ಪ್ರತಿಭಾವಂತರ ಸೇವೆ ಉ.ಕ.ಕ್ಕೆ ಸಿಗುತ್ತಿಲ್ಲ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ದೇಶಕ್ಕೆ ದೀಪ ಕೊಟ್ಟ ಜಿಲ್ಲೆ. ಇದು ಉತ್ತರ ಕರ್ನಾಟಕದ ಕಿರೀಟವಿದ್ದಂತೆ. ಆದರೆ ಇಲ್ಲಿನ ಪ್ರತಿಭಾವಂತರ ಸೇವೆ ಜಿಲ್ಲೆಗೆ ಸಿಗುತ್ತಿಲ್ಲ. ಜಿಲ್ಲೆಯ ಬುದ್ಧಿಜೀವಿಗಳು ಜಿಲ್ಲೆಯಲ್ಲಿ ಇರದಿದ್ದರೆ ಜಿಲ್ಲೆ ಬೆಳೆಯುವುದು ಹೇಗೆ. ಈ ನಿಟ್ಟಿನಲ್ಲಿ ಬುದ್ಧಿಜೀವಿಗಳು ಚಿಂತಿಸಬೇಕಿದೆ. ಮಹಾನಗರಕ್ಕೆ ವಲಸೆ ಹೋಗುವುದನ್ನು ಬಿಡಬೇಕಿದೆ. ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಅವರು ಶನಿವಾರ ಸಂಜೆ ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆಯೋಜಿಸಿದ ವಿಶ್ವದರ್ಶನ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ತಾನೊಬ್ಬ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್ನುವುದಕ್ಕಿಂತ ಕೃಷಿಕ ಎನ್ನುವ ಹೆಮ್ಮೆ ನನ್ನದು ಎಂದ ಅವರು, ಕೆಎಲ್ಇ ಶಿಕ್ಷಣ ಸಂಸ್ಥೆ ಬೆಳಗಾವಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಆರಂಭಿಸಿದ್ದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕೃಷಿಪರ ಎಲ್ಲ ಚಟುವಟಿಕೆಗೆ ಸಹಕಾರ ನೀಡಲು ಸದಾ ಸಿದ್ಧ ಎಂದರು. ಯಲ್ಲಾಪುರದಂಥ ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟಸಾಧ್ಯ ಎಂದ ಅವರು ಈ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಕ್ಷ ಉಮೇಶ ಭಟ್ಟ ಅವರ ಕಾರ್ಯವನ್ನು ಕೊಂಡಾಡಿದರು. ವಿಶ್ವದರ್ಶನ ಸಂಸ್ಥೆ ಮಕ್ಕಳಿಗೆ ಶಿಕ್ಷಣದ ಜತೆ ಕಲೆ ಮತ್ತು ಭಾಷೆಯನ್ನು ಕಲಿಸುತ್ತಿದೆ. ವಿಶ್ವದರ್ಶನ ಶಿಕ್ಷಣ ಸಂಸ್ಥೆ ಜಿಲ್ಲೆಯ ಶಿಕ್ಷಣ ಕಾಮಧೇನುವಾಗಲಿ ಎಂದುಆಶಿಸಿದರು.
ಇಂದಿಗೂ ಅದೇ ಪೂಜ್ಯ ಭಾವನೆ: ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಉಮೇಶ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯನ್ನು ಯಲ್ಲಾಪುರದ ಜನ ಆರಂಭದಲ್ಲಿ ಹೇಗೆ ಪ್ರೀತಿಯಿಂದ ಬರಮಾಡಿಕೊಂಡಿದ್ದರೋ ಇಂದಿಗೂ ಅದೇ ಪೂಜ್ಯ ಭಾವನೆ ಹೊಂದಿದ್ದಾರೆ. ಪಾಲಕರ ಪ್ರೀತಿಯಿಲ್ಲದೆ ಸಂಸ್ಥೆ ಬೆಳೆಯದು. ಸಂಸ್ಥೆಗೆ ಪಾಲಕರ ಪ್ರೀತಿ ದೊಡ್ಡದು ಎಂದರು. ಡಾ. ಪ್ರಭಾಕರ ಕೋರೆ ಶಿಕ್ಷಣ ಸಂಸ್ಥೆಗಳ ದೊಡ್ಡಣ್ಣ ಎಂದವರು ಶ್ಲಾಘಿಸಿದರು. ತೋಟಗಾರಿಕಾ ಇಲಾಖೆ ಸಹಕಾರದೊಂದಿಗೆ ಸಂಸ್ಥೆ ಇಷ್ಟರಲ್ಲಿಯೇ ಪುಷ್ಪಕೃಷಿ ಕುರಿತ ತರಬೇತಿ ಆರಂಭಿಸಲಿದೆ ಎಂದರು. ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಎಸ್ಎಸ್ಎಲ್ಸಿ ವರೆಗಿನ ಶಿಕ್ಷಣವನ್ನು ಉತ್ತಮವಾಗಿ ಪಡೆದರೆ ಮಾತ್ರ ಎತ್ತರ ಮಟ್ಟಕ್ಕೆ ತಲುಪಬಹುದು. ಇಂದಿನ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತಾನೇನಾಗಬೇಕು ಎಂಬ ಯೋಚನೆಯನ್ನೇ ಮಾಡಿರುವುದಿಲ್ಲ. ನಿಜವಾಗಿ ಸಾಧಿಸಲು ಆತ್ಮಸ್ಥೆರ್ಯ, ಆರೋಗ್ಯ ಕಾರಣವಾಗುತ್ತದೆ. ಇಂದಿನ ಮಕ್ಕಳು ಹೆಚ್ಚಿನ ಸಮಯವನ್ನು ವಿಡಿಯೋಗೇವ್, ಮೆಸೆಜ್ಗಾಗಿ ಕಾಲಹರಣ ಮಾಡುತ್ತಾರೆ. ಇದು ಅವರ ಸಾಧನೆಗೆ ಮಾರಕವಾಗುತ್ತದೆ. ಕ್ರಿಕೆಟ್ ನೋಡಿದರೆ ಕ್ರಿಕೆಟ್ ಪಟು ಆಗಲಾರ. ನಿರಂತರ ಆಟವಾಡಿ ಸಾಧಿಸಿದರೆ ಮಾತ್ರ ದೊಡ್ಡ ಪಟುವಾಗಬಹುದು. ಅಂತೆಯೇ ನಮ್ಮ ಗುರಿಯಿಟ್ಟುಕೊಂಡು ಅದರತ್ತ ಸಾಗಿದಾಗ ಯಶಸ್ಸು ಸಾಧ್ಯ ಎಂದು ಹೇಳಿದರು.
ದರ್ಶನ ಕೈಬರಹ ಪತ್ರಿಕೆ ಬಿಡುಗಡೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ದರ್ಶನ ಕೈಬರಹ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಇಲ್ಲಿಯ ವಾತಾವರಣ ಅತ್ಯಂತ ಸಂತಸ ನೀಡಿದೆ. ಮನುಷ್ಯನ ಆರೋಗ್ಯಕ್ಕೆ ವ್ಯಾಯಾಮ ಕ್ರೀಡೆ ಇದ್ದಂತೆ ಶರೀರ ಶುದ್ಧಿಗೆ ಸಾಹಿತ್ಯ, ಸಂಗೀತ, ಕಲೆ ಇದ್ದಾಗ ಮಾತ್ರ ಸುಸಂಸ್ಕೃತನಾಗುತ್ತಾನೆ ಎಂದರು. ಶಿಕ್ಷಣ ಸಂಸ್ಥೆ ರೂವಾರಿ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ ಮಾತನಾಡಿ, ಬಾಲ್ಯದಿಂದಲೂ ನಾವು ಶಾಲೆಗೆ ಹೋಗುವಾಗ ತಂದೆ-ತಾಯಿ ಗುರು- ಹಿರಿಯರಿಗೆ ನಮಿಸಿ ಹೋಗುವ ಸಂಸ್ಕಾರವನ್ನು ಮಕ್ಕಳಿಗೆ ನೀಡಬೇಕು. ಪಾಲಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಿ ಎಂದರು. ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ನರಸಿಂಹಮೂರ್ತಿ ಭಟ್ ಕೋಣೆಮನೆ, ನಿರ್ದೇಶಕ ರಾಜೇಶ ಭಟ್ ಇದ್ದರು. ವಿದ್ಯಾರ್ಥಿಗಳಾದ ನಿಖಿಲ್ ಹೆಗಡೆ ಮತ್ತು ದತ್ತಾತ್ರೇಯ ಬಾಂದೇಕರ್ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ಸ್ವೀಕರಿಸಿದರು. ಪೂರ್ಣಾ ಹೆಬ್ಬಾರ ಸಂಗಡಿಗರ ಗಣೇಶ ಸ್ತುತಿ ಹಾಗೂ ಮಧುರಾ ಸಂಗಡಿಗರ ದೀಪ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪೂಜಾ ಹೆಗಡೆ ಪ್ರಾರ್ಥಿಸಿದರು. ಡಾ. ದತ್ತಾತ್ರೇಯ ಗಾಂವ್ಕರ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವರದಿ ವಾಚಿಸಿದರು. ಇಡಗುಂದಿ ವಿಶ್ವದರ್ಶನ ಪ್ರೌಢಶಾಲಾ ಮುಖ್ಯಾಧ್ಯಾಪಕ ಪ್ರಸನ್ನ ಹೆಗಡೆ ನಿರ್ವಹಿಸಿದರು. ಡಿ.ಇಡಿ. ಪ್ರಾಚಾರ್ಯ ಎಸ್.ಎಲ್. ಭಟ್ಟ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

