ಬಳ್ಳಾರಿ ಜಿಲ್ಲಾ ಜೆಡಿಎಸ್‌ಗೆ ನೂತನ ಸಾರಥಿ ಆಯ್ಕೆ
-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 16
ಬಳ್ಳಾರಿ ಗ್ರಾಮೀಣ ಉಪ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ನಾಯಕರು ತೆಗೆದುಕೊಂಡು ಕೆಲ ನಿರ್ಧಾರಗಳು ಜಿಲ್ಲಾ ಜೆಡಿಎಸ್‌ಗೆ ಮುಳುವಾಗಿದ್ದವು. ಜತೆಗೆ ಕೆಲ ದಿನಗಳ ಹಿಂದೆಯಷ್ಟೆ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎನ್. ಸೂರ್ಯನಾರಾಯಣ ರೆಡ್ಡಿ ರಾಜಿನಾಮೆ ನೀಡಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಯಾರು ಮಾಡುತ್ತಾರೆ? ಜಿಲ್ಲಾಧ್ಯಕ್ಷ ಸ್ಥಾನ ಯಾರು ಅಲಂಕಾರಿಸುತ್ತಾರೆ ಎಂಬ ಕುತೂಹಲವಿತ್ತು. ಇದೀಗ ಜೆಡಿಎಸ್‌ಗೆ ನೂತನ ಸಾರಥಿಯಾಗಿ ಕುಡಿತಿನಿ ವಿ. ಶ್ರೀನಿವಾಸ್ ಆಯ್ಕೆಯಾಗಿ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಗುರುವಾರ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಗಾಯತ್ರಿ ವಿಹಾರದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕೃಷ್ಣಪ್ಪ ಅವರು ಜೆಡಿಎಸ್‌ನ ಕಾರ್ಯಕರ್ತ, ನಾಲ್ಕೈದು ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ರೆಡ್ಡಿ ಸಹೋದರರು ಹಾಗೂ ಜೆಡಿಎಸ್ ಮಧ್ಯೆ ನಡೆದ ಗಲಾಟೆಯಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿದ್ದ ಕುಡಿತಿನಿ ವಿ. ಶ್ರೀನಿವಾಸ್ ಅವರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಮಾಡಲು ಮುಂದಾಗಿದ್ದಾರೆ.
ತಪ್ಪು ನಿರ್ಧಾರಗಳು: ಬಳ್ಳಾರಿ ಜಿಲ್ಲೆ ಮಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧೆ ನೀಡುವಲ್ಲಿ ಜೆಡಿಎಸ್ ಪ್ರಮುಖ ಪಾತ್ರವಹಿಸಿತ್ತು. ಆದರೆ ಬಳ್ಳಾರಿ ಗ್ರಾಮೀಣ ಉಪ ಚುನಾವಣೆ ಸಂದರ್ಭದಲ್ಲಿ ಪಕ್ಷ ತೆಗೆದುಕೊಂಡಿದ್ದ ಅಭ್ಯರ್ಥಿ ಕಣಕ್ಕಿಳಿಸದಿರುವುದು, ಶ್ರೀರಾಮುಲುಗೆ ಪರೋಕ್ಷವಾಗಿ ಬೆಂಬಲಿಸಿದ್ದು ಪಕ್ಷದ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಬೇಸರಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರಲು ಕಾರಣವಾಗಿತ್ತು. ನಂತರ ವಿಧಾನಸಭಾ ಚುನಾವಣೆಯ ಕೆಲ ನಿರ್ಧಾರಗಳು ಕೂಡ ಪಕ್ಷದ ಸಂಘಟನೆಗೆ ಹಿನ್ನಡೆಯಾದವು ಎಂಬುದು ಆ ಪಕ್ಷದ ಕಾರ್ಯಕರ್ತರ ಮಾತು. ವಿಧಾನಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಭೀಮಾನಾಯ್ಕ ಗೆಲವು ಸಾಧಿಸಿರುವುದು ಪಕ್ಷಕ್ಕೆ ಜಿಲ್ಲೆಯಲ್ಲಿ ಕೊಂಚ ವರ್ಚಸ್ಸು ತಂದುಕೊಡುವಂತಾಗಿತ್ತು. ಆದರೆ ಇತ್ತೀಚೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎನ್. ಸೂರ್ಯನಾರಾಯಣ ರೆಡ್ಡಿ ರಾಜಿನಾಮೆ ನೀಡಿದ್ದರಿಂದ ಪಕ್ಷದ ಗತಿಯೇನು ಎಂಬ ಪರಿಸ್ಥಿತಿ ಇತ್ತು. ಯಾರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು, ಯಾರು ಜಿಲ್ಲಾಧ್ಯಕ್ಷರಾದರೆ ಹಲವು ಸಮಸ್ಯೆಗಳ ಮಧ್ಯೆ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗುತ್ತದೆ ಎಂಬ ಚಿಂತನೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಲ್ಲಿದ್ದವು. ಇಂತಹ ಸಮಸ್ಯೆಗೆ ಇದೀಗ ತೆರೆ ಎಳೆದಿದ್ದಾರೆ.
ಹೊಸ ಅಧ್ಯಕ್ಷರಿಗೆ ಸವಾಲು: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಈ ಹಿಂದಿನ ಪಕ್ಷದ ಕೆಲ ನಿರ್ಧಾರಗಳಿಂದ ಉಂಟಾದ ಸಮಸ್ಯೆಗಳನ್ನು ದೂರ ಮಾಡಿ, ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುವುದು ಅಗತ್ಯವಾಗಿದೆ. ಪಕ್ಷದ ಪ್ರಬಲ ಮುಖಂಡ ಸೂರ್ಯನಾರಾಯಣ ರೆಡ್ಡಿ ಹಿಂಬಾಲಕರು ರೆಡ್ಡಿ ನಡೆ ಅನುಸರಿಸುವುದರಿಂದ ಪಕ್ಷಕ್ಕೆ ಆಗುವ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವ ಜವಾಬ್ದಾರಿ ಇದೆ. ಆರ್ಥಿಕ, ಸಂಘಟನಾತ್ಮಕವಾಗಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಎಸ್ಸಾರ್, ಬಿಜೆಪಿಗೆ ಸ್ಪರ್ಧೆಯೊಡ್ಡುವ ಸಂಘಟನೆಯನ್ನು ಮಾಡಲೇಬೇಕಾಗಿದೆ. ಹೀಗೆ ಹತ್ತಾರು ಸವಾಲುಗಳು ನೂತನ ಅಧ್ಯಕ್ಷ ಶ್ರೀನಿವಾಸ್ ಮುಂದೆ ಇವೆ. ಎಲ್ಲವನ್ನೂ ಎದುರಿಸಿ ಪಕ್ಷ ಸಂಘಟಿಸುವ ಕಾರ್ಯ ಇವರ ಮೇಲಿದೆ. ತಮಗೆ ನೀಡಿದ ಜವಾಬ್ದಾರಿಯನ್ನು ಶ್ರೀನಿವಾಸ್ ಹೇಗೆ ನಿರ್ವಹಿಸುತ್ತಾರೆ ಎಂಬುದು ಪ್ರಶ್ನಾರ್ಥಕ.
ಜೆಡಿಎಸ್ ಮುಖಂಡ ಮುಂಡ್ರಿಗಿ ನಾಗರಾಜ್, ಮಧುಸೂದನ್, ಮೀನಳ್ಳಿ ತಾಯಣ್ಣ, ಮೀನಳ್ಳಿ ಚಂದ್ರಶೇಖರ್, ಸೋಮಲಿಂಗನಗೌಡ, ಕಗ್ಗಲ್ ವೀರೇಶಪ್ಪ, ಹಗರಿಬೊಮ್ಮನಹಳ್ಳಿ ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ, ಚಾಗನೂರು ನಾಗರಾಜ್, ಇಬ್ರಾಹಿಂಪುರ ಯಲ್ಲಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

