ಬೆಲೆ ಏರಿಕೆ: ಬಿಜೆಪಿ ಬೃಹತ್ ಪ್ರತಿಭಟನೆ
ಬಳ್ಳಾರಿ: ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆ ಏರಿಕೆ ಕ್ರಮ ಖಂಡಿಸಿ, ಬಿಜೆಪಿ ಮಹಿಳಾ ಮತ್ತು ಯುವಮೋರ್ಚಾ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಸ್ಥಳೀಯ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಗಡಗಿ ಚನ್ನಪ್ಪ ವೃತ್ತದ ಬಳಿ ಸೌದೆಯಿಂದ ಚಹ ಮಾಡಿ ಕುಡಿದು ವಿಶೇಷವಾಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ರಸ್ತೆಯುದ್ದಕ್ಕೂ ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ದಿನಬಳಕೆಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರವನ್ನು ಎರಡು ತಿಂಗಳಿಗೊಮ್ಮೆ ಅವೈಜ್ಞಾನಿಕವಾಗಿ ಏರಿಕೆ ಮಾಡುತ್ತಿರುವುದರಿಂದ ಕೇಂದ್ರ ಸರ್ಕಾರ ಬಡ ಜನರಿಗೆ ತೊಂದರೆಯಾಗಿದೆ. ಅನಿಲ ಬೆಲೆ ಏರಿಕೆಯಿಂದಾಗಿ ಬಡ ಜನತೆ ಕಟ್ಟಿಗೆ ಬಳಕೆಗೆ ಮುಂದಾಗಿದ್ದು, ಕಟ್ಟಿಗೆಗಾಗಿ ಅರಣ್ಯಗಳೇ ನಾಶವಾಗಲಿವೆ. ಈಗಾಗಲೇ ಹತ್ತಾರು ಬಾರಿ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ತನ್ನ ಆಡಳಿತ ವೈಫಲ್ಯ ಎತ್ತಿ ತೋರಿಸುತ್ತಿದೆ. ಈ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್ಡಿಎ ಸರ್ಕಾರದ ವೇಳೆ ವಾಣಿಜ್ಯ ಅನಿಲಕ್ಕೆ 102 ಗಳಷ್ಟಿದ್ದ ಬೆಲೆ ಇಂದು ರು. 1241ಗಳಿಗೆ ಏರಿಕೆಯಾಗಿದೆ. ಆದ್ದರಿಂದ ಕೂಡಲೇ ಎಚ್ಚೆತ್ತುಕೊಂಡು ಜನರ ಮೇಲಾಗುವ ಬೆಲೆ ಏರಿಕೆ ಹೊರೆ ಕಡಿಮೆಗೊಳಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಉಗ್ರ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನತೆ ಬದುಕು ದುಸ್ತರಗೊಳಿಸಿದ ಕೇಂದ್ರ ಯುಪಿಎ ಸರ್ಕಾರವನ್ನು ಮನೆಗೆ ಕಳುಹಿಸಲು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸುವಂತೆ ಕರೆ ನೀಡಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಾರೆಡ್ಡಿ, ನಗರಾಧ್ಯಕ್ಷೆ ಸುಧಾಕರರೆಡ್ಡಿ ಮಾತನಾಡಿ, ಜನಸಾಮಾನ್ಯರು ಬಳಕೆ ಮಾಡುವ ಅಡುಗೆ ಅನಿಲದ ಬೆಲೆಯನ್ನು ಶೀಘ್ರ ಕಡಿಮೆ ಮಾಡಿ ಜನಪರ ಆಡಳಿತ ನೀಡಬೇಕೆಂದು ಒತ್ತಾಯಿಸಿದರು.
ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಹರಿಗೌಡ, ನಗರಾಧ್ಯಕ್ಷ ಕೆ.ಎ. ವೇಮಣ್ಣ, ಕೊಡ್ಲೆ ಮಲ್ಲಿಕಾರ್ಜುನ, ಮಂಜಮ್ಮ, ಶ್ಯಾಂಸುಂದರ್, ರಾಘವೇಂದ್ರ, ಎನ್. ಶ್ರೀದೇವಿ, ಚಾಮುಂಡಿ, ಬಿ. ಗೀತಾ, ಸಂಧ್ಯಾ, ಎಚ್. ಭಾಗ್ಯಲಕ್ಷ್ಮಿ, ಹೇಮಾವತಿ, ಸುಗುಣಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

