ಅನುದಾನ ಖರ್ಚಾದ್ರೂ ರಸ್ತೆಗಿಲ್ಲ ಡಾಂಬರ್!
ವಾರ್ತೆ, ಬಳ್ಳಾರಿ, ಜ. 14
ಕಳಪೆ ರಸ್ತೆ, ಕಟ್ಟಡ ಕಾಮಗಾರಿ ಮಾಡಿರುವುದನ್ನು ನೀವು ನೋಡಿರುತ್ತೀರಿ, ಆದರೆ ಇಲ್ಲೊಂದು ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ, ಅನುದಾನ ಖರ್ಚಾಗಿದ್ದರೂ ರಸ್ತೆ ಕಾಮಗಾರಿ ಮಾತ್ರ ನಡೆದಿಲ್ಲ.
ಇದು ಆಶ್ಚರ್ಯವಾದರೂ ಸತ್ಯ. ಆದರೆ ಮಹಾನಗರ ಪಾಲಿಕೆ ಅಭಿವೃದ್ಧಿ ಪಟ್ಟಿಯಲ್ಲಿ ಮಾತ್ರ ರಸ್ತೆ ಕಾಮಗಾರಿ ಮುಗಿದಿದ್ದು, ಶೇ. 100ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ನಮೂದಿಸುವ ಮೂಲಕ ಸಾರ್ವಜನಿಕರ ಆಶ್ಚರ್ಯಕ್ಕೆ ಕಾರಣವಾಗಿದೆ. ಕಾಮಗಾರಿಗೆ ಬಿಡುಗಡೆಯಾದ ಹಣ ಮಾತ್ರ ಎಲ್ಲಿಗೆ ಹೋಗಿದೆ ಎಂಬುದು ಗೊತ್ತಿಲ್ಲ.
ಇಂತಹ ಘಟನೆ ನಡೆದಿರುವುದು ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಕಪ್ಪಗಲ್ ರಸ್ತೆಯ ಎಡಭಾಗದ 6ನೇ ಲಿಂಕ್ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ. ಮುಖ್ಯ ರಸ್ತೆ ಹಾಗೂ ಎಲ್ಲ ಲಿಂಕ್ ರಸ್ತೆ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಮುಂದಾಗಿತ್ತು. ಅದರಂತೆ ಲಿಂಕ್ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಆದರೆ 6ನೇ ಕ್ರಾಸ್ ಎಡಬದಿ ಲಿಂಕ್ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ. ಕಾಮಗಾರಿ ನಡೆದಾಗ ಅಧಿಕಾರಿಗಳನ್ನು ಕೇಳಿದರೆ, ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ, ಕಾಮಗಾರಿ ಮುಗಿದಾಗ ಅನುದಾನ ಬರಬೇಕು, ಅನುದಾನ ಬಂದ ನಂತರ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರಂತೆ. ಆದರೆ ಪಾಲಿಕೆಯ ಕಾಮಗಾರಿ ಪ್ರಗತಿ ವರದಿಯಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ ಎಂದು ನಮೂದಿಸಿದೆ.
ರು. 28 ಲಕ್ಷ ಖರ್ಚು: ಎಸ್ಎಫ್ಸಿ ಯೋಜನೆಯಡಿ ಪಾಲಿಕೆ ವತಿಯಿಂದ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪಾಲಿಕೆ ಮುಂದಾಗಿತ್ತು. ಆ ಪೈಕಿ ಬಳ್ಳಾರಿ ನಗರದ 21 ಮತ್ತು 22ನೇ ವಾರ್ಡಿನ ಕಪ್ಪಗಲ್ ರಸ್ತೆ 5 ಮತ್ತು 6ನೇ ಕ್ರಾಸ್ ಎಡಭಾಗ ಹಾಗೂ 4 ಮತ್ತು 5ನೇ ಕ್ರಾಸ್ ಬಲ ಭಾಗದ ರಸ್ತೆಗಳ ಡಾಂಬರೀಕರಣದ ಕಾಮಗಾರಿಯೂ ಒಂದು. ಕಾಮಗಾರಿಗೆ ರು. 28.66 ಲಕ್ಷ ಅಂದಾಜು ವೆಚ್ಚ ನಿಗದಿಯಾಗಿತ್ತು. ಅದರಲ್ಲಿ ಬಿಡುಗಡೆಯಾದ ಅನುದಾನ ರು. 21.50 ಲಕ್ಷ. ಖರ್ಚಾದ ಹಣ ರು. 28.66 ಲಕ್ಷ, ಇನ್ನು ಬಿಡುಗಡೆಯಾಗಬೇಕಾದ ಅನುದಾನ ರು. 7.17 ಲಕ್ಷ. ಆದರೆ 2013ರ ಜೂನ್ನಲ್ಲೆ ಶೇ. 100ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಪಾಲಿಕೆಯ ಕಾಮಗಾರಿಗಳ ಪ್ರಗತಿ ವರದಿಯಲ್ಲಿ ತಿಳಿಸಲಾಗಿದೆ.
ಡಾಂಬರ್ ಇಲ್ಲ: ಕೈಗತ್ತಿಕೊಂಡಿರುವ ನಾಲ್ಕು ರಸ್ತೆ ಕಾಮಗಾರಿಗಳಲ್ಲಿ ಉಳಿದ ಕಾಮಗಾರಿಗಳನ್ನು ಮುಗಿಸಲಾಗಿದೆ. ಆದರೆ ಕಪ್ಪಗಲ್ ರಸ್ತೆಯ 6ನೇ ಕ್ರಾಸ್ ಎಡಭಾಗದ ಕಾಮಗಾರಿ ಆರಂಭವಾಗಿಲ್ಲ. ಕಾಮಗಾರಿ ಪ್ರಗತಿ ಹಂತದಲ್ಲಿರುವುದರಿಂದ ಇಂದಲ್ಲ ನಾಳೆ, ರಸ್ತೆ ಡಾಂಬರೀಕರಣ ಮಾಡುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಅಲ್ಲಿನ ಜನರು ಇದ್ದಾರೆ. ಆದರೆ ಎಲ್ಲ ಕಾಮಗಾರಿಗಳು ಮುಗಿದರೂ ತಮ್ಮ ಲಿಂಕ್ ರಸ್ತೆ ಅಭಿವೃದ್ಧಿಪಡಿಸಿಲ್ಲ ಎಂಬುದು ನಂತರ ಗೊತ್ತಾಗಿ, ಪರಿಶೀಲನೆಗೆ ಮುಂದಾಗಿದ್ದಾರೆ. ಆಗ ಪ್ರಗತಿ ಪರಿಶೀಲನೆ ವರದಿಯಲ್ಲಿ ಕಾಮಗಾರಿ ಪೂರ್ಣಗೊಂಡಿರುವುದನ್ನು ನೋಡಿ ಅಚ್ಚರಿಗೊಂಡಿದ್ದಾರೆ.
ತಮ್ಮ ಭಾಗದ ಲಿಂಕ್ ರಸ್ತೆ ಅಭಿವೃದ್ಧಿಗಾಗಿ ಅಲ್ಲಿನ ಜನರು ಅಧಿಕಾರಿಗಳನ್ನು ಸಂಪರ್ಕಿಸಿದರೆ, ಅನುದಾನ ಇಲ್ಲ, ಅನುದಾನ ಬಂದ ಮೇಲೆ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ವಿಚಿತ್ರ ಎಂದರೆ ಪ್ರಗತಿ ವರದಿಯಲ್ಲಿ ಕಾಮಗಾರಿ ಮುಕ್ತಾಯವಾಗಿದೆ ಎಂದು ನಮೂದಿಸಲಾಗಿದೆ. ಇನ್ನೆಲ್ಲಿಂದ ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡುತ್ತಾರೆ ಎಂಬ ಪ್ರಶ್ನೆ ಸ್ಥಳೀಯ ನಿವಾಸಿಗಳದ್ದು. ಪಾಲಿಕೆ ಆಯುಕ್ತ ಚಿಕ್ಕಣ್ಣ ಮಾತನಾಡಿ, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಂಪೂರ್ಣ ಮಾಹಿತಿ ನೀಡುವುದಾಗಿ ಹೇಳುತ್ತಾರೆ.
ರಸ್ತೆಗಾಗಿ ಅನುದಾನ ಬಿಡುಗಡೆಯಾಗಿ ಅನುದಾನವೂ ಖರ್ಚಾಗಿದೆ. ಆದರೆ ಡಾಂಬರ್ ರಸ್ತೆ ಮಾತ್ರ ನಿರ್ಮಾಣವಾಗಿಲ್ಲ. ಹಾಗಾದರೆ ಹಣ ಎಲ್ಲಿಗೆ ಹೋಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಇಂತಹ ಕಾಗದದ ಮೇಲಿನ ಅಭಿವೃದ್ಧಿ ಎಷ್ಟಾದರೂ ಏನು ಉಪಯೋಗ ಎಂಬ ಪ್ರಶ್ನೆ ಸ್ಥಳೀಯರದ್ದಾಗಿದೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

