಲಿ ಕೆಲವೊಂದು ಅಧಿಕಾರಿಗಳು ಅನಿವಾರ್ಯವಾಗಿ ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಪ್ರಸಂಗಗಳು ಎದುರಾಗುತ್ತವೆ. ಆದರೆ, ಇನ್ಮುಂದೆ ಇಂಥ ಪ್ರಸಂಗಗಳು ಅಷ್ಟಾಗಿ ಕಂಡು ಬರುವುದಿಲ್ಲ.
ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬೋರ್ಡ್ ರಚನೆ: ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇಂಡಿಯನ್ ಅಡ್ಮಿಟ್ರೇಷನ್ ಸರ್ವಿಸ್, ಇಂಡಿಯನ್ ಪೊಲೀಸ್ ಸರ್ವಿಸ್, ಇಂಡಿಯನ್ ಫಾರೆಸ್ಟ್ ಸರ್ವಿಸ್ಗೆ ತಿದ್ದುಪಡಿ ತಂದು ಸುಪ್ರೀಂಕೋರ್ಟ್ ತೀರ್ಪಿನಂತೆ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಸೇರಿದಂತೆ ಐದು ಸಿವಿಲ್ ಸರ್ವಿಸ್ ಬೋರ್ಡ್ಗಳನ್ನು ರಚನೆ ಮಾಡಲಾಗಿದೆ. ಎಲ್ಲ ಬೋರ್ಡ್ಗೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುತ್ತಾರೆ. ಇನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸದಸ್ಯರಾದರೆ, ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಇನ್ನುಳಿದಂತೆ ಆಯಾ ಸಮಿತಿಗೆ ಆಯಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಇನ್ನು ಇಲಾಖೆಯ ಮುಖ್ಯಸ್ಥರು ಸದಸ್ಯರಾಗಿರುತ್ತಾರೆ.
ಬೋರ್ಡ್ನ ಕಾರ್ಯವೈಖರಿ: ಮೇಲಿನ ಅಧಿಕಾರಿಗಳಿಗೆ ಅವಧಿ ಪೂರ್ವದಲ್ಲಿ ವರ್ಗಾವಣೆಯಾದರೆ, ಈ ಬೋರ್ಡ್ ಅನುಮತಿ ಅಗತ್ಯವಾಗಿ ಬೇಕಾಗಿದೆ. ಅವಧಿ ಪೂರ್ವದಲ್ಲಿ ವರ್ಗಾವಣೆಯಾಗಿದ್ದರೆ ಸಿವಿಲ್ ಸರ್ವಿಸ್ ಬೋರ್ಡ್ ಪರಿಶೀಲಿಸಿ, ಅವಧಿ ಪೂರ್ವದ ವರ್ಗಾವಣೆಗೆ, ಸರ್ಕಾರವು ಲಿಖಿತ ರೂಪದಲ್ಲಿ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ಇಲ್ಲವಾದರೆ ವರ್ಗಾವಣೆ ರದ್ದುಪಡಿಸುವ ಅಧಿಕಾರ ಸಮಿತಿಗೆ ಇರುತ್ತದೆ. ಬೋರ್ಡ್ನ ವ್ಯಾಪ್ತಿಗೆ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಮತ್ತು ಮುಖ್ಯ ಎಂಜಿನಿಯರ್, ಸರ್ಕಾರಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಅಧಿಕಾರಿಗಳ ನೇಮಕಾತಿ, ವರ್ಗಾವಣೆ, ಸ್ಥಳ ನಿಯುಕ್ತಿ, ಅವಧಿ ಪೂರ್ವ ವರ್ಗಾವಣೆ, ಶಿಸ್ತುಕ್ರಮ, ಅಮಾನತು, ಇಲಾಖಾವಾರು ತನಿಖೆ ಸೇರಿದಂತೆ ಇತರ ವಿಷಯಗಳಲ್ಲಿ ಈ ಬೋರ್ಡ್ ಕೆಲಸ ಮಾಡಬಹುದಾಗಿದೆ.
ರಾಜಕಾರಣಿಗಳೇತರ ಬೋರ್ಡ್: ದಿಟ್ಟ ಕೆಲಸ ಮಾಡುವ, ಯಾರ ಮುಲಾಜಿಗೆ ಒಳಗಾಗದಂತೆ ಪಾರದರ್ಶಕವಾಗಿ ಮೇಲ್ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸಲು ಸಿವಿಲ್ ಸರ್ವಿಸ್ ಬೋರ್ಡ್ ಅತ್ಯಂತ ಸಹಕಾರಿಯಾಗಿದೆ. ಏಕೆಂದರೆ ಇದು ರಾಜಕಾರಣಿಗಳು, ಜನಪ್ರತಿನಿಧಿಗಳೇತರ ಬೋರ್ಡ್ ಆಗಿರುವುದರಿಂದ ಯಾವುದೇ ನಿರ್ಣಯಗಳನ್ನು ನಿಯಮಗಳ ಆಧಾರದ ಮೇಲೆ ತೆಗೆದುಕೊಳ್ಳಬೇಕಾಗಿರುವುದರಿಂದ ಅಧಿಕಾರಿಗಳು ತಮ್ಮ ವರ್ಗಾವಣೆಯ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಗಳ ಮೇಲಿನ ಪ್ರಕರಣಗಳು ಭಾರವು ಕಡಿಮೆಯಾದರೂ ಆಶ್ಚರ್ಯವಿಲ್ಲ. ಸಿವಿಲ್ ಸರ್ವಿಸ್ ಬೋರ್ಡ್ ರಚನೆಯಾಗಿರುವ ಬಗ್ಗೆ ಐಪಿಎಸ್, ಐಎಎಸ್, ಕೆಎಎಸ್ ಅಧಿಕಾರಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

