ಬಳ್ಳಾರಿ

ಹಂಪಿ: ಗುಡುಗು-ಸಿಡಿಲಿಗೆ ಪ್ರಭಾವಳಿ ಕುಸಿತ

Published On :

ಹೊಸಪೇಟೆ: ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರವೇಶದ್ವಾರದ ಪ್ರಾಂಗಣದ ಮುಂದಿರುವ ಭುವನೇಶ್ವರಿ ದೇವಸ್ಥಾನಕ್ಕೆ ಹೋಗುವ ಬಲ ದ್ವಾರದ ಮೇಲಿನ ಗೋಪುರದ ಪ್ರಭಾವಳಿಗಳು ಗುರುವಾರ ರಾತ್ರಿ ಗುಡುಗು, ಸಿಡಿಲ ಅಬ್ಬರಕ್ಕೆ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಕನಕಗೋಪುರದ ಸುತ್ತಲು ಇರುವ ಅಂಲಕಾರಿಕ ಗೋಡೆಯಲ್ಲಿ ನಿರ್ಮಿಸಿರುವ ಹಕ್ಕ ಮತ್ತು ಬುಕ್ಕರಾಯರ ಗಾರೆಯ 4 ಅಡಿ ಎತ್ತರದ ಪ್ರಭಾವಳಿಯ ಶಿಲ್ಪಗಳಲ್ಲಿ ಬುಕ್ಕರಾಯನ ಶಿಲ್ಪದ ಗೊಂಬೆಯ ಸೊಂಟದ ಮೇಲಿನ ಅರ್ಧ ಭಾಗವಾಗಿರುವ ಮುಖ ಹಾಗೂ ಮುಖದ ಮೇಲಿನ ರುಮಾಲು, ಇತರ ಅಂಗಾಗಳ ಶಿಲ್ಪದ ಗೊಂಬೆ ಬಿದ್ದು ಒಡೆದಿದೆ. ಹಕ್ಕರಾಯನ ಶಿಲ್ಪ ಈ ಮೊದಲೇ ಬಿದ್ದಿದ್ದು, ಬುಕ್ಕರಾಯನ ಶಿಲ್ಪದ ಕಾಲುಗಳು ಕೆಲ ದಿನಗಳ ಹಿಂದೆ ಬಿದ್ದಿದ್ದವು. ದೇವಸ್ಥಾನದ ಗೋಪುರದ ಗೋಡೆಯ ಸುತ್ತ ದೇವತಾ ಶಿಲ್ಪಗಳು ಹಾಗೂ ಮಾನವತಾ ಶಿಲ್ಪಗಳನ್ನು ಗಂಚುಗಾರೆಯ ಉಬ್ಬು ಗೊಂಬೆಗಳನ್ನು ನಿರ್ಮಿಸಿದ್ದು, ಹಳೆಯದಾದ ಈ ಶಿಲ್ಪಕಲೆ ಗೊಂಬೆಗಳು ವೈಶಿಷ್ಯಪೂರ್ಣ ಕಲಾಕೃತಿ ಹೊಂದಿದೆ. ವಿರೂಪಾಕ್ಷೇಶ್ವರ ಹಾಗೂ ವಿಜಯನಗರ ವೈಭವ ಸಾರಿ ಹೇಳುವ ಗೊಂಬೆಗಳನ್ನು ಹೊಂದಿರುವ ಈ ಪ್ರವೇಶದ್ವಾರ ಈ ಹಿಂದೆಯೂ ಎರಡು ಬಾರಿ ಇಂತಹ ಅವಘಡಗಳಿಗೆ ಒಳಗಾಗಿತ್ತು. ಆದರೂ ಭಾರತೀಯ ಪ್ರಾಜ್ಯವಸ್ತು ಪುರಾತತ್ವ ಇಲಾಖೆ ಗೋಪುರ ಮತ್ತು ಪ್ರಭಾವಳಿಗಳ ರಕ್ಷಣೆಗೆ ಮುಂದಾಗದಿರುವುದು, ಶಿಲ್ಪಗಳು ಒಂದೊಂದಾಗಿ ನೆಲಕ್ಕೆ ಉರುಳುತ್ತಿರುವುದು ಖೇದಕರ ಸಂಗತಿ ಎನ್ನುತ್ತಾರೆ ಸ್ಥಳೀಯರು.
ವಿದ್ಯುತ್ ತಗುಲಿ ಲೈನ್‌ಮನ್ ಸಾವು
ಬಳ್ಳಾರಿ: ಜೆಸ್ಕಾಂ ಲೈನ್‌ಮನ್ ಕರೆಂಟ್ ರಿಪೇರಿ ಮಾಡುವ ಸಂದರ್ಭದಲ್ಲಿ ಕರೆಂಟ್ ಹೊಡೆದು ಸಾವನ್ನಪ್ಪಿರುವ ಘಟನೆ ಗುಗ್ಗರಹಟ್ಟಿಯಲ್ಲಿ ನಡೆದಿದೆ. ಮೃತನನ್ನು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೇರಿ ತಾಲೂಕಿನ ಮೈಲಾನಹಳ್ಳಿಯ ಬಿ.ಕೆ. ರವಿಕುಮಾರ್ (38) ಎಂದು ಗುರುತಿಸಲಾಗಿದೆ. ಈತನು ಗುರುವಾರ ರಾತ್ರಿ ಕೈಗಾರಿಕಾ ಪ್ರದೇಶದಲ್ಲಿ ಕರೆಂಟ್ ರಿಪೇರಿ ಮಾಡುವಾಗ ಕರೆಂಟ್ ಹೊಡೆದಿದ್ದರಿಂದ ವಿಮ್ಸ್‌ಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಸಾವು
ಕೊಟ್ಟೂರು: ದ್ವಿಚಕ್ರವಾಹನ ಸವಾರರು ವೇಗದಿಂದ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೆ ಪ್ರಾಣತೆತ್ತ ದುರ್ಘಟನೆ ಸಮೀಪದ ಹುಣಸೀಕಟ್ಟೆ ಬಳಿ ಗುರುವಾರ ತಡರಾತ್ರಿ ನಡೆದಿದೆ. ಮೃತರನ್ನು ನಾಗೇಂದ್ರ (26), ನಾಗರಾಜ (24) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಬೈಕ್‌ನಲ್ಲಿ ಹುಣಸೀಕಟ್ಟೆ ಗ್ರಾಮಕ್ಕೆ ತೆರಳುವಾಗ ಈ ಅವಘಡ ಸಂಭವಿಸಿದೆ. ಈ ಘಟನೆ ರಾತ್ರಿ ಎಷ್ಟು ಗಂಟೆಗೆ ನಡೆದಿದೆ ಎಂದು ಯಾರಿಗೂ ಗೊತ್ತಾಗಿಲ್ಲ, ಶುಕ್ರವಾರ ಬೆಳಗ್ಗೆವರೆಗೂ ಈ ಯುವಕರ ಶವಗಳು ಅನಾಥವಾಗಿ ಬಿದ್ದಿರುವುದನ್ನು ಗಮನಿಸಿದ ಗ್ರಾಮದವರು ಕೊಟ್ಟೂರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಲಿಂಡರ್ ಸ್ಫೋಟ: ಗೂಡಂಗಡಿಗೆ ಬೆಂಕಿ
ಕುರುಗೋಡು: ಗೂಡಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಗೃಹಬಳಕೆ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ಪಟ್ಟಣದ ನಾಗಪ್ಪನ ಕಟ್ಟೆ ಹತ್ತಿರ ಗುರುವಾರ ಸಂಭವಿಸಿದೆ. ಗೂಡಂಗಡಿಯಲ್ಲಿದ್ದ ಚಿಕ್ಕಪುಟ್ಟ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಸಕಾಲಕ್ಕೆ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನೆಯಲ್ಲಿ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ. ಅಂದಾಜು ರು. 25 ಸಾವಿರ ನಷ್ಟ ಸಂಭವಿಸಿದೆ. ನಾಯಕರ ರುದ್ರಪ್ಪ ಎನ್ನುವರಿಗೆ ಸೇರಿದ ಗೂಡಂಗಡಿ ಇದಾಗಿದೆ. ಗೃಹರಕ್ಷಕ ಸಿಬ್ಬಂದಿಯೋರ್ವ ಕಾರ್ಯಾಚರಣೆ ವೇಳೆ ಜಾರಿಬಿದ್ದು ಗಾಯಗಳಾಗಿವೆ.
ಪುರಸಭೆ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿ ನಿಧನ
ಕಂಪ್ಲಿ: ಕಂಪ್ಲಿ ಪುರಸಭೆ ಮಾಜಿ ಅಧ್ಯಕ್ಷ, ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಟಿ. ಲಿಂಗಾರೆಡ್ಡಿ (35) ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರಿಗೆ ತಂದೆ, ತಾಯಿ, ಓರ್ವ ಅಣ್ಣ, ಓರ್ವ ಅಕ್ಕ, ಓರ್ವ ಪುತ್ರ, ಪುತ್ರಿ, ಬಂಧುಗಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಕಂಪ್ಲಿ ಸಮೀಪದ ನಂ. 2 ಮುದ್ದಾಪುರ ಗ್ರಾಮದಲ್ಲಿ ಶನಿವಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.