ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಕೋಳಿ ಪಂದ್ಯ: 10 ಸೆರೆ
ಬಳ್ಳಾರಿ: ಕೋಳಿ ಪಂದ್ಯಾವಾಡುತ್ತಿದ್ದವರ ಮೇಲೆ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ಮಾಡಿ, 10 ಜನರನ್ನು ಬಂಧಿಸಿ, ಅವರಿಂದ ರು. 3900 ನಗದು ಹಾಗೂ ಎರಡು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಹವಂಭಾವಿ ಸಮೀಪದ ಎಸಿ ಫಂಕ್ಷನ್ ಹಾಲ್‌ನ ಎದುರುಗಡೆ ಕೋಳಿ ಪಂದ್ಯಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಗ್ರಾಮೀಣ ಪಿಎಸ್‌ಐ ಹೊಸಕೇರಪ್ಪ, ಕ್ರೈಂ ಪಿಎಸ್‌ಐ ಷಣ್ಮುಖಪ್ಪ ದಾಳಿ ಮಾಡಿದ್ದಾರೆ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ಬಳ್ಳಾರಿ: ತಾಲೂಕಿನ ತಿರುಮಲ ಬಿ ಕ್ಯಾಂಪಿನಲ್ಲಿ ಸಮೀಪದ ಎಚ್‌ಎಲ್ 15ನೇ ಉಪ ಕಾಲುವೆಯಲ್ಲಿ ಅಪರಿಚಿತ ಯುವಕನೋರ್ವನ ಶವ ಪತ್ತೆಯಾಗಿದೆ. ಶವ ಪೂರ್ತಿ ಕೊಳೆತ ಸ್ಥಿತಿಯಲ್ಲಿದ್ದು, ಅಂದಾಜು 25ರಿಂದ 30 ವರ್ಷ ವಯಸ್ಸಿನವನಾಗಿದ್ದಾನೆ. ಜಾಕಿ ಕಂಪನಿ ಚಡ್ಡಿ ಹಾಕಿಕೊಂಡಿದ್ದಾನೆ. ಮಂಗಳವಾರ ಬೆಳಗ್ಗೆ 7.30ಕ್ಕೆ ಮೃತ ದೇಹ ಎಚ್‌ಎಲ್ 15ನೇ ಉಪ ಕಾಲುವೆಯ 8.5 ಕಿ.ಮೀ. ನಲ್ಲಿ ಕಂಡುಬಂದಿತ್ತು. ಆತನ ಸಂಬಂಧಿಕರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಮೃತದೇಹವನ್ನು ವಿಮ್ಸ್‌ನ ಶವಗಾರದಲ್ಲಿ ಇಟ್ಟಿದ್ದು, ಈ ಬಗ್ಗೆ ಮಾಹಿತಿಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ದೂ. 08392-276461ಗೆ ಸಂಪರ್ಕಿಸಬಹುದು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೌವ್ ಸಿಡಿದು ವ್ಯಕ್ತಿ ಸಾವು
ಬಳ್ಳಾರಿ: ಸ್ಟೌವ್ ಸಿಡಿದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಇಲ್ಲಿನ ಬಳ್ಳಾರಪ್ಪ ಕಾಲೋನಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಉರುಕುಂದಪ್ಪ (36) ಎಂದು ಗುರುತಿಸಲಾಗಿದೆ. ಈತನು ತನ್ನ ಪತ್ನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಕಳೆದ ಜ. 6ರಂದು ಅಡುಗೆ ಮಾಡಲು ಹೋಗಿ ಸ್ಟೌವ್‌ಗೆ ಹೆಚ್ಚು ಪಂಪ್ ಹೊಡೆದ ಪರಿಣಾಮ ಬೆಂಕಿ ಹೊತ್ತಿಸಿದಾಗ ಸ್ಟೌವ್ ಸಿಡಿದಿದೆ. ಹೀಗಾಗಿ ಮುಖ ಮತ್ತು ದೇಹದ ಎಲ್ಲೆಡೆ ಸುಟ್ಟ ಗಾಯಗಳಾಗಿದ್ದವು. ಚಿಕಿತ್ಸೆಗೆಂದು ವಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾನೆ. ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಓರ್ವ ಸಾವು
ಬಳ್ಳಾರಿ: ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋಗಿ ನಡೆದಿದೆ. ಮೃತ ಯುವಕನನ್ನು ಎಲ್.ವಿ . ಯೋಗೀಶ್ (19) ಎಂದು ಗುರುತಿಸಲಾಗಿದೆ. ಇಟ್ಟಗಿ ಠಾಣೆ ವ್ಯಾಪ್ತಿಯ ಸೋಗಿ ಗ್ರಾಮದ ಸಮೀಪ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಯುವಕನಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಚಾಲಕನಿಗೆ ಗಾಯಗಳಾಗಿವೆ. ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿ ಅವಘಡ: ರು. 5 ಲಕ್ಷಕ್ಕೂ ಅಧಿಕ ನಷ್ಟ
ಕೂಡ್ಲಿಗಿ: ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಕಣದಲ್ಲಿದ್ದ ಮೇವು, ದವಸ, ಧಾನ್ಯ, ಕೃಷಿ ಸಲಕರಣೆಗಳು ಸುಟ್ಟಿರುವ ಘಟನೆ ತಾಲೂಕಿನ ತಾಯಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ತಾಯಕನಹಳ್ಳಿಯ ಕಣದಾಗಳ ಕೆಂಚಲಿಂಗಪ್ಪ, ಬಡಜ್ಜಿ ತಿಪ್ಪೇಸ್ವಾಮಿ ಎಂಬುವವರ ಕಣಗಳಿಗೆ ಬೆಂಕಿ ಕಾಣಿಸಿಕೊಂಡು. ಇವರಲ್ಲದೆ ಬಡಜ್ಜಿ ಶೇಖರಪ್ಪ, ಬಡಜ್ಜಿ ಜಯಣ್ಣ, ಚಲವಾದಿ ತಿಪ್ಪೇಸ್ವಾಮಿಗೆ ಸೇರಿದ್ದ ಸುಮಾರು ಐವತ್ತು ಚಕ್ಕಡಿ ಗಾಡಿಯಷ್ಟು ಮೇವು, ಕೆಂಚಲಿಂಗಪ್ಪನವರ ಹತ್ತು ಚೀಲ ರಾಗಿ ದಾಸ್ತಾನು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದೆ. ಕೆಂಚಲಿಂಗಪ್ಪನವರ ಕಣದಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಗ್ರಾಮಸ್ಥರು ಸಾಹಸಪಟ್ಟರೂ ಸಾಧ್ಯವಾಗದಾಯಿತು. ಬೆಂಕಿಯ ಜ್ವಾಲೆ ಹೆಚ್ಚಾಗಿದ್ದರಿಂದ ಪಕ್ಕದಲ್ಲಿದ್ದ ಮತ್ತೊಂದು ಕಣಕ್ಕೆ ಬೆಂಕಿ ವ್ಯಾಪಿಸಿ ಅಪಾರ ನಷ್ಟ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮತ್ತು ಕೂಡ್ಲಿಗಿಯಿಂದ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ಮೈಲಾರಪ್ಪ, ಕೂಡ್ಲಿಗಿ ಕರಸ್ತಾಲಪ್ಪ ಸೇರಿ ಅನೇಕ ಸಿಬ್ಬಂದಿ ಶ್ರಮಿಸಿದರು. ಸುಮಾರು ಐದಾರು ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದರು.
ದಿಗಿಲುಗೊಂಡ ರೈತರು: ಸತತ ಬರಗಾಲದ ದವಡೆಯಲ್ಲಿ ಸಿಲುಕಿ ಹೊದ್ದಾಡುತ್ತಿದ್ದ ರೈತರಿಗೆ ಈ ಬೆಂಕಿ ಅನಾಹುತದಿಂದಾಗಿ ದನಕರುಗಳಿಗಿದ್ದ ಮೇವು ಸುಟ್ಟಿದೆ. ಈ ಸಂಕಷ್ಟಕ್ಕೆ ಸಿಲುಕಿ ರೈತರು ದಿಗಿಲುಗೊಂಡಿದ್ದಾರೆ. ಮೇವಿನ ಕೊರತೆಯಿಂದಾಗಿ ಜಾನುವಾರುಗಳ ಮೂಕರೋದನೆ ರೈತಾಪಿ ವರ್ಗಕ್ಕೆ ಆತಂಕ ತಂದಿದೆ. ಬೆಂಕಿಯಿಂದ ನಮ್ಮ ಕಣದಲ್ಲಿದ್ದ ಎಲ್ಲ ಮೇವು ಸುಟ್ಟು ಹೋಗಿದೆ. ಮನುಷ್ಯರು ಹೇಗೊ ಬದುಕಬಹುದು. ದನಗಳ ಮೇವಿನ ಗತಿ ಹೇಗೆ ಎಂದು ಚಲವಾದಿ ತಿಪ್ಪೇಸ್ವಾಮಿ ಕಣ್ಣೀರು ಹಾಕುತ್ತ ಅಳಲು ತೋಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.