ಬಳ್ಳಾರಿ

ಹಳ್ಳಿಗಾಡಿನ ರಸ್ತೆ ದೇವರಿಗೆ ಪ್ರೀತಿ

Published On :

ಹೂವಿನಹಡಗಲಿ: ಸರ್ಕಾರದ ರಸ್ತೆ ಯಾರು ಏನು ಬೇಕಾದರೂ ಮಾಡಬಹುದು, ರಸ್ತೆ ಕಿತ್ತು ಹಾಕಿದವರ ಮೇಲೆ ಯಾವ ಕ್ರಮವಿಲ್ಲ, ಎಷ್ಟು ಬೇಕಾದರೂ ಒತ್ತುವರಿ ಮಾಡಿ. ಇಂತಹದೊಂದು ಆಫರ್‌ನ್ನು ಲೋಕೋಪಯೋಗಿ ಇಲಾಖೆ ನೀಡಿದೆ.
ಹೌದು, ತಾಲೂಕಿನ ಹಳ್ಳಿಗಾಡಿನ ರಸ್ತೆಗಳು ಮಳೆಗಾಲದಲ್ಲಿ ಸಂಪೂರ್ಣ ಕಿತ್ತು ಹೋಗಿದ್ದು, ದೊಡ್ಡ ದೊಡ್ಡ ಕಂದಕಗಳ ನಿರ್ಮಾಣದಿಂದ ರಸ್ತೆ ಸಂಚಾರಕ್ಕೆ ಸಂಚಕಾರ ಬಂದಿದೆ. ರೈತರು ಜಮೀನುಗಳಿಗೆ ಪೈಪ್‌ಲೈನ್ ಹಾಕುವ ವೇಳೆ ರಸ್ತೆ ಅಗೆದು ಹಾಳು ಮಾಡಿದರೂ ಯಾರು ಹೇಳೋರಿಲ್ಲ, ಕೇಳೋರಿಲ್ಲ. ಯಾರು ಏನು ಬೇಕಾದರು ಮಾಡಬಹುದು ಎಂದು ಜನತೆ ಆಡಿಕೊಳ್ಳುತ್ತಿದ್ದಾರೆ.
ತಾಲೂಕಿನ ಮಾಗಳ- ಅಲ್ಲಿಪುರ ರಸ್ತೆಯಲ್ಲಿ ತಿಂಗಳ ಹಿಂದೆ 25-30 ರೈತರು ಪೈಪ್‌ಲೈನ್ ಮಾಡಿದ್ದಾರೆ. ರಸ್ತೆಯಲ್ಲಿ ಪೈಪ್‌ಲೈನ್ ಹಾಕಲು ಲೋಕೋಪಯೋಗಿ ಇಲಾಖೆ ಅನುಮತಿ ಕಡ್ಡಾಯವಾಗಿದ್ದರೂ, ಇದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ. ನಮ್ಮೂರು ರಸ್ತೆ, ನಾವೇಕೆ ಕೇಳಬೇಕು ಎನ್ನುವ ಮಾತು ರೈತರದ್ದು.
ರಸ್ತೆ ಇಕ್ಕೆಲ್ಲಗಳಲ್ಲಿ ಬತ್ತದ ಗದ್ದೆಯ ನೀರು ಬಂದು ಇದ್ದ ಚೂರುಪಾರು ರಸ್ತೆಯೂ ಸಂಪೂರ್ಣ ಕಿತ್ತು ಹೋಗಿದೆ. ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ ಒಂದು ಬಾರಿ ಭೇಟಿ ನೀಡಿಲ್ಲ. ಈ ಕುರಿತು ಮಾಹಿತಿ ಕೇಳಿದಾಗ, ಆಯ್ತು ಬಿಡಿ ಹೋಗಿ ಬರುತ್ತೇವೆ ಎನ್ನುತ್ತಾರೆ. ಮುಂದೆ ಕ್ರಮವೇನು ಎಂದು ಕೇಳಿದರೆ ಮೌನವೆ ಉತ್ತರ.
ತಾಲೂಕಿನ ಬಹುತೇಕ ಹಳ್ಳಿಗಾಡಿನ ರಸ್ತೆ ಸ್ಥಿತಿ ಆ ದೇವರಿಗೆ ಪ್ರೀತಿ, ಕಿತ್ತು ಹೋಗಿರುವ ರಸ್ತೆಯಲ್ಲಿ ಸಂಚಾರ ಮಾಡುವ ಬೈಕ್, ವಾಹನ ಸವಾರರು ನಿತ್ಯ ಕೈ ಕಾಲು ಮುರಿದುಕೊಳ್ಳುವಂತಾಗಿದೆ. ಈ ರಸ್ತೆಗೆ ಹಿಡಿ ಮಣ್ಣು ಹಾಕದಷ್ಟು ಸರ್ಕಾರ ಬಡವಾಗಿದೆಯೇ ಎಂಬುದು ಜನತೆ ಪ್ರಶ್ನೆ.
ಮಾಗಳ- ಅಲ್ಲಿಪುರ ರಸ್ತೆ ರಾಡಿ ರಸ್ತೆಯಾಗಿ ಪರಿವರ್ತನೆಯಾಗಿದ್ದರೂ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಯಾರು ಕ್ರಮ ಕೈಗೊಂಡಿಲ್ಲ. ತಗ್ಗು ಗುಂಡಿಗಳಿಗೆ ತಾತ್ಕಾಲಿಕ ಕಲ್ಲು ಮಣ್ಣು ಹಾಕುವ ಗೋಜಿಗೆ ಇಲಾಖೆ ಮುಂದಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.
ತಾಲೂಕಿನ ಹಿರೇಹಡಗಲಿ- ಮಾಗಳ, ಶಿವಪುರ- ಮಾಗಳ ರಸ್ತೆಯಲ್ಲಿ ರೈತರು ಸಾಕಷ್ಟು ಒತ್ತುವರಿ ಮಾಡಿದ್ದು, ರಸ್ತೆಯನ್ನೆ ಕಿತ್ತು ಹಾಕಿದ್ದಾರೆ. ಜಿಲ್ಲಾ ಮುಖ್ಯ ರಸ್ತೆ ಇಂದು ಹಳ್ಳಿಗಾಡಿನ ರಸ್ತೆಯಂತಾಗಿದೆ. ಈ ಕುರಿತು ಲೋಕೋಪಯೋಗಿ ಅಧಿಕಾರಿಗಳನ್ನು ಮಾತನಾಡಿಸಿದಾಗ, ರಸ್ತೆ ಒತ್ತುವರಿ ತೆರವುಗೊಳಿಸುವ ಗೋಜಿ ತಾವು ಹೋಗುವುದಿಲ್ಲ. ಗ್ರಾಮಸ್ಥರ ಸಹಕಾರ ಇದ್ದರೆ ಮಾತ್ರ ಕೈ ಹಾಕುತ್ತೇವೆ ಎನ್ನುತ್ತಾರೆ.
ಈ ವ್ಯವಸ್ಥೆ ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ರಸ್ತೆಯನ್ನೆ ಕಿತ್ತು ಹಾಕಿ ರೈತರು ಜಮೀನು ಮಾಡಿಕೊಂಡರೂ ಆಶ್ಚರ್ಯ ಪಡಬೇಕಿಲ್ಲ. ಸರ್ಕಾರದ ಇಲಾಖೆಗಳ ವ್ಯವಸ್ಥೆಯೆ ಇಷ್ಟಕ್ಕೆಲ್ಲ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.