ಬಳ್ಳಾರಿ

ಪ್ರತಿಭೆ ಪ್ರೋತ್ಸಾಹಿಸುವುದು ಕರ್ತವ್ಯ

Published On :

ಬಳ್ಳಾರಿ: ಎಲ್ಲರಲ್ಲೂ ತಮ್ಮದೆ ಆದ ಪ್ರತಿಭೆ ಇರುತ್ತದೆ. ಆದರೆ ಅದನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ವಾರ್ತಾ ಮತ್ತು ಮೂಲ ಸೌಕರ್ಯಗಳ ಸಚಿವ ರೋಷನ್ ಬೇಗ್ ತಿಳಿಸಿದರು.
ಮುಸ್ಲಿಂ ಎಂಪ್ಲಾಯಿಸ್ ಫೆಡರೇಷನ್ ವತಿಯಿಂದ ನಗರದ ಶಾದಿ ಮಹಲ್ನಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಟ್ಟರ್ ಪಂಥಗಳು ವಿದ್ಯಾವಂತ ಯುವಜನರಲ್ಲೂ ಮತೀಯ ವಿಷಬೀಜ ಬಿತ್ತುತ್ತಿದ್ದು, ಯುವಜನರನ್ನು ಬ್ರೈನ್ ವಾಶ್ ಮಾಡಿ, ಸಣ್ಣಪುಟ್ಟ ವಿಷಯಗಳಿಗೆ ಕೋಮು ಗಲಭೆ ಸೃಷ್ಟಿಸುವಂತೆ ಪ್ರಚೋದಿಸುತ್ತಿದ್ದಾರೆ. ಇದರಿಂದ ಎಲ್ಲೋ ಯಾವುದೋ ಕಾರಣಕ್ಕೆ ಜಗಳವಾದರೆ, ಇಲ್ಲಿ ಗಲಭೆಗಳು ನಡೆಯುತ್ತಿವೆ. ಕಂಪ್ಯೂಟರ್ಗಳನ್ನು ಅಧಿಕವಾಗಿ ಬಳಕೆ ಮಾಡುವ ಯುವಜನರು ಅಂತರ್ಜಾಲಗಳಿಂದ ಪ್ರಭಾವಿತಗೊಂಡು, ಜಗಳ, ಕೋಮು ಗಲಭೆ, ಘರ್ಷಣೆಗಳಿಗೆ ಆಸ್ಪದ ನೀಡುತ್ತಿದ್ದಾರೆ. ಹೀಗಾಗಿ ಯುವಜನರನ್ನು ಜಾಗೃತಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಕಟ್ಟರ್ ಪಂಥ, ಉಗ್ರವಾದಿಗಳ ವಿರುದ್ಧ ಪ್ರತಿಯೊಬ್ಬರೂ ಹೋರಾಟ ಮಾಡಬೇಕಿದೆ ಎಂದು ಸಲಹೆ ನೀಡಿದರು.
ತಮಿಳುನಾಡು ಮಾದರಿಯಲ್ಲೇ ರಾಜ್ಯದಲ್ಲೂ ಜನರಿಕ್ ಔಷಧ ಅಂಗಡಿಗಳನ್ನು ತರುವ ಕುರಿತು ಚಿಂತನೆ ನಡೆಸಲಾಗಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಮಾರಕ ಕಾಯಿಲೆಗಳಿಗೆ ಅತಿ ಕಡಿಮೆ ಬೆಲೆಗೆ ಔಷಧಗಳು ಲಭ್ಯವಾಗಲಿವೆ. ಇವುಗಳನ್ನು ಜಾರಿಗೆ ತರುವ ವೇಳೆ ಪಟ್ಟಭದ್ರ ಹಿತಾಸಕ್ತಿಗಳಿಂದ ಸಾಕಷ್ಟು ವಿರೋಧಗಳು ವ್ಯಕ್ತವಾಗಲಿದ್ದು, ಹಲವು ಸಂಘಟನೆಗಳು ಹೋರಾಟ ಮಾಡಿ, ಜನರಿಕ್ ಡ್ರಗ್ಸ್ ಅಂಗಡಿಗಳನ್ನು ತೆರೆಯಲು ಸಹಕರಿಸಬೇಕಿದೆ. ಇದರಿಂದ ತಳ ಸಮುದಾಯಗಳಿಗೆ ತುಂಬ ಅನುಕೂಲವಾಗಲಿದ್ದು, ಇದಕ್ಕೆ ಎಲ್ಲ ಜನಾಂಗಗಳ ಸಂಘಟನೆಗಳು ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.
ನಗರಸಭೆ ಮಾಜಿ ಸದಸ್ಯ ಹುಮಾಯೂನ್ಖಾನ್ ಮತ್ತು ಗೌಸ್ಮಹ್ಮದ್ ಬಾಷಾ ಮಾತನಾಡಿ, ಶೇ. 4ರಷ್ಟಿದ್ದ 2ಬಿ ಮೀಸಲಾತಿಯನ್ನು ಶೇ. 6ಕ್ಕೆ ಏರಿಕೆ ಮಾಡಬೇಕು. ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ನಂತರ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಎಎಸ್ಐ ನೂರ್ಜಹಾನ್ ಮತ್ತು ಕೌಲ್ಬಜಾರ್ ಠಾಣೆಯ ಸಿಪಿಐ ಎಂ.ಬಿ. ಗೋಳಸಂಗಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್, ಹುಸೇನ್ಬಾಷಾ, ಶೇಕ್ಷಾವಲಿ, ಮೆಹಬೂಬ್ ಬಾಷಾ, ಸಮುದಾಯದ ನೂರಾರು ನೌಕರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.