ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಕಾರ್ಮಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ
ಬಳ್ಳಾರಿ: ಜಿಲ್ಲೆಯ ಕುಡಿತಿನಿ ಬಳಿಯ ಶಾತವಾಹನ ಕಾರ್ಖಾನೆ ಕಾರ್ಮಿಕರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಒತ್ತಾಯಿಸಿ ನವಕರ್ನಾಟಕ ಯುವಶಕ್ತಿ ಸಂಘಟನೆಯ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಬುಧವಾರ ಕಾರ್ಖಾನೆ ಉಪ ನಿರ್ದೇಶಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
 ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಕ್ಯಾಂಟೀನ್ ವ್ಯವಸ್ಥೆ ಒದಗಿಸಬೇಕು. ಶುದ್ಧ ಕುಡಿಯುವ ನೀರು, ಕಾರ್ಮಿಕರ ಸುರಕ್ಷತೆಗೆ ಮಾಸ್ಕ್, ಹೇರ್ ಪ್ಲೆಕ್ಸ್, ಕೂಲಿಂಗ್ ಗ್ಲಾಸ್, ಸಮವಸ್ತ್ರಗಳನ್ನು ನೀಡಬೇಕು. ಶೌಚಾಲಯ ವ್ಯವಸ್ಥೆ ಮತ್ತು ಕಾರ್ಖಾನೆಯ ಮುಖ್ಯ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದರು. ಸಂಘಟನೆ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್, ಬಿ. ಮಹಾರುದ್ರಗೌಡ, ಚಂದ್ರಶೇಖರ್ ಆಚಾರ್, ರಾಮಚಂದ್ರ ಇದ್ದರು.
ಪದಾಧಿಕಾರಿಗಳ ನೇಮಕ
ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಆರ್. ಚಂದ್ರಶೇಖರ್, ಉಪಾಧ್ಯಕ್ಷರಾಗಿ ಅಶೋಕ್ ದಿನ್ನಿ, ಎಚ್. ಜೀವರತ್ನಮ್ಮ, ಕಾರ್ಯದರ್ಶಿಯಾಗಿ ಮೊಹ್ಮದ್ ರಫಿಕ್, ಜಂಟಿ ಕಾರ್ಯದರ್ಶಿಯಾಗಿ ಜಿ. ಸತ್ಯಮ್ಮ, ಖಜಾಂಚಿಯಾಗಿ ಎಸ್. ಮಲ್ಲನಗೌಡ, ಸಂಘಟನಾ ಕಾರ್ಯದರ್ಶಿಗಳಾಗಿ ಹಾಜಿ ಎಂ.ಡಿ. ಹನೀಫ್, ಸಿ.ಎಸ್. ಕೊಳ್ಳಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಶೀಲಾ ಬಾಯಿ, ಕಾನೂನು ಸಲಹೆಗಾರರಾಗಿ ಹನುಮಂತರೆಡ್ಡಿ, ಲೆಕ್ಕ ಪರಿಶೋಧಕರಾಗಿ ಎಂ. ಹೇಮಾಕ್ಷಿಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಸೋಮಸಮುದ್ರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಈಚೆಗೆ ನೇಮಕ ಮಾಡಲಾಯಿತು. ಸದಸ್ಯರ ವಿವರ ಇಂತಿದೆ: ಗೌರವಾಧ್ಯಕ್ಷರಾಗಿ ತಿಪ್ಪೇಸ್ವಾಮಿ, ಅಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರುಗಳಾಗಿ ಡಿ. ತಿಪ್ಪೇಸ್ವಾಮಿ, ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾಗಿ ಬಿ. ವಿಶ್ವನಾಥ್, ಮಲ್ಲಿಕಾರ್ಜುನ, ಸಂಘಟನಾ ಕಾರ್ಯದರ್ಶಿಗಳಾಗಿ ಎರ್ರಿಸ್ವಾಮಿ, ಕೆ. ವಿಶ್ವನಾಥ್, ಕಾರ್ಯದರ್ಶಿಗಳಾಗಿ ಪರಶುರಾಮ್, ಎಚ್. ಕಾಶೀನಾಥ್, ಖಜಾಂಚಿಯಾಗಿ ಸಣ್ಣಹುಲಿ, ಸಲಹಾ ಸಮಿತಿ ಅಧ್ಯಕ್ಷರಾಗಿ ಆದಿಬಸಪ್ಪ, ಸಲಹಾ ಸಮಿತಿ ಸದಸ್ಯರಾಗಿ ಎಚ್. ಮಂಜುನಾಥ್, ಸದಸ್ಯರಾಗಿ ದೊಡ್ಡಬಸಪ್ಪ, ಲಕ್ಷ್ಮಣ, ತಿಪ್ಪೇಸ್ವಾಮಿ, ಗಣೇಶ, ಮಹೇಶ್, ವಂಡ್ರಪ್ಪ, ಈಶಣ್ಣ, ಈಶ್ವರ, ಕಲ್ಲಪ್ಪ ಇತರರು ನೇಮಕವಾಗಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ತಿಳಿಸಿದ್ದಾರೆ.
ವೇಣಿವೀರಾಪುರ: ರಸ್ತೆ ಸುರಕ್ಷತಾ ಜಾಗೃತಿ ಜಾಥಾ
ಕುರುಗೋಡು: ಪಟ್ಟಣಕ್ಕೆ ಸಮೀಪದ ವೇಣಿವೀರಾಪುರ ಗ್ರಾಮದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಯಿತು.
ಎಸಿಸಿ ಮುಖ್ಯ ವ್ಯವಸ್ಥಾಪಕ ಮಾಣಿಕೇಶ್ವರರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಚಾಲಕರಲ್ಲಿನ ಬೇಜವಾಬ್ದಾರಿ ಹಾಗೂ ಸುರಕ್ಷಿತ ಕ್ರಮ ಅನುಸರಿಸದೆ ವಾಹನ ಓಡಿಸುವುದರಿಂದ ರಸ್ತೆ ಅಪಘಾತಕ್ಕೆ ಕಾರಣವಾಗಿವೆ. ಇದನ್ನು ನಿಯಂತ್ರಿಸಲು ಹಾಗೂ ವಾಹನ ಚಾಲನೆಯಲ್ಲಿ ಸೂಕ್ತ ಕ್ರಮ ಅನುಸರಿಸಲು ಉತ್ತೇಜನ ನೀಡುವ ಉದ್ದೇಶ ಈ ಕಾರ್ಯಕ್ರಮಕ್ಕಿದೆ ಎಂದರು.
ಕಾರ್ಯಕ್ರಮದ ನಿಮಿತ್ತ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಿಎಸ್‌ಆರ್ ವ್ಯವಸ್ಥಾಪಕ ಪೆದ್ದಣ್ಣ, ಶಾಲೆಯ ಮುಖ್ಯಗುರು ಎಂ. ತಿಪ್ಪೇಸ್ವಾಮಿ, ಇಂದಿರಾ ಮಹಿಳಾ ಗ್ರಾಮ ಒಕ್ಕೂಟ ಅಧ್ಯಕ್ಷೆ ಬಿ.ಈ. ಲಕ್ಷ್ಮಿ, ಎಸ್‌ಡಿಎಂಸಿ ಅಧ್ಯಕ್ಷ ಬುಜ್ಜಪ್ಪ ಇದ್ದರು. ಪ್ರಾರಂಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಗ್ರಾಮದ ಮುಖ್ಯ ಬೀದಿಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಜಾಥಾ ನಡೆಯಿತು. ಕಾರ್ಯಕ್ರಮವನ್ನು ಎಸಿಸಿ ಹಾಗೂ ಫೋರ್ಡ್ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದವು. ಫೋರ್ಡ್ ಸಂಸ್ಥೆಯ ಪಿ.ಎಂ. ವಿಜಯಕುಮಾರ್ ಮತ್ತು ರಾಮಪ್ಪ ಕಾರ್ಯಕ್ರಮ ನಿರ್ವಹಿಸಿದರು.
ಪೋಷಕರ ಇಚ್ಛಾಶಕ್ತಿ ಅಗತ್ಯ
ಕೂಡ್ಲಿಗಿ: ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲು ಹಳ್ಳಿಗಳಲ್ಲಿ ಪೋಷಕರ ಇಚ್ಛಾಶಕ್ತಿ ಮತ್ತು ಕಾಳಜಿ ಅಗತ್ಯ ಎಂದು ಗಜಾಪುರ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಗಾಯತ್ರಿ ಮೇಘರಾಜ ಹೇಳಿದರು. ಅವರು ಗುರುವಾರ ಬೆಳಗ್ಗೆ ನಡೆದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಶಾಲೆಗಳ ಜಾಗಗಳನ್ನೆ ಹಳ್ಳಿಗಳಲ್ಲಿ ಪೋಷಕರು ಅಕ್ರಮವಾಗಿ ಕಬಳಿಸುತ್ತಿರುವ ಘಟನೆಗಳನ್ನು ನಾವು ಕಾಣುತ್ತಿದ್ದು, ಶಾಲೆಗೆ ಭೂದಾನ ನೀಡುವ ಮೂಲಕ  ಆದರ್ಶ ಮೆರೆದ ದಾನಿಗಳು ಇಂದು ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದರು. ಮುಖ್ಯಗುರು ಜಿ. ನಾಗಮ್ಮ ಮಾತನಾಡಿ, ಶಿಕ್ಷಕರು ಮತ್ತು ಮಕ್ಕಳ ಬಾಂಧವ್ಯದ ಜತೆಗೆ ಪೋಷಕರು ಕೈ ಜೋಡಿಸಿದರೆ ಹಳ್ಳಿಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ. ಹಳ್ಳಿಗಳಲ್ಲಿ ಪರಸ್ಪರ ಸಹಕಾರ ಮುಖ್ಯ. ಶುಚಿತ್ವ ಕಾಪಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ತಿಳಿಸಿದರು. ಭೀಮಣ್ಣ ಗಜಾಪುರ, ಶಿಕ್ಷಕರಾದ ಬಿ.ಎ. ಜಯಣ್ಣ, ಆರ್. ಅಜ್ಜಯ್ಯ, ಎಚ್. ಕಾಡಪ್ಪ, ಬಿ. ಸುಪ್ರಿಯಾ ಬಣಗಾರ್, ಎಚ್.ಎಂ. ಮಂಗಳಗೌರಮ್ಮ, ಎಚ್. ಹೇಮಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.