ಬಳ್ಳಾರಿ

ಅಧಿಕಾರಿಗಳ ಕಾರ್ಯವೈಖರಿಗೆ ಸದಸ್ಯರ ಆಕ್ರೋಶ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜ. 16
ಬೇಸಿಗೆ ಆರಂಭದಲ್ಲೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಸಂಬಂಧಿಸಿದ ಜೆಇಗಳಿಗೆ ಫೋನ್ ಮಾಡಿದರೆ ಕ್ಯಾರೆ ಎನ್ನುತ್ತಿಲ್ಲ. ತಾವು ತಾಪಂ ಸದಸ್ಯರೆಂಬ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗೆ ಇಲ್ಲದಂತಾಗಿದೆ. ಕಾಮಗಾರಿಗಳ ಆಯ್ಕೆ ಜಿಲ್ಲಾ ಮಟ್ಟದ ಸಿಇಒ, ಡಿಸಿ ಅಧ್ಯಕ್ಷತೆಯಲ್ಲೆ ಆಯ್ಕೆಗೊಳಿಸುವುದು. ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿನ ವಸತಿ ಯೋಜನೆ ಕುರಿತು ಬೇರೆ ತಾಲೂಕಿನಲ್ಲಿ ಸಭೆ ನಡೆಸುವುದು ಯಾವ ನ್ಯಾಯ?
ಈ ರೀತಿಯ ಆಕ್ರೋಶ ಕೇಳಿಬಂದಿದ್ದು ಕೂಡ್ಲಿಗಿ ತಾಪಂ ಸಾಮಾನ್ಯ ಸಭೆಯಲ್ಲಿ. ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಅದು. ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳ ಕಿವಿ ಮೇಲೆ ಹೂವು ಇಡುತ್ತಾರೆ. ಕೆಲವರು ಅನುಪಾಲನಾ ವರದಿ ನೀಡುವುದಿಲ್ಲ. ಇಂಥ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಶಿವಪ್ಪ ಅವರಿಗೆ ಸದಸ್ಯ ಮಂಜುನಾಥ, ಗುರುಪ್ರಸಾದ್ ಒತ್ತಾಯಿಸಿದರು.
ನಾವೇಕೆ ಇರಬೇಕು: ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಎಸ್‌ಇಪಿಯ ರು. 85 ಲಕ್ಷ ಮತ್ತು ಟಿಎಸ್‌ಪಿಯ ರು. 1 ಕೋಟಿ ಅನುದಾನ ತಾಲೂಕಿನ ಎಲ್ಲ ಹಳ್ಳಿಗಳ ಎಸ್ಸಿ, ಎಸ್ಟಿ ಕಾಲೋನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಬಳಕೆಯಾಗಬೇಕು. ಆದರೆ, ಡಿಸಿ ಅಧ್ಯಕ್ಷತೆಯಲ್ಲಿ ಇಲ್ಲಿನ ಕಾಮಗಾರಿ ಆಯ್ಕೆ ಮಾಡಬೇಕೆಂಬ ಆದೇಶ ಇರುವುದಾದರೆ ಜನಪ್ರತಿನಿಧಿಗಳಾದ ನಾವೇಕೆ ಇರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್.ಎಂ. ಮೂರ್ತಿ ಅವರನ್ನು ಕೆಲ ಸದಸ್ಯರು ತರಾಟೆ ತೆಗೆದುಕೊಂಡರು.
ತಾಲೂಕಿನ ಮಂಗಾಪುರದಲ್ಲಿ ಹದಿಮೂರು ಸೇರಿ ಒಟ್ಟು 73 ಗಂಗಾಕಲ್ಯಾಣ ಕೊಳವೆಬಾವಿಗಳು ದುರುಪಯೋಗವಾಗಿವೆ. ಅಲ್ಲದೆ, ಎರಡ್ಮೂರು ಸಭೆಗಳಿಗೆ ಅಧಿಕಾರಿಯೇ ಗೈರಾಗಿದ್ದಾರೆ ಎಂದು ಸದಸ್ಯ ಎ.ಎಂ. ಗುರುಪ್ರಸಾದ್ ಎಸ್ಸಿ, ಎಸ್ಟಿ ತಾಲೂಕು ಅಧಿಕಾರಿ ಪಾಟೀಲ್ ವಿರುದ್ಧ ಹರಿಹಾಯ್ದರು. ಇದಕ್ಕೆ ಉತ್ತರಿಸಿದ ಪಾಟೀಲ್, ಕೋರ್ ಮತ್ತು ಜಿಲ್ಲಾ ಮಟ್ಟದ ಕೆಲಸದ ನಿಮಿತ್ತ ಸಭೆಗೆ ಹಾಜರಾಗಲಿಲ್ಲ. ಎಲ್ಲ ಕಡೆ ಬೋರ್ ಕೊರೆಸಲಾಗಿದೆ. ಬೇಕಾದ್ರೆ ತಾಲೂಕು ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿ ಎಂದರು.
ತಾಪಂ ಅಧ್ಯಕ್ಷೆ ಮಂಗಳಮ್ಮ ಚಿನ್ನಾಪುರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪೂಜಾರಹಳ್ಳಿ ಎಚ್. ಮಹೇಶ್, ಇಒ ಶಿವಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಬೆಣ್ಣೆ ಕೊಟ್ರೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಸಭೆಯಲ್ಲಿ ಹಾಜರಿದ್ದರು.


ಸಭೆ ನಡೆಸಿದರೇನು ಪ್ರಯೋಜನ?
ಅಧಿಕಾರಿಗಳ ಉದಾಸೀನತೆ, ಹಳೆ ಕಟ್ಟಡ ತೆರವುಗೊಳಿಸಲು ಕ್ರಮ ಕೈಗೊಳ್ಳದ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಸದಸ್ಯರು, ಸಭೆ ನಡೆಸದಂತೆ ದೂರವೆ ಉಳಿದ ಪ್ರಸಂಗ ಗುರುವಾರ ನಡೆಯಿತು. ಅದಕ್ಕಾಗಿ ಅಧ್ಯಕ್ಷ, ಉಪಾಧ್ಯಕ್ಷರ ಕಚೇರಿಯಲ್ಲಿ ಸಭೆ ನಡೆಸಿ ಅಧಿಕಾರಿಗಳು ಮನವೊಲಿಸಲು ಯತ್ನಿಸಿದಾಗ ಸಭೆ ನಡೆಸಿದರೇನು ಪ್ರಯೋಜನ? ಸುಮ್ನೆ ಹೋಗ್ರಿ ಎಂಬ ಉತ್ತರ ಎಲ್ಲಾ ಸದಸ್ಯರಿಂದ ವ್ಯಕ್ತವಾಯಿತು. ಆಗ ಯೋಜನಾಧಿಕಾರಿ, ಈ ಸಭೆಯಲ್ಲಿ ಎಲ್ಲ ಕಾರ್ಯಕ್ರಮಗಳಿಗೆ ಅನುಮೋದನೆ ಸಿಕ್ಕರೆ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯ ಎಂದರು. ಈಗಾಗಲೆ ಇಲಾಖೆಯಿಂದ ಒಪ್ಪಿಗೆ ಸಿಕ್ಕಿದೆ. ಯಾವ ಏಜೆನ್ಸಿಗೆ ತೆರವು ಮತ್ತು ನೂತನ ಕಟ್ಟಡ ನಿರ್ಮಾಣ ಕಾರ್ಯ ನೀಡುವ ಕುರಿತು ಈ ಸಭೆ ನಿರ್ಣಯಿಸಬೇಕು. 13ನೇ ಹಣಕಾಸು ಯೋಜನೆಯಲ್ಲಿ ರು. 1.41 ಲಕ್ಷ, ನಿಧಿ 3 ರಲ್ಲಿ ರು. 60 ಲಕ್ಷ ಹಾಗೂ ತಾಪಂ ಸಂಯುಕ್ತ ಅನುದಾನದಲ್ಲಿ ರು. 1 ಕೋಟಿ ಲಭ್ಯವಿದ್ದರಿಂದ ಹಳೆ ಕಟ್ಟಡ ನೆಲಸಮ, ನೂತನ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.