ಬಳ್ಳಾರಿ

ಕ್ರೀಡಾಂಗಣ ನಿರ್ಮಾಣ ಅಡಿಗಲ್ಲಿಗೆ ಸೀಮಿತ

Published On :

ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಜ. 3
ಅಡಿಗಲ್ಲಿಗೆ ಸೀಮಿತವಾಗಿರುವ ಹಗರಿಬೊಮ್ಮನಹಳ್ಳಿ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ದು ಸರ್ಕಾರದಲ್ಲಾದರೂ ಮುಕ್ತಿಸಿಗುವುದೇ ಎಂದು ಬಿಸಿಲೂರಿನ ಸಾವಿರಾರು ಕ್ರೀಡಾಪಟುಗಳು, ಕ್ರೀಡಾಸಕ್ತರ ಒಕ್ಕೊರಲಿನ ಪ್ರಶ್ನೆಯಾಗಿದೆ.
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣದ ಕನಸು ನನಸಾಗದೆ ಹಲವು ದಶಕಗಳಿಂದ ಕನ್ನಡಿಯೊಳಗಿನ ಗಂಟಿನಂತಾಗಿದೆ. ಯಾಕೆಂದರೆ, ಇಲ್ಲಿಂದ ಆಯ್ಕೆಯಾಗುವ ಹೋಗುವ ಜನಪ್ರತಿನಿಧಿಗಳು ಕ್ರೀಡಾಕ್ಷೇತ್ರದ ಬಗ್ಗೆ ನಿರಾಸಕ್ತಿ ಹೊಂದಿರುವ ಕಾರಣದಿಂದ ಇಂದು ಇಲ್ಲಿನ ಕ್ರೀಡಾಂಗಣ ಕೇವಲ ಶಂಕುಸ್ಥಾಪನೆಗಷ್ಟೆ ಸೀಮಿತವಾಗಿದೆ.
ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ಸಕಲ ಸೌಲಭ್ಯವುಳ್ಳಂಥ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುತ್ತೇವೆಂದು ಶಾಸಕ, ಮಂತ್ರಿಗಳು ನೀಡಿ ಹೋದ ಭರವಸೆಗಳೆಲ್ಲವೂ ಕೇವಲ ಚುನಾವಣೆಯ ಹುಸಿ ಭರವಸೆಯಾಗಿವೆ. ಹೀಗಾಗಿ ತಾಲೂಕಿನಲ್ಲಿರುವ ಅಸಂಖ್ಯಾತ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳ ಪಾಲಿಗೆ ಕ್ರೀಡಾಂಗಣ ದೂರದ ಬೆಟ್ಟದಂತಾಗಿದೆ.
ಸರ್ಕಾರದ ಆದೇಶಕ್ಕೆ ಕಾದಿರುವ ಕ್ರೀಡಾಪಟುಗಳು: ಜಿಲ್ಲೆ, ರಾಜ್ಯ, ಅಂತರ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲುವಂಥ ಉದಯೋನ್ಮುಖ ಯುವ ಕ್ರೀಡಾಪಟುಗಳು ತಾಲೂಕಿನಲ್ಲಿದ್ದಾರೆ. ಆದರೆ, ಅವರು ಅಭ್ಯಾಸ ಮಾಡಲು ಉತ್ತಮ ಕ್ರೀಡಾಂಗಣವಿಲ್ಲ. ಆಗಾಧ ಪ್ರತಿಭೆ ಇದ್ದರೂ ಪ್ರತಿಭೆ ಪ್ರದರ್ಶಿಸಲು ಸೂಕ್ತ ತರಬೇತಿ ಇವರಿಗೆ ಸಿಗುತ್ತಿಲ್ಲ. ಹೀಗಾಗಿ, ಬಿಸಿಲೂರಿನ ಕ್ರೀಡಾಪಟುಗಳು ಸುಸಜ್ಜಿತ ಕ್ರೀಡಾಂಗಣ ಬೇಕೆಂಬ ಕೂಗಿಗೆ ಸರ್ಕಾರ ಯಾವತ್ತು ಸ್ಪಂದಿಸುತ್ತದೆಯೋ ಎಂದು ಅವರೆಲ್ಲರೂ ಸರ್ಕಾರದ ಕಡೆಗೆ ಮುಖ ಮಾಡಿ ಕ್ರೀಡಾಂಗಣ ನಿರ್ಮಾಣದ ಮಂಜೂರಾತಿ ಆದೇಶವನ್ನೇ ಎದುರು ನೋಡುತ್ತಿದ್ದಾರೆ.
ಅನುದಾನ ಮಂಜೂರಾತಿ ಸಿಕ್ಕಿರಲಿಲ್ಲವೆ: ಫೆಬ್ರವರಿ, 13, 2012ರಂದು ಶಾಸಕ ನೇಮಿರಾಜ್ ಹಾಕಿದ ಅಡಿಗಲ್ಲಿಗೆ ಈಗ ಭರ್ತಿ ಎರಡು ವರ್ಷ ತುಂಬುತ್ತಿದೆ. ಸರ್ಕಾರದಿಂದ ಅನುದಾನ ಮಂಜೂರಾದ ಮೇಲಷ್ಟೆ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಬೇಕು. ಆದರೆ,  ಎರಡು ವರ್ಷದ ಹಿಂದೆಯೇ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿದೆ. ಆದರೂ ಕಾಮಗಾರಿ ಆರಂಭವಾಗಿಲ್ಲ. ಹಾಗಾದರೆ ಆ ಸಮಯದಲ್ಲಿ ಕ್ರೀಡಾಂಗಣಕ್ಕೆ ಸರ್ಕಾರದಿಂದ ಅನುದಾನದ ಮಂಜೂರಾತಿ ಸಿಕ್ಕಿರಲ್ಲಿಲ್ಲವೆ. ಮಂಜೂರಾತಿ ಇಲ್ಲದೆನೇ ಶಂಕುಸ್ಥಾಪನೆ ನೇರವೇರಿಸಲಾಯಿತೇ, ಒಂದು ವೇಳೆ ಅನುದಾನದ ಮಂಜೂರಾತಿ ಸಿಕ್ಕಿದ್ದರೆ ಯಾಕೆ ಕ್ರೀಡಾಂಗಣ ಕಾಮಗಾರಿ ಆರಂಭವಾಗಲಿಲ್ಲ ಎಂದು ಪ್ರಶ್ನಿಸುತ್ತಾರೆ ತಾಲೂಕು ಪಂಚಾಯಿತಿ ಸದಸ್ಯ ಉಪ್ಪಾರ ಬಾಲಪ್ಪ.
ನಿಗದಿಯಾಗದ ಸ್ಥಳ: ಈ ಸಂದರ್ಭ ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಬಳ್ಳಾರಿ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೆ ಅವರು ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಮಧ್ಯೆ ತಿಳಿದು ಬಂದಿರುವ ಸಂಗತಿ ಎಂದರೆ, ಕ್ರೀಡಾಂಗಣ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿರುವ ಸ್ಥಳ ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸೇರಿದ್ದು. ಈ ಸ್ಥಳವನ್ನು ಯುವಜನಸೇವೆ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದರೆ ಮಾತ್ರ ಕ್ರೀಡಾಂಗಣ ನಿರ್ಮಿಸಲು ಸಾಧ್ಯ. ಆದರೆ, ಕಾಲೇಜು ಆಡಳಿತ ಮಂಡಳಿ ಸ್ಥಳವನ್ನು ಇಲಾಖೆಗೆ ಹಸ್ತಾಂತರಿಸಿಲ್ಲ. ವಿಷಯ ಗೊತ್ತಿದ್ದರೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕಾಲೇಜಿನಲ್ಲಿ ಕ್ರೀಡಾಂಗಣ ನಿರ್ಮಿಸಲು ಶಂಕುಸ್ಥಾಪನೆಯನ್ನು ಏಕೆ ನೇರವೇರಿಸಿತು ಎಂಬ ಪ್ರಶ್ನೆಗೆ ಇಲಾಖೆಯೇ ಉತ್ತರಿಸಬೇಕಾಗಿದೆ.
-ಹುಳ್ಳಿಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.