ನಿಧಾನಕ್ಕೆ ನುಸುಳುತ್ತಿವೆ ಖೋಟಾ ನೋಟು...
ಕೊಟ್ಟೂರು: ಪ್ರಸಿದ್ಧ ಧಾರ್ಮಿಕ ತಾಣವಾಗಿರುವ ಕೊಟ್ಟೂರು ವ್ಯಾಪಾರ, ವಾಣಿಜ್ಯ ಕ್ಷೇತ್ರದಲ್ಲಿಯೂ ಸಹ ರಾಜ್ಯ ಮಟ್ಟದಲ್ಲಿ ಹೆಸರುಗಳಿಸಿರುವುದು ಗಮನಾರ್ಹ. ಇಂತಪ್ಪ ಪಟ್ಟಣ ಮತ್ತು ಸುತ್ತಮುತ್ತಲಿನ ಜನರ ದೈನಂದಿನ ಹಣಕಾಸಿನ ವಹಿವಾಟಿನಲ್ಲಿ ಖೋಟಾ ನೋಟುಗಳು ಸದ್ದಿಲ್ಲದೆ ಸೇರಿಕೊಂಡು ತನ್ನ ಕಬಂಧ ಬಾಹುಗಳನ್ನು ಎಗ್ಗಿಲ್ಲದೆ ಚಾಚತೊಡಗಿರುವುದು ಅಘಾತಕಾರಿ ವಿಷಯ. ಇದು ಜನತೆಯನ್ನು ಚಿಂತೆಗೀಡುಮಾಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ತಯಾರಿಸಿದ ನೋಟುಗಳ ಲಕ್ಷ, ಸಾವಿರ ರುಪಾಯಿಯ ಕಟ್ಟುಗಳಲ್ಲಿ ಅನೇಕ ಖೋಟಾ ನೋಟುಗಳು ಇರುವುದು ಈ ಭಾಗದಲ್ಲಿ ಕಾಣುತ್ತಿರುವುದು ಸಾಮಾನ್ಯವಾಗಿದೆ. ಹಂತ ಹಂತವಾಗಿ ಖೋಟಾ ನೋಟಿನ ನುಸುಳುವಿಕೆ ಹರಡತೊಡಗಿದೆ. ಬ್ಯಾಂಕ್, ಅಂಗಡಿ, ವ್ಯಾಪಾರ ವಹಿವಾಟುಗಳಲ್ಲಿ ಖೋಟಾ ನೋಟುಗಳು ಜನತೆಗೆ ಅರಿವಿಲ್ಲದಂತೆ ಚಲಾವಣೆಗೊಳ್ಳುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಗ್ರಾಹಕರು ಪಡೆಯುವ ಹಣದಲ್ಲೂ ಖೋಟಾ ನೋಟುಗಳು ಕಂಡು ಬರುತ್ತಿರುವುದು ಸೋಜಿಗ. ಈ ಬಗ್ಗೆ ಸ್ವಲ್ಪ ಗಮನ ಹರಿಸಿದ ಕೆಲ ವರ್ತಕರು, ಗ್ರಾಹಕರು ಎಚ್ಚೆತ್ತು ತಮ್ಮ ವಹಿವಾಟಿನಲ್ಲಿ ಅಸಲಿ ನೋಟುಗಳನ್ನು ಮಾತ್ರ ಸ್ವೀಕರಿಸತೊಡಗಿದ್ದಾರೆ. ಕೆಲವರಂತೂ ಖೋಟಾ ನೋಟಿನ ವಿಪರೀತ ಹಾವಳಿಯಿಂದಾಗಿ ನೋಟನ್ನು ಪರೀಕ್ಷಿಸುವ ಯಂತ್ರಗಳನ್ನು ಖರೀದಿಸಿದ್ದಾರೆ.
ಬ್ಯಾಂಕ್ನಲ್ಲೇ!: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎಟಿಎಂನಿಂದ ಒಂದು ಬಾರಿ ಖೋಟಾ ನೋಟುಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಹಿಂದೆ ಗದ್ದಲ ಉಂಟಾಗಿತ್ತು. ಆದರೂ ಇದಕ್ಕೆ ಪರಿಹಾರ ಸಿಗಲಿಲ್ಲ. ಇದು ಮರೆಯಾಗುತ್ತಿದ್ದಂತೆಯೆ ಕಾರ್ಪೊರೇಷನ್ ಬ್ಯಾಂಕ್ಗೆ ಒಂದು ಸಾವಿರ ರು. ಮುಖಬೆಲೆಯ ನೋಟು ಓರ್ವನಿಂದ ಸಂದಾಯವಾಯಿತು. ನೋಟಿನ ಸಾಚಾತನ ಪರೀಕ್ಷಿಸಿದ ಬ್ಯಾಂಕ್ ಸಿಬ್ಬಂದಿ ಕೂಡಲೆ ನೋಟನ್ನು ಹರಿದು ಹಾಕಿ ಮೇಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಡಿ. 27ರಂದು ಬಿಡಿಸಿಕೊಂಡ ರು. 2.60 ಲಕ್ಷ ಪೈಕಿ ರು. 1600 ಖೋಟಾ ನೋಟುಗಳು ಕಂಡುಬಂದಿದ್ದು, ಇವುಗಳ ಬದಲಾಗಿ ಬೇರೆ ನೋಟುಗಳನ್ನು ನೀಡುವುದಾಗಿ ಬ್ಯಾಂಕ್ ಅಧಿಕಾರಿ ಭರವಸೆ ನೀಡಿದ್ದಾರೆ ಎಂದು ಗ್ರಾಹಕ ಜಿ.ಎಂ. ದೇವರಾಜ್ ಹೇಳುತ್ತಾರೆ.
ಖೋಟಾ ನೋಟಿನ ವರಸೆ: ನೂರು, ಐದು ನೂರು ಮತ್ತು ಸಾವಿರ ರು. ಮುಖಬೆಲೆಯ ಖೋಟಾ ನೋಟುಗಳಲ್ಲಿ ನೋಟು ತಯಾರಾದ ಇಸವಿ ಯಾವ ಮೂಲೆಯಲ್ಲಿ ಹುಡುಕಿದರೂ ಸಿಗುವುದಿಲ್ಲ. ಅಸಲಿ ನೋಟನ್ನು ಹೋಲುವ ಕಾರಣಕ್ಕಾಗಿ ತಯಾರಾದ ಖೋಟಾ ನೋಟುಗಳಲ್ಲಿ ನೋಟಿನ ಮೊತ್ತಗಳು ಕೇವಲ 1 ನೋಟಿನ ಆರು ಸ್ಥಳಗಳಲ್ಲಿ ಅದು ತೆಳುವಾದ ಅಕ್ಷರಗಳಲ್ಲಿ ಇದೆ. ನೋಟಿನ ಮಧ್ಯ ಭಾಗದಲ್ಲಿ ಬಿಳಿ ಬಣ್ಣದ ಪಟ್ಟಿ ಇರುತ್ತದೆ. ನೋಟಿನ ಮೇಲೆ ಅಕ್ಷರಗಳು ತೆಳುವಾಗಿರುತ್ತವೆ. ಅಲ್ಲದೆ ಗಾಂಧೀಜಿ ಚಿತ್ರ ಸಹ ಸ್ಪಷ್ಟವಾಗಿ ಮುದ್ರಿತವಾಗಿಲ್ಲ. ನೋಟಿನ ಮೇಲ್ಭಾಗದಲ್ಲಿನ ಬಿಳಿ ಭಾಗದ ಹತ್ತಿರ ಸೆಕ್ಯೂರಿಟಿ ಪ್ಯೂಚರ್ಸ್ ಅಂತ ನಮೂದಾಗಿರುವುದು ಈ ಖೋಟಾ ನೋಟುಗಳಲ್ಲಿ ಎಲ್ಲಿಯೂ ಇಲ್ಲ.
ಅಸಲಿ ನೋಟೆ ಬೇರೆ: ಭಾರತೀಯ ರಿಸರ್ವ್ ಬ್ಯಾಂಕ್ ತಯಾರಿಸಿದ ನೋಟಿನ ಮಧ್ಯ ಭಾಗದಲ್ಲಿ ಮುಖಬೆಲೆ ಹಸಿರು ಬಣ್ಣದ್ದಾಗಿದ್ದು ಅದನ್ನು ಓರೆಯಿಂದ ನೋಡಿದಾಗ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ. ನೋಟಿನ ದಾರ ಹಸಿರು ಅಥವಾ ಬಿಳಿ ಬಣ್ಣದ್ದಾಗಿರುತ್ತದೆ. ಅದರಲ್ಲಿ ನೋಟಿನ ಮುಖ ಬೆಲೆ, ಆರ್ಬಿಐ ಮತ್ತು ಆಯಾ ಮುಖ ಬೆಲೆಯ ಸಂಖ್ಯೆ ನಮೂದಾಗಿರುತ್ತದೆ. ನೋಟಿನ ಹಿಂದಿನ ಕೆಳಭಾಗದಲ್ಲಿ ನೋಟು ತಯಾರಾದ ಇಸವಿ ಸ್ಪಷ್ಟವಾಗಿ ಇರುತ್ತದೆ. ಆದರೆ ಈ ಯಾವ ಲಕ್ಷಣಗಳೂ ಪಟ್ಟಣದ ಬ್ಯಾಂಕ್ಗಳಲ್ಲಿ ಸಿಕ್ಕ ನೋಟುಗಳಲ್ಲಿ ಇಲ್ಲ.
ಕೊಟ್ಟೂರು ಮತ್ತು ಸುತ್ತಮುತ್ತಲ ಪ್ರದೇಶಗಳ ಕೆಲವರಲ್ಲಿ ಖೋಟಾ ನೋಟುಗಳು ಈಗ್ಗೆ 3-4 ವರ್ಷಗಳಿಂದ ಕಂಡುಬರುತ್ತಿದ್ದವು. ಈಗ ಅದರಲ್ಲೂ ಈರುಳ್ಳಿ ಬೆಲೆ ಗಗನಕ್ಕೇರಿದಾಗ ಈರುಳ್ಳಿ ಮಾರಾಟ ಮಾಡಿದ ರೈತರ ಕೈಗಳ ಮೂಲಕ ಈ ಖೋಟಾ ನೋಟುಗಳು ಹೆಚ್ಚಾಗಿ ನುಸುಳಿಕೊಂಡಿದ್ದು ಕಂಡುಬಂದಿದೆ. ಅಲ್ಲಿಂದೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೂ ಖೋಟಾ ನೋಟುಗಳು ಹೆಚ್ಚಾಗತೊಡಗಿವೆ.
-ಜಿ. ಸೋಮಶೇಖರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

