ಸಾಂಸ್ಕೃತಿಕ ಉತ್ಸವಕ್ಕೆ ಸಂಭ್ರಮದ ತೆರೆ
ಬಳ್ಳಾರಿ: ಹಂಪಿ ಉತ್ಸವಕ್ಕೆ ಆರಂಭದಲ್ಲಿ ಕೊಂಚ ನಿರುತ್ಸಾಹ ಕಾಣಿಸಿದ್ದರೂ ಎರಡು ಮತ್ತು 3ನೇ ದಿನ ಜನರ ಉತ್ಸವವಾಗಿ ಮಾರ್ಪಟ್ಟಿತ್ತು. ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಕಲಾವಿದರ ಗಾನಸುಧೆ, ಗಜಲ್, ಖವ್ವಾಲಿ, ಸುಗಮ ಸಂಗೀತ, ಫ್ಯೂಜನ್, ನೃತ್ಯ ಸೇರಿದಂತೆ ಸಾಂಪ್ರದಾಯಿಕ ಕಲೆಗಳ ಮೂಲಕ ಗಮನ ಸೆಳೆದ ಹಂಪಿ ಉತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಸಮಾರೋಪ ಭಾಷಣ ಹಾಗೂ ಸುನಿಧಿ ಚೌಹಾಣ್ ಅವರ ಸುಮಧುರ ಕನ್ನಡ, ಹಿಂದಿ ಗೀತೆಗಳ ಗಾಯನದ ಮೂಲಕ ಉತ್ಸವಕ್ಕೆ ತೆರೆಬಿತ್ತು.
ಆರಂಭದ ನಿರುತ್ಸಾಹ, ಅಧಿಕಾರಿಗಳ ಉತ್ಸವ ಎಂಬ ಆರೋಪ, ಅನುದಾನ ಕೊರತೆ ಸೇರಿದಂತೆ ಹಲವು ಅಪಸ್ವರಗಳಿಂದ ಆರಂಭವಾದ ಹಂಪಿ ಉತ್ಸವಕ್ಕೆ ಮೊದಲನೆ ದಿನದಲ್ಲಿ ಮಾತ್ರ ಜನರಿಲ್ಲದೆ ನೀರಸವಾಗಿತ್ತು. ಎರಡು ಮತ್ತು ಮೂರನೇ ದಿನ ಮಾತ್ರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲೆಯ ಮೂವರು ಶಾಸಕರು ಜೈಲಿಗೆ ಹೋಗಿರುವುದು, ಬಳ್ಳಾರಿ ಶಾಸಕ ಅನಿಲ್ ಲಾಡ್ ಅಪಸ್ವರ, ಕಲಾವಿದರ ಅಪಸ್ವರದಿಂದ ಈ ಬಾರಿ ಉತ್ಸವ ಕಳೆಗುಂದಲಿದೆ ಎಂಬುದು ಹುಸಿಯಾಯಿತು. ಉತ್ಸವ ಯಶಸ್ಸಿಗೆ ಜನರು ನಾಂದಿಯಾಡಿದರು.
ವಿಶೇಷ ಕಾರ್ಯಕ್ರಮ: ಕೇಂದ್ರ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸಮಾರೋಪ ಭಾಷಣ ಮಾಡಿ, ಹಿಂದುಳಿದ ಭಾಗವಾದ ಬಳ್ಳಾರಿಯ ಐತಿಹಾಸಿಕ ಹಂಪಿ ಉತ್ಸವ ದೊಡ್ಡ ಕಾರ್ಯಕ್ರಮ, ಅಪರೂಪ, ವಿಶೇಷವಾಗಿದೆ. ಇಷ್ಟು ಜನ ಈ ಭಾಗದಲ್ಲಿ ಸೇರುವುದಿಲ್ಲ ಎಂಬ ಮಾತಿತ್ತು, ಆದರೆ ಇಲ್ಲಿ ಸೇರಿರುವ ಜನಸ್ತೋಮ ನೋಡಿದರೆ ಅವೆಲ್ಲವುಗಳು ಹುಸಿಯಾಗಿವೆ ಎಂದು ಜನಸಾಗರದ ಬಗ್ಗೆ ಕೊಂಡಾಡಿದರು.
ದೊಡ್ಡ ಕೊಡುಗೆ: ಯುಪಿಎ ಸರ್ಕಾರ 371 (ಜೆ) ಕಲಂ ತಿದ್ದುಪಡಿ ತಂದು ಹೈಕ ಭಾಗಕ್ಕೆ ದೊಡ್ಡ ಕೊಡುಗೆ ನೀಡಿದೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ, ಅಭಿವೃದ್ಧಿ, ಶಿಕ್ಷಣದಲ್ಲಿ ಈ ಕಲಂ ಹೆಚ್ಚಿನ ಪಾತ್ರವಹಿಸುತ್ತದೆ. ಇನ್ನು ಹರಿಹರ-ಕೊಟ್ಟೂರು ರೈಲನ್ನು ಮಾರ್ಚ್ ತಿಂಗಳಲ್ಲಿ ಓಡಿಸಲಾಗುತ್ತದೆ. ಬಳ್ಳಾರಿ- ಬೆಂಗಳೂರು ಇಂಟರ್ ಸಿಟಿ ರೈಲು ಓಡಿಸಲು ಮನವಿ ಮಾಡಿದ್ದು, ಶೀಘ್ರದಲ್ಲೇ ಓಡಿಸುವುದು ಕಷ್ಟ. 2-3 ತಿಂಗಳಲ್ಲಿ ಸವಿಸ್ತಾರವಾದ ವರದಿಯನ್ನು ಇಲಾಖೆ ಅಧಿಕಾರಿಗಳಿಂದ ತರಿಸಿ, ಇಂಟರ್‌ಸಿಟಿ ರೈಲು ಓಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ವಸತಿ ಸಚಿವ ಅಂಬರೀಷ್ ಮಾತನಾಡಿ, ಕರ್ನಾಟಕಕ್ಕೆ ಹಲವು ರೀತಿಯ ಹೆಸರುಗಳು ಬರಲು ಬಳ್ಳಾರಿ ಜಿಲ್ಲೆ ಕಾರಣವಾಗಿದೆ ಎಂದು ಪರೋಕ್ಷವಾಗಿ ಗಣಿ ವಿಷಯದಿಂದ ಕರ್ನಾಟಕಕ್ಕೆ ಆಗಿರುವ ಕಳಂಕದೊಂಂದಿಗೆ, ಇಂತಹ ಸಾಮ್ರಾಜ್ಯಗಳಿಂದ ಹೆಸರು ತಂದುಕೊಟ್ಟಿದೆ ಎಂಬ ದಾಟಿಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಳ್ಳಿಯ ಖಡ್ಗ ನೀಡಿ ಗೌರವಿಸಲಾಯಿತು.
ಸಚಿವರಾದ ರೋಷನ್ ಬೇಗ್ ಮಾತನಾಡಿದರು. ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕರಾದ ಈ. ತುಕಾರಾಂ, ಬಿ.ಎಂ. ನಾಗರಾಜ್, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ ಸುರೇಶ್, ಕಾಂಗ್ರೆಸ್ ಮುಖಂಡ ಅಬ್ದುಲ್ ವಹಾಬ್, ಜಿಪಂ ಸದಸ್ಯೆ ಅನಿತಾ, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಜಿಪಂ ಸಿಇಒ ಮಂಜುನಾಥ್ ನಾಯಕ್ ಸೇರಿದಂತೆ ಇತರರು ಇದ್ದರು. ಸಮಾರೋಪ ಕಾರ್ಯಕ್ರಮದಲ್ಲಿ ಸಂಸದೆ ಜೆ. ಶಾಂತಾ, ಶಾಸಕ ಶ್ರೀರಾಮುಲು, ಅನಿಲ್ ಲಾಡ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಮಾಧ್ಯಮದವರಿಗೆ ವ್ಯವಸ್ಥೆ ಮಾಡಿದ ಡಿಸಿ
ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರ ಗ್ಯಾಲರಿಯಲ್ಲಿ ಸಾರ್ವಜನಿಕರು ಕುಳಿತಿದ್ದರಿಂದ ಮಾಧ್ಯಮದವರು ಆಸನಗಳಿಲ್ಲದೆ ಪರದಾಡಿದರು. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದಾಗ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಡಿವೈಎಸ್ಪಿ ರುದ್ರಮುನಿ ಅವರು ಆಗಮಿಸಿ ಮಾಧ್ಯಮ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದ ಆಸನಗಳನ್ನು ತೆರವುಗೊಳಿಸಿ, ಮಾಧ್ಯಮದವರಿಗೆ ವ್ಯವಸ್ಥೆ ಮಾಡಿಕೊಟ್ಟರು. ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಪತ್ರಕರ್ತರು ಗ್ಯಾಲರಿಗೆ ಹೋದಾಗ ಗ್ಯಾಲರಿ ತುಂಬ ಸಾರ್ವಜನಿಕರ ತುಂಬಿದ್ದರು. ಹಾಗಾಗಿ ಕಾರ್ಯಕ್ರಮದ ವರದಿಗೆ ಎಲ್ಲಿ ಕೂಡಬೇಕೆಂದು ಪತ್ರಕರ್ತರು ಪ್ರಶ್ನಿಸಿದರು. ಕೂಡಲೆ ಅಲ್ಲಿಗೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಡಿಸಿ ಸಾರ್ವಜನಿಕರನ್ನು ಅಲ್ಲಿಂದ ಕಳುಹಿಸಿ ಆಸನದ ವ್ಯವಸ್ಥೆ ಮಾಡಿದರು.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

