ಸಹಾಯಧನ ನೇರ ರೈತರ ಖಾತೆಗೆ ಸಂದಾಯ
ಬಳ್ಳಾರಿ: ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ವಿತರಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದಾಗಿ ಇದೀಗ ಕೃಷಿ ಇಲಾಖೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ನೀಡುವ ವ್ಯವಸ್ಥೆ ಜಾರಿಗೊಳಿಸಿದೆ. ರೈತರ ಸಹಾಯಧನಕ್ಕೆ ಕೃಷಿ ಇಲಾಖೆ ಕಚೇರಿಗೆ ಅಲೆದಾಡುವುದು ಬಿಟ್ಟು, ತಾವು ಖರೀದಿಸಿದ ಯಂತ್ರದ ಕುರಿತಾಗಿ ರಸೀದಿ, ಅಗತ್ಯ ದಾಖಲೆಗಳೊಂದಿಗೆ ಕೃಷಿ ಇಲಾಖೆಗೆ ಸಲ್ಲಿಸಿದಲ್ಲಿ, ಕೃಷಿ ಇಲಾಖೆ ನೇರವಾಗಿ ರೈತನ ಖಾತೆಗೆ ಸಹಾಯಧನ ಪಾವತಿಸುವ ವ್ಯವಸ್ಥೆ ಈ ವರ್ಷದಿಂದ ಜಾರಿಗೊಂಡಿದೆ.
ರಾಜ್ಯ ಕೃಷಿ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ 2013, ಸೆ. 5ರಂದು ನಡೆದ ಸಭೆಯಲ್ಲಿ ನಿರ್ಧರಿಸಿದಂತೆ, ಅ. 8ರಂದು ಕೃಷಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಧಾರದಂತೆ ಕೃಷಿ ಯಾಂತ್ರೀಕರಣ ಮತ್ತು ಲಘು ನೀರಾವರಿ ಯೋಜನೆಗಳಡಿ ರೈತರ ಬ್ಯಾಂಕ್ ಖಾತೆಗೆ ಸಹಾಯಧನ ಪಾವತಿಗೆ ರಾಜ್ಯಪಾಲರ ಆಜ್ಞಾನುಸಾರ, ಅವರ ಹೆಸರಿನಲ್ಲಿ ಕೃಷಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುನಾಥ್ ಪಾಟೀಲ್ ಅವರು ಡಿ. 27ರಂದು ಆದೇಶ (ಕೃಷಿ ಇಲಾಖೆ-119-ಕೃಮಸ-2013) ಹೊರಡಿಸಿದ್ದಾರೆ.
ಪಾರದರ್ಶಕತೆ ಉದ್ದೇಶದಿಂದ ಈ ಕ್ರಮ: ಕೃಷಿ ಇಲಾಖೆಯಲ್ಲಿ ಸಹಾಯಧನ ವಿತರಣೆ ಸರಿಯಾಗಿ ರೈತರಿಗೆ ತಲುಪುತ್ತಿಲ್ಲ. ಇದರಿಂದಾಗಿ ರೈತರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇದೀಗ ಕೃಷಿ ಇಲಾಖೆ ನೇರವಾಗಿ ರೈತರ ಖಾತೆಗೆ ಸಂದಾಯ ಮಾಡುವ ವ್ಯವಸ್ಥೆ ಜಾರಿಗೊಳಿಸಿದೆ. ವಿವಿಧ ಕೃಷಿ ಸಲಕರಣೆಗಳ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ, ಕೃಷಿ ಇಲಾಖೆಗೆ ರೈತರು ಅಲೆದಾಡಬೇಕಿತ್ತು. ಇದರಿಂದ ಮುಕ್ತಿ ಪಡೆಯುವ ಉದ್ದೇಶದಿಂದ ರು. 5000 ಮೇಲ್ಪಟ್ಟ ಸಹಾಯಧನವನ್ನು ನೇರವಾಗಿ ರೈತನ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಹಿಂದೆ ಸಹಾಯಧನದ ವ್ಯವಸ್ಥೆ ಹೇಗಿತ್ತು: ಹಿಂದೆ ಕೃಷಿ ಯಾಂತ್ರೀಕರಣ ಮತ್ತು ಲಘು ನೀರಾವರಿ ಯೋಜನೆಗಳಡಿ ರೈತರಿಗೆ ಅನುಕೂಲವಾಗುವಂತೆ ಸಹಾಯಧನವನ್ನು ರೈತರು ಯಂತ್ರೋಪಕರಣ ಮೊತ್ತ ಪಾವತಿಸಿದಲ್ಲಿ ನೇರವಾಗಿ ರೈತರಿಗೆ ಸಹಾಯಧನ ಪಾವತಿಸಲಾಗುತ್ತಿತ್ತು. ರೈತರು ಸೌಲಭ್ಯಗಳನ್ನು ಪಡೆಯಲು ಬ್ಯಾಂಕ್ ಸಾಲ ಮಾಡಿದಲ್ಲಿ ಸಾಲ ನೀಡಿದ ಬ್ಯಾಂಕ್ ಖಾತೆಗೆ ಸಹಾಯಧನ ನೀಡಲಾಗುತ್ತಿತ್ತು. ಇನ್ನು ರೈತರು ವಂತಿಕೆ ಪಾವತಿಸಿದಲ್ಲಿ ಸಹಾಯಧನವನ್ನು ಸಂಬಂಧ ಪಟ್ಟ ಸಂಸ್ಥೆಗೆ ನೀಡಲಾಗಿತ್ತು. ಈ ರೀತಿಯ ಸಹಾಯಧನ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಕಷ್ಟ ಹಾಗೂ ರೈತರ ಕೈಗೆ ಪೂರ್ಣ ಪ್ರಮಾಣದ ಸಹಾಯಧನ ಸಿಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಇದೀಗ ಕೃಷಿ ಇಲಾಖೆ ರೈತನ ಬ್ಯಾಂಕ್ ಖಾತೆಗೆ ಸಹಾಯಧನ ಪಾವತಿಸುವ ಯೋಜನೆಯನ್ನು ಇಲಾಖೆ ಜಾರಿಗೊಳಿಸಿದೆ.
ಬ್ಯಾಂಕ್ ಮೂಲಕ ಸಹಾಯಧನ ಪಾವತಿ: ಕೃಷಿ ಇಲಾಖೆ ಸಹಾಯಧನ ವಿತರಣೆಯನ್ನು ಬ್ಯಾಂಕಿನ ಮೂಲಕವೇ ಪಾವತಿಸುವ ಮೂಲಕ ಇಲಾಖೆಯ ಸಹಾಯಧನ ವಿತರಣೆಯಲ್ಲಿ ಪಾರದರ್ಶಕತೆ ತರಲು ಮುಂದಾಗಿದೆ. ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ ಉಳುಮೆಯಿಂದ ಕೊಯ್ಲುವರೆಗೆ ಬೇಕಾಗುವ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳು ಮತ್ತು ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಅಭಿಯಾನ ಯೋಜನೆಯಡಿ ವಿತರಿಸುವ ತುಂತುರು ಹಾಗೂ ಹನಿ ನೀರಾವರಿ ಘಟಕಗಳಿಗೆ ರು. 5,000 ಹಾಗೂ ಅದಕ್ಕಿಂತ ಮೇಲ್ಪಟ್ಟ ಸಹಾಯಧನವನ್ನು ನೇರ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಇದಕ್ಕೆ ರೈತರು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು. ರೈತರು ತಮ್ಮ ಭಾಗದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಡಬೇಕು ಹಾಗೂ ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರಿಗೆ ಮುಚ್ಚಳಿಕೆ ಪತ್ರ ನೀಡಿ, ಸರಬರಾಜು ಸಂಸ್ಥೆಗೆ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ರೈತರಿಗೆ ಉಪಕರಣ ಸರಬರಾಜು ಮಾಡಿದ ಕೂಡಲೇ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ತಪಾಸಣೆ ಮಾಡಿ ದೃಢೀಕರಿಸಿದ ನಂತರ ಸರ್ಕಾರದ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಇಲಾಖೆ ಜಮಾ ಮಾಡುತ್ತದೆ. ನಂತರ ಸರಬರಾಜು ಸಂಸ್ಥೆಗೆ ಪಾವತಿಸುವ ವ್ಯವಸ್ಥೆ ಇದೆ. ಅಲ್ಲದೆ ರೈತರು ಪೂರ್ಣ ಪ್ರಮಾಣದ ಹಣವನ್ನು ಡೀಲರ್ ಸಂಸ್ಥೆಗೆ ಪಾವತಿಸಿ, ಅರ್ಜಿ ಜತೆ ಅಗತ್ಯ ದಾಖಲೆಗಳನ್ನು ಇಲಾಖೆಗೆ ನೀಡಿದರೂ, ರೈತರ ಖಾತೆಗೆ ಸಹಾಯಧನ ಪಾವತಿಸುವ ವ್ಯವಸ್ಥೆ ಈಗ ಜಾರಿಗೊಳಿಸಲಾಗಿದೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

